ಮುಂಡಗೋಡ: ರಾಜ್ಯ ಸರ್ಕಾರದ ಆಡಳಿತ ವೈಫಲ್ಯ ಹಾಗೂ ಆಶ್ರಯ ಯೋಜನೆ ಅಡಿಯಲ್ಲಿ ಅವ್ಯವಹಾರ ಖಂಡಿಸಿ, ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಶುಕ್ರವಾರ ಬಿಜೆಪಿ ಮುಂಡಗೋಡ ಮಂಡಲದವರು ಚೌಡಳ್ಳಿ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿ, ರಾಜ್ಯಪಾಲರಿಗೆ ಮನವಿ ರವಾನಿಸಿದರು.
ಕೇಂದ್ರ ಸರ್ಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸಿ ಸಾರ್ವಜನಿಕರಿಗೆ ತಲುಪಿಸುವಲ್ಲಿ ಸಂಪೂರ್ಣ ವಿಫಲವಾಗಿರುವ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಘೋಷಣೆ ಮೊಳಗಿಸಲಾಯಿತು. ೯/೧೧ ನಿವೇಶನಗಳ ಸಮಸ್ಯೆಗಳನ್ನು ತಕ್ಷಣ ಬಗೆಹರಿಸಬೇಕು, ಅಕ್ರಮ ಸಕ್ರಮ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಬೇಕು, ಗ್ರಾಮೀಣ ರಸ್ತೆಗಳ ದುರಸ್ತಿ ಹಾಗೂ ಪೈಪ್‌ಪೈನ್ ಅಳವಡಿಕೆ ಕಾರ್ಯಗಳನ್ನು ಪೂರ್ಣಗೊಳಿಸಬೇಕು,ಹೊಸ ಆಶ್ರಯ ಮನೆಗಳಿಗೆ ಮಂಜೂರಾತಿ ನೀಡುವುದು ಹಾಗೂ ಹಿಂದಿನ ಆಶ್ರಯ ಮನೆಗಳ ಹಣ ಬಿಡುಗಡೆಗೆ ಕ್ರಮ ವಹಿಸುವುದು, ವೃದ್ಧಾಪ್ಯ ವೇತನ ಮತ್ತು ಸಂಧ್ಯಾ ಸುರಕ್ಷಾ ಪಿಂಚಣಿ ರದ್ದತಿ ನಿರ್ಧಾರವನ್ನು ವಾಪಸ್ ಪಡೆಯುವುದು. ವಿದ್ಯುತ್ ದರ ಏರಿಕೆ ಹಾಗೂ ನಿರಂತರ ವಿದ್ಯುತ್ ಕೊರತೆ ಸಮಸ್ಯೆಗಳನ್ನು ಶೀಘ್ರದಲ್ಲಿ ಪರಿಹರಿಸುವುದು, ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಮಾಪನ ಯಂತ್ರವನ್ನು ಶೀಘ್ರವಾಗಿ ದುರಸ್ತಿಪಡಿಸಬೇಕು. ಮನೆ ಮನೆ ಗಂಗೆ ಜಲಜೀವನ್ ಮಿಷನ್ ನೀರು ಪೂರೈಕೆಯನ್ನು ಸರಿಯಾಗಿ ನಿರ್ವಹಿಸಬೇಕು. ಇವುಗಳ ಜತೆಗೆ, ಸ್ಥಳೀಯ ಗ್ರಾಮ ಮಟ್ಟದಲ್ಲಿ ಸಾರ್ವಜನಿಕರು, ಬಡವರು, ಮಹಿಳೆಯರು ಇನ್ನೂ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಕುರಿತು ತಾವು ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ ಶೀಘ್ರದಲ್ಲೇ ಪರಿಹಾರ ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.
ಮಂಡಲ ಅಧ್ಯಕ್ಷ ಮಂಜುನಾಥ ಪಾಟೀಲ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಎಲ್.ಟಿ. ಪಾಟೀಲ, ಅಶೋಕ ಚಲವಾದಿ, ರಾಜ ಎಸ್‌ಟಿ ಕಾರ್ಯದರ್ಶಿ ಸಂತೋಷ ತಳವಾರ, ನಿಂಗಜ್ಜ ಕೋಣನಕೇರಿ ವಾಸುದೇವ ಕ್ಯಾಸನಕೇರಿ, ನಾರಾಯಣ ಲಕ್ಕೊಳ್ಳಿ, ಲೋಕಪ್ಪ ಚೌಡಳ್ಳಿ ಮುಂತಾದವರು ಉಪಸ್ಥಿತರಿದ್ದರು.