ಕನ್ನಡಪ್ರಭ ವಾರ್ತೆ, ತರೀಕೆರೆ
ಸ್ತ್ರೀಯರ ಸಬಲೀಕರಣ ರಾಮರಾಜ್ಯದ ಒಂದು ಪರಿಕಲ್ಪನೆಯಾಗಿದೆ. ಪ್ರತಿಯೊಬ್ಬ ಮಹಿಳೆ ಗರ್ಭಿಣಿಯಾದಾಗ ಸೀಮಂತ ಶಾಸ್ತ್ರ ನಡೆಯಬೇಕೆಂಬ ಆಸೆ ಹೊಂದಿರುತ್ತಾರೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ತಿಳಿಸಿದರು.ಪಟ್ಟಣದ ಬಯಲು ರಂಗಮಂದಿರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪುರಸಭೆ ಹಾಗೂ ಜಿ.ಎಚ್.ಶ್ರೀನಿವಾಸ್ ಜನಹಿತ ಟ್ರಸ್ಟ್ ಆಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ಸಾಮೂಹಿಕ ಸೀಮಂತ ಕಾರ್ಯಕ್ರಮ, ಪೌಷ್ಠಿಕ ಆಹಾರ ಪ್ರಾತ್ಯಕ್ಷತೆ, ಸರಳ ವಿವಾಹ ಹಾಗೂ ವರದಕ್ಷಿಣೆ ನಿರ್ಮೂಲನೆ ಕುರಿತು ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಹಿಂದಿನ ಶಾಸಕ ಅವಧಿಯಲ್ಲಿಯೂ ಸಾಕಷ್ಟು ಬಾರಿ ಸೀಮಂತ ಕಾರ್ಯಕ್ರಮ ಆಯೋಜಿಸಲಾಗಿದೆ. ಗರ್ಭಿಣಿ ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಂಡರೆ ಆರೋಗ್ಯವಂತ ಮಗುವಿಗೆ ಜನ್ಮ ನೀಡಬಹುದು. ಮಹಿಳೆಯರ ಸ್ವಾವಲಂಬನೆಗೆ ಹೆಚ್ಚು ಒತ್ತು ನೀಡಿರುವ ರಾಜ್ಯ ಸರ್ಕಾರ ಗೃಹಲಕ್ಷ್ಮೀ, ಶಕ್ತಿ ಯೋಜನೆಯಂತಹ ಮಹಿಳೆಯರ ಪರ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಹೇಳಿದರು.ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಶ್ರೀರಾಮ ಪ್ರತಿಷ್ಠಾಪನಾ ಕಾರ್ಯ, ರಾಮಮಂದಿರ ಉದ್ಘಾಟನೆ ಕಾರ್ಯಕ್ರಮ ನಡೆಯುತ್ತಿರುವುದು ಸಂತಸದ ವಿಚಾರ. ಶ್ರೀರಾಮನ ಆದರ್ಶಗಳು ಜೀವಂತವಾಗಿವೆ. ಅವರ ಆದರ್ಶಗಳು ಯಾರೋ ಒಬ್ಬರ ಸ್ವತ್ತಲ್ಲ. ಅದನ್ನು ಅಳವಡಿಸಿಕೊಳ್ಳುವ ಸಂಕಲ್ಪ ಮಾಡಬೇಕಿದೆ. ಸತ್ಯ, ಧರ್ಮ, ಸಹಾನುಭೂತಿಗೆ ಶ್ರೀರಾಮ ಹೆಸರಾಗಿದ್ದರು ಎಂದು ತಿಳಿಸಿದರು.
ಉಪವಿಭಾಗಾಧಿಕಾರಿ ಡಾ.ಕೆ.ಜೆ.ಕಾಂತರಾಜ್ ಮಾತನಾಡಿ, ಸಾಂವಿಧಾನಿಕವಾಗಿ ಮಹಿಳೆಯರ ಪರವಾಗಿ ಸಾಕಷ್ಟು ಕಾನೂನುಗಳಿದ್ದರೂ ವರದಕ್ಷಿಣೆ ಕಿರುಕುಳ, ಲಿಂಗತಾರತಮ್ಯ, ಆಸಿಡ್‌ದಾಳಿ, ಅತ್ಯಾಚಾರ ಪ್ರಕರಣಗಳು, ಮರ್ಯಾದೆ ಹತ್ಯೆಗಳು ನಡೆಯುತ್ತಿರುವುದು ವಿಷಾದನೀಯ. ಹೆಣ್ಣು ಭ್ರೂಣ ಹತ್ಯೆ ಕಾರಣದಿಂದಾಗಿ ಪುರುಷರ ಸಂಖ್ಯೆ 1000 ಇದ್ದರೆ, ಮಹಿಳೆಯರ ಸಂಖ್ಯೆ 946 ಇದೆ. ಹೆಣ್ಣು ಭ್ರೂಣಹತ್ಯೆ ತೊಲಗಬೇಕು. ಮಹಿಳೆಯರಿಗೆ ಸಮಾನ ಅವಕಾಶ ಕಲ್ಪಿಸಬೇಕೆಂಬ ಉದ್ದೇಶದಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರ ಮಹಿಳೆಯರನ್ನು ಮುಖ್ಯ ವಾಹಿನಿಗೆ ತರಲು, ಅವರ ರಕ್ಷಣೆ, ಗೌರವ ಕಾಪಾಡಲು ಶಾಸಕಾಂಗದ ಮೂಲಕ ಅನೇಕ ಕಾನೂನು ಜಾರಿಗೊಳಿಸಿದೆ ಎಂದು ಹೇಳಿದರು.ರಚನಾ , ಪುರಸಭೆ ಅಧ್ಯಕ್ಷ ಪರಮೇಶ್, ತಹಸೀಲ್ದಾರ್ ರಾಜೀವ್, ತಾಪಂ ಇಒ ಗಣೇಶ್, ತಾಲೂಕು ಆರೋಗ್ಯಾಧಿಕಾರಿ ಡಾ.ಚಂದ್ರಶೇಖರ್, ಸಿಡಿಪಿಒ ಚರಣ್‌ರಾಜ್, ಜಿ.ಎಚ್.ಶ್ರೀನಿವಾಸ್ ಜನಹಿತ ಟ್ರಸ್ಟ್ ಅಧ್ಯಕ್ಷೆ ವಾಣಿಶ್ರೀನಿವಾಸ್, ಕೆಪಿಸಿಸಿ ಸದಸ್ಯ ನಟರಾಜ್, ಜಾನಪದ ಪ್ರಶಸ್ತಿ ಪುರಸ್ಕೃತೆ ಲಕ್ಷ್ಮೀದೇವಮ್ಮ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಕುಮಾರ್, ಮಾಜಿ ಅಧ್ಯಕ್ಷರಾದ ವರ್ಮಪ್ರಕಾಶ್, ಧರ್ಮರಾಜ್, ಪುರಸಭೆ ಸದಸ್ಯರು ಮತ್ತಿತರರು ಭಾಗವಹಿಸಿದ್ದರು.22ಕೆಟಿಆರ್.ಕೆ.14ಃ
ತರೀಕೆರೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪುರಸಭೆ ಹಾಗೂ ಜಿ.ಎಚ್.ಶ್ರೀನಿವಾಸ್ ಜನಹಿತ ಟ್ರಸ್ಟ್ ಆಶ್ರಯದಲ್ಲಿ ಏರ್ಪಡಿಸಿದ್ದ ಸಾಮೂಹಿಕ ಸೀಮಂತ ಕಾರ್ಯಕ್ರಮ, ಪೌಷ್ಠಿಕ ಆಹಾರ ಪ್ರಾತ್ಯಕ್ಷತೆ, ಸರಳ ವಿವಾಹ ಹಾಗೂ ವರದಕ್ಷಿಣೆ ನಿರ್ಮೂಲನೆ ಕುರಿತು ಉಪನ್ಯಾಸ ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಜಿ.ಎಚ್.ಶ್ರೀನಿವಾಸ್ ನೆರವೇರಿಸಿದರು. ಟ್ರಸ್ಟ್ ಅಧ್ಯಕ್ಷೆ ವಾಣಿ ಶ್ರೀನಿವಾಸ್ ಪುರಸಭೆ ಅಧ್ಯಕ್ಷ ಪರಮೇಶ್ ಮತ್ತಿತರರು ಇದ್ದರು.