ಗದಗ: ರಾಜ್ಯ ಸರ್ಕಾರ ರೈತರನ್ನು ಕಡೆಗಣಿಸಿದೆ. ರೈತರ ಯಾವುದೇ ಸಮಸ್ಯೆಗಳಿಗೆ ಕಿವಿಗೊಡದ ಈ ಸರ್ಕಾರ ರೈತರ ಪಾಲಿಗೆ ಕಿವುಡ, ಕುರುಡ ಹಾಗೂ ಮುಖ ಸರಕಾರವಾಗಿದೆ ಎಂದು ಜೆಡಿಎಸ್ ರಾಜ್ಯ ವಕ್ತರ ವೆಂಕನಗೌಡ ಗೋವಿಂದಗೌಡ್ರ ಹೇಳಿದರು.
ರೈತರ ಹೋರಾಟಕ್ಕೆ ಜೆಡಿಎಸ್ ಪಕ್ಷ ಹೆಗಲುಕೊಟ್ಟು ನಿಲ್ಲುತ್ತದೆ, ಈ ಹೋರಾಟ ಕೊನೆಗೊಳ್ಳುವವರೆಗೂ ರೈತರು ಯಾವುದೇ ಆಶ್ವಾಸನೆಗಳಿಗೆ ಮರಳಾಗಬಾರದು. ಚುನಾವಣೆಗೆ ಮುಂಚೆ ಜಿಲ್ಲಾ ಉಸ್ತುವಾರಿ ಸಚಿವರು ನೀಡಿದ ಭರವಸೆಯನ್ನು ಈಡೇರಿಸಬೇಕೆಂದು ಒತ್ತಾಯಿಸಿದರು.
ರೈತರನ್ನು ಸಂತೈಸಲು ಕೇವಲ ಭಾಷಣ ಮಾಡಿ ಹೋದರೆ ಆಗುವುದಿಲ್ಲ. ರೈತರ ಕಾಳಜಿ ಇದ್ದರೆ ಅವರ ಸಮಸ್ಯೆಗಳಿಗೆ ಸ್ಪಂದಿಸಿ ಅದಕ್ಕೆ ಪರಿಹಾರ ನೀಡಬೇಕು. ರೈತ ನೀಲಕಂಠನಿದ್ದ ಹಾಗೆ ಜಗತ್ತಿನಲ್ಲಿ ಯಾವುದೇ ಸಮಸ್ಯೆ ಎದುರಾದರು ಅದು ಮೊದಲು ತಟ್ಟುವುದೇ ರೈತರಿಗೆ. ರೈತ ಎಲ್ಲವನ್ನು ನುಂಗಿಕೊಂಡು ಯಾವುದೇ ಜಾತಿ, ಮತ, ಭೇದವಿಲ್ಲದೆ ಜನರ ಹೊಟ್ಟೆಯನ್ನು ತುಂಬುತ್ತಿದ್ದಾನೆ. ಇಂತಹ ತ್ಯಾಗ ಜೀವಿಗಳಿಗೆ ಎಲ್ಲ ರೀತಿಯ ಸಂಕಟ ಬರುವುದು ವಿಷಾದನೀಯ. ನಮ್ಮ ರೈತರ ಸಮಸ್ಯೆಯ ಬಗ್ಗೆ ಪಕ್ಷದ ವರಿಷ್ಠರೊಂದಿಗೆ, ನಾಯಕರೊಂದಿಗೆ ಚರ್ಚಿಸಿ ಈ ಹೋರಾಟಕ್ಕೆ ಜಯ ಸಿಗುವಂತಾಗಲು ಪ್ರಯತ್ನಿಸುವುದಾಗಿ ತಿಳಿಸಿದರು.ಜೆಡಿಎಸ್ ಪಕ್ಷದ ಕಾನೂನು ಘಟಕದ ಜಿಲ್ಲಾಧ್ಯಕ್ಷ ಜೋಸೆಫ್ ಉದುಜಿ ಮಾತನಾಡಿ, ರೈತರು ಯಾವುದೇ ಕಾರಣಕ್ಕೂ ಎದೆಗುಂದದೆ ಮುನ್ನುಗ್ಗಬೇಕು. ರೈತರ ಬೇಡಿಕೆಗಳು ನ್ಯಾಯ ಸಮ್ಮತವಾಗಿದ್ದು ಸರಕಾರ ಈ ಕೂಡಲೇ ಇದಕ್ಕೆ ಸ್ಪಂದಿಸಬೇಕೆಂದು ಒತ್ತಾಯಿಸಿದರು. ಯಾವುದೇ ರೀತಿ ಕಾನೂನಿನ ಹೋರಾಟಕ್ಕೆ ಕಾನೂನಿನ ನೆರವಿಗೆ ಜೆಡಿಎಸ್ ಪಕ್ಷ ಸದಾ ರೈತರೊಂದಿಗೆ ಇರುತ್ತದೆ ಎಂದು ಅವರು ಹೋರಾಟಗಾರರಿಗೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಬಸವರಾಜ ಅಪ್ಪಣ್ಣವರ, ರಮೇಶ್ ಹುಣಸಿಮರದ, ಸಂತೋಷ್ ಪಾಟೀಲ, ಪ್ರಫುಲ್ ಪುಣೆಕರ, ಜಿ.ಕೆ.ಕೊಳ್ಳಿಮಠ, ಶರಣಪ್ಪ ಹೂಗಾರ, ಸಿದ್ದಯ್ಯ ಹೊಂಬಾಳಿ ಮಠ, ಮಂಜುಳಾ ಮೇಟಿ, ರಾಜೇಶ್ವರಿ ಹೂಗಾರ, ಶರಣಪ್ಪ ತೂಲಿ, ಅಭಿಷೇಕ್ ದೇಸಾಯಿ, ಲಲಿತಾ ಕಲ್ಲಪ್ಪನವರ, ಅಭಿಷೇಕ್ ಕಂಬಳಿ, ಜಯರಾಜ ವಾಲಿ ಹಾಗೂ ಪಕ್ಷದ ಮುಖಂಡರು ರೈತರ ಹೋರಾಟಕ್ಕೆ ಬೆಂಬಲ ನೀಡಿದರು.