ಕನ್ನಡಪ್ರಭ ವಾರ್ತೆ ರಾಯಚೂರು/ಸಿಂಧನೂರು
ರಾಜ್ಯದಲ್ಲಿ ಬರ ಪರಿಸ್ಥಿತಿ ನಿರ್ವಹಣೆ ಮಾಡುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ್ ಆರೋಪಿಸಿದರು.ಗುರುವಾರ ತಮ್ಮ ತಂಡದೊಂದಿಗೆ ಸಿಂಧನೂರು ತಾಲೂಕಿನ ಗೋಮರ್ಸಿ, ಅಲಬನೂರು, ಆರ್.ಎಚ್.ನಂ.4 ಹಾಗೂ ಮಣ್ಣಿಕೇರಿ ಕ್ಯಾಂಪಿನ ಜಮೀನುಗಳಿಗೆ ಭೇಟಿ ನೀಡಿ ಜೋಳದ ಬೆಳೆ ವೀಕ್ಷಣೆ ಮಾಡಿದರು. ನಂತರ ಮಾನ್ವಿ ಹಾಗೂ ರಾಯಚೂರು ತಾಲೂಕಿನ ವಿವಿಧ ಹಳ್ಳಿಗಳಿಗೆ ತೆರಳಿದ ತಂಡ ರೈತರ ಜಮೀನುಗಳಿಗೆ ಭೇಟಿ ನೀಡಿ ಬರ ಪರಿಸ್ಥಿತಿ ಅವಲೋಕಿಸಿದ ನಂತರ ರಾಯಚೂರು ಮತ್ತು ಸಿಂಧನೂರು ನಗರದಲ್ಲಿ ನಡೆಸಿದ ಪ್ರತ್ಯೇಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೆಲ್ಲದ್, ಮಳೆ ಕೊರತೆಯಿಂದ ಬೆಳೆಗಳು ಒಣಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜನ ಜಾನುವಾರುಗಳಿಗೆ ನೀರಿಲ್ಲದಂತಾಗಿದೆ. ಈ ಬಗ್ಗೆ ಅಧ್ಯಯನಕ್ಕಾಗಿ ಬಿಜೆಪಿ 17 ತಂಡ ರಚಿಸಿ ರಾಜ್ಯದಾದ್ಯಂತ ಪ್ರವಾಸ ಕೈಗೊಂಡಿದೆ. ರೈತರಿಗೆ 7 ತಾಸು ವಿದ್ಯುತ್ ಪೂರೈಸದ ಕಾರಣ ರೈತರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಹೇಳಿದರು.
ಬರ ನಿರ್ವಹಣೆ ಮಾಡುವುದು ಬಿಟ್ಟು ರಾಜ್ಯ ಸರ್ಕಾರ ಕೇಂದ್ರದತ್ತ ಬೊಟ್ಟು ಮಾಡುತ್ತಿದೆ. ರಾಜ್ಯ ಸರ್ಕಾರ ಕೇವಲ ₹324 ಕೋಟಿ ಹಣ ಬಿಡುಗಡೆಗೆ ಆದೇಶ ಮಾಡಿದೆ ಅಷ್ಟೇ. ಹಣ ಇನ್ನೂ ಬಿಡುಗಡೆ ಆಗಿಲ್ಲ. ಇನ್ನು ಕೇಂದ್ರ-ರಾಜ್ಯ ಸರ್ಕಾರ ಜಂಟಿಯಾಗಿ ರೈತರಿಗೆ ನೀಡುತ್ತಿದ್ದ ಹಣವನ್ನು ರಾಜ್ಯ ಸರ್ಕಾರ ರದ್ದು ಮಾಡಿ ರೈತರಿಗೆ ಮೋಸ ಮಾಡಿದೆ ಎಂದು ಆರೋಪಿಸಿದರು.ಮುಖ್ಯಮಂತ್ರಿ ಕಚೇರಿಗೆ ಪೀಠೋಪಕರಣ ಖರೀದಿಗೆ 3 ಕೋಟಿ ರು. ಖರ್ಚು ಮಾಡಿದ್ದಾರೆ. ಜೊತೆಗೆ ಸಚಿವರ ನಿವಾಸದ ಕಟ್ಟಡಗಳಿಗೆ ಫರ್ನಿಚರ್, ಕಾರುಗಳ ಖರೀದಿಸಲು ಏಜೆನ್ಸಿಗೆ ಬಿಡುಗಡೆ ಮಾಡಲು ಹಣವಿದೆ. ಆದರೆ ಬರ ನಿರ್ವಹಣೆಗೆ ಹಣವಿಲ್ಲವೆಂದು ರಾಜ್ಯ ಸರ್ಕಾರ ಹೇಳುತ್ತಿದೆ. ಇದು ಸಂಪೂರ್ಣ ರೈತ ವಿರೋಧಿ ಸರ್ಕಾರವಾಗಿದೆ ಎಂದು ಹೇಳಿದರು.
ಮಸ್ಕಿ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಮಾತನಾಡಿ, ಎನ್.ಎಸ್. ಬೋಸರಾಜು ಫೌಂಡೇಶನ್ ವತಿಯಿಂದ ಮೋಡ ಬಿತ್ತನೆ ಮಾಡುತ್ತಿರುವುದು ರಾಜಕೀಯ ಬೇಳೆ ಬೆಳೆಸಿಕೊಳ್ಳುವ ಉದ್ದೇಶವಾಗಿದೆ. ಇದರಿಂದ ರೈತರಿಗೆ ಹಾನಿಯಾಗುತ್ತಿದೆ ಎಂದರು.ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಇದ್ದರು.