ಸಂಪದ್ಭರಿತ ನಾಡನ್ನು ಹಾಳು ಮಾಡಿರುವ ರಾಜ್ಯ ಸರ್ಕಾರ: ನಿಖಿಲ್‌

KannadaprabhaNewsNetwork |  
Published : Sep 24, 2026, 01:15 AM IST
23ಕೆಆರ್ ಎಂಎನ್ 3.ಜೆಪಿಜಿನಿಖಿಲ್ ಕುಮಾರಸ್ವಾಮ | Kannada Prabha

ಸಾರಾಂಶ

ರಾಮನಗರ: ಸರ್ಕಾರ ದಿವಾಳಿಯಾಗಿದೆ ಎಂಬುದಕ್ಕೆ ಆರ್ಥಿಕ ಇಲಾಖೆಯೇ ಸಾಕ್ಷಿ. ಸರ್ಕಾರದ ಬಳಿ ದುಡ್ಡಿಲ್ಲ ಎಂದು ಹಣಕಾಸು ಇಲಾಖೆ ಅಧಿಕಾರಿಗಳೇ ಹೇಳುತ್ತಿದ್ದಾರೆ. ಇಂತಹ ಸಂಪದ್ಭರಿತ ರಾಜ್ಯವನ್ನು ಈ ಸರ್ಕಾರ ದಿವಾಳಿ ಮಾಡಿದೆ ಎಂದು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು

ರಾಮನಗರ: ಸರ್ಕಾರ ದಿವಾಳಿಯಾಗಿದೆ ಎಂಬುದಕ್ಕೆ ಆರ್ಥಿಕ ಇಲಾಖೆಯೇ ಸಾಕ್ಷಿ. ಸರ್ಕಾರದ ಬಳಿ ದುಡ್ಡಿಲ್ಲ ಎಂದು ಹಣಕಾಸು ಇಲಾಖೆ ಅಧಿಕಾರಿಗಳೇ ಹೇಳುತ್ತಿದ್ದಾರೆ. ಇಂತಹ ಸಂಪದ್ಭರಿತ ರಾಜ್ಯವನ್ನು ಈ ಸರ್ಕಾರ ದಿವಾಳಿ ಮಾಡಿದೆ ಎಂದು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್ಥಿಕ ಇಲಾಖೆ ಪತ್ರ ಬಹಿರಂಗವಾಗಿದೆ. ರಾಜ್ಯ ಸರ್ಕಾರ ಯಾವುದೇ ಹೊಸ ಯೋಜನೆಗಳನ್ನು ಘೋಷಣೆ ಮಾಡಬಾರದು ಎಂದು ಸ್ವತಃ ಆರ್ಥಿಕ ಇಲಾಖೆಯೇ ಸರ್ಕಾರಕ್ಕೆ ಪತ್ರ ಬರೆದಿದೆ. ರಾಜ್ಯದ ಸಾಲ ಗರಿಷ್ಠ ಮಿತಿಯನ್ನು ತಲುಪಿದೆ ಎಂದು ಟೀಕಿಸಿದ ಅವರು, ವಿವಿಧ ಇಲಾಖೆಗಳಿಗೆ ಗುತ್ತಿಗೆದಾರರಿಗೆ ಸುಮಾರು 36 ಸಾವಿರ ಕೋಟಿ ರು.ಗೂ ಹೆಚ್ಚು ಹಣದ ಬಿಲ್ ಪಾವತಿ ಬಾಕಿ ಇದೆ. ಪಿಂಚಣಿ ಕೊಡಲು ಹಣವಿಲ್ಲ ಎಂದು ಹೇಳುವ ಸರ್ಕಾರ, ಮಂಗಳೂರಿನಲ್ಲಿ 32,000 ಕೋಟಿ ರು. ಯೋಜನೆ ಘೋಷಣೆ ಮಾಡುತ್ತದೆ. ಈ ಹಿಂದೆ ಕಲಬುರಗಿಯಲ್ಲಿ ಘೋಷಣೆ ಮಾಡಿದ ವಿಶೇಷ ಪ್ಯಾಕೇಜ್ ಏನಾಯಿತು? ಕೇವಲ ಘೋಷಣೆ ಮಾತ್ರ ಆಗುತ್ತಿದೆ. ಯಾವುದೂ ಅನುಷ್ಠಾನಕ್ಕೆ ಬರುತ್ತಿಲ್ಲ. ಇದು ಸಂಪದ್ಭರಿತ ನಾಡು, ಆದರೆ ಈ ಸರ್ಕಾರದ ಮ್ಯಾನೇಜ್ಮೆಂಟ್ ಸರಿಯಿಲ್ಲ ಎಂದು ಕಿಡಿಕಾರಿದರು.

ಬಿಡದಿ ರೈತರ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಶುಕ್ರವಾರ ಭೇಟಿ:

ಬಿಡದಿ ಬಳಿ ಟೌನ್‌ಶಿಪ್ ವಿರುದ್ಧ ರೈತರು ನಡೆಸುತ್ತಿರುವ ಉಪವಾಸ ಸತ್ಯಾಗ್ರಹದ ಬಗ್ಗೆ ಪ್ರತಿಕ್ರಿಯಿಸಿದ ನಿಖಿಲ್, ಬಿಡದಿ ಯೋಜನೆ ಬಗ್ಗೆ ಸಮಿತಿ ಮಾಡುತ್ತೇನೆ ಎಂದು ಮುಖ್ಯಮಂತ್ರಿಗಳು ಹೇಳಿ ಎರಡು ತಿಂಗಳಾಗಿದೆ. ಆದರೆ ಸಮಿತಿಯ ಯಾವ ಸದಸ್ಯರೂ ಇಲ್ಲಿವರೆಗೆ ಸ್ಥಳಕ್ಕೆ ಬಂದು ರೈತರ ಸಮಸ್ಯೆ ಆಲಿಸಿಲ್ಲ. ನಾವು ರೈತರ ಪರ ಕಾನೂನು ಹೋರಾಟ ಮಾಡುತ್ತಿದ್ದೇವೆ. ಆದರೆ ಸರ್ಕಾರ ಉದ್ದೇಶಪೂರ್ವಕವಾಗಿ ನ್ಯಾಯಾಲಯದಲ್ಲಿ ಆಬ್ಜೆಕ್ಷನ್ ಫೈಲ್ ಮಾಡಲು ವಿಳಂಬ ಮಾಡುತ್ತಿದೆ. ಒಂದು ವೇಳೆ ವಾದ-ಪ್ರತಿವಾದ ಶುರುವಾದರೆ ಸರ್ಕಾರಕ್ಕೆ ಹಿನ್ನಡೆಯಾಗಿ ಪ್ರಾಜೆಕ್ಟ್ ಗೆ ಸ್ಟೇ ಸಿಗುತ್ತದೆ ಎಂಬ ಭಯ ಸರ್ಕಾರಕ್ಕೆ ಕಾಡುತ್ತಿದೆ ಎಂದರು.

ಸದ್ಯ ಭೈರಮಂಗಲದಲ್ಲಿ ರೈತರು ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ. ಮೂರು-ನಾಲ್ಕು ಜನ ರೈತರು ಅಸ್ವಸ್ಥರಾಗಿದ್ದಾರೆ. ಆದರೂ ಸರ್ಕಾರದ ಯಾವೊಬ್ಬ ಪ್ರತಿನಿಧಿಯೂ ಬಂದು ರೈತರ ಆರೋಗ್ಯ ವಿಚಾರಿಸಿಲ್ಲ, ಸಮಸ್ಯೆ ಆಲಿಸಿಲ್ಲ. ನಾನು ಶುಕ್ರವಾರ ಧರಣಿ ಸ್ಥಳಕ್ಕೆ ಭೇಟಿ ನೀಡಿ ರೈತರ ಜೊತೆ ಮಾತನಾಡುತ್ತೇನೆ. ಮಾಜಿ ಪ್ರಧಾನಿಗಳಾದ ದೇವೇಗೌಡರು ಹೋರಾಟದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿದ್ದಾರೆ. ಅಗತ್ಯ ಬಿದ್ದರೆ ದೇವೇಗೌಡರೇ ಖುದ್ದು ಭೈರಮಂಗಲ ಗ್ರಾಮಕ್ಕೆ ಬರಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.

ಸೆ.28ರಿಂದ ಸಿಎಂ ಕ್ಷೇತ್ರದಿಂದಲೇ ಸ್ವಾಭಿಮಾನಿ ರೈತಯಾತ್ರೆ:

ರಾಜ್ಯದ ಬರ ಪರಿಸ್ಥಿತಿ ಕುರಿತು ಮಾತನಾಡಿದ ಅವರು, ರಾಜ್ಯದಲ್ಲಿ ಬರ ಪರಿಸ್ಥಿತಿ ಇದೆ. ರೈತರು ಸಂಕಷ್ಟದಲ್ಲಿದ್ದಾರೆ. ರೈತರ ಸಮಸ್ಯೆ ಆಲಿಸಲು ನಾನು ಸ್ವಾಭಿಮಾನಿ ರೈತ ಯಾತ್ರೆ ಮಾಡುತ್ತಿದ್ದೇನೆ. ಈ ಯಾತ್ರೆಯನ್ನು ಸೆ.28ರಿಂದ ಮುಖ್ಯಮಂತ್ರಿಗಳ ಸ್ವಕ್ಷೇತ್ರದಿಂದಲೇ ಆರಂಭಿಸುತ್ತೇವೆ. ಮುಖ್ಯಮಂತ್ರಿಗಳು ರಾಜ್ಯದೆಲ್ಲೆಡೆ ಓಡಾಡುತ್ತಿದ್ದಾರೆ, ಆದರೆ ತಮ್ಮ ಸ್ವಕ್ಷೇತ್ರಕ್ಕೆ ಭೇಟಿ ನೀಡಲು ಅವರಿಗೆ ಸಮಯವಿಲ್ಲ. ಹಾಗಾಗಿ ನಾವೇ ಖುದ್ದು ಭೇಟಿ ಕೊಟ್ಟು ಅಲ್ಲಿನ ಪರಿಸ್ಥಿತಿ ಅವಲೋಕನ ಮಾಡಿ, ರೈತರ ಸಮಸ್ಯೆಯನ್ನು ಸರ್ಕಾರಕ್ಕೆ ತಿಳಿಸುತ್ತೇವೆ ಎಂದು ನಿಖಿಲ್ ತಿಳಿಸಿದರು.

ಈ ವೇಳೆ ಜೆಡಿಎಸ್ ರಾಮನಗರ ತಾಲೂಕು ಅಧ್ಯಕ್ಷ ಸಬ್ಬಕೆರೆ ಶಿವಲಿಂಗಪ್ಪ, ಮುಖಂಡರಾದ ಕಾಂತರಾಜು, ಉಮೇಶ್, ಬಾಲಗೆರೆ ರವಿ, ಅಂಜನಾಪುರ ವಾಸು, ಪಾಂಡು, ಚಂದ್ರು, ದೇವರಾಜು ಮತ್ತಿತರರು ಹಾಜರಿದ್ದರು.

23ಕೆಆರ್ ಎಂಎನ್ 3.ಜೆಪಿಜಿ

ನಿಖಿಲ್ ಕುಮಾರಸ್ವಾಮಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸುಸಜ್ಜಿತ ಪ್ರಜಾಸೌಧವಿದ್ದರೂ ಜನರಿಗಿಲ್ಲ ಸರ್ಕಾರಿ ಸೇವೆ
ರಾಜ್ಯ ಸರ್ಕಾರದ ನಿರ್ಧಾರ ಸ್ವಾಗತಾರ್ಹ: ಶಾಸಕ ಅಲ್ಲಂಪ್ರಭು