ಜೈನ ಸಮುದಾಯದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಸದಾ ಬದ್ಧ: ಸಚಿವ ಡಿ.ಸುಧಾಕರ್

KannadaprabhaNewsNetwork | Published : Apr 27, 2025 1:33 AM

ಸಾರಾಂಶ

ಜೈನ ಸಮುದಾಯದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬದ್ದವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.

ಉದ್ಘಾಟನಾ ಸಮಾರಂಭ । ಭಗವಾನ್ ಮಹಾವೀರ ವೃತ್ತ ಆರಂಭ । ಶ್ರವಣಬೆಳಗೊಳ ಶ್ರೀ ಮೆರವಣಿಗೆ

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಜೈನ ಸಮುದಾಯದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬದ್ದವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.

ನಗರದ ಪ್ರವಾಸಿ ಮಂದಿರದ ಬಳಿ ಶ್ರೀ ಗೋಡಿ ಪಾರ್ಶ್ವನಾಥ ಜೈನ್ ಶ್ವೇತಾಂಬರ್ ಮೂರ್ತಿ ಪೂಜಕ್ ಸಂಘದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಗವಾನ್ ಶ್ರೀ ಮಹಾವೀರ ವೃತ್ತದ ಉದ್ಘಾಟನೆ ನೆರವೇರಿಸಿ ಮಾತನಾಡಿ, ಈ ಬಜೆಟ್‌ನಲ್ಲಿ ಸುಮಾರು 100 ಕೋಟಿ ರು. ಅನುದಾನವನ್ನು ಸಿಎಂ, ಡಿಸಿಎಂ ಮೀಸಲಿಟ್ಟಿದ್ದಾರೆ. ಕಳೆದ ವರ್ಷ 50 ಕೋಟಿ ರು. ಅನುದಾನದಲ್ಲಿ 40 ಕೋಟಿ ರು. ಹಣವನ್ನು ಜೈನ ಸಮುದಾಯದ ನಾನಾ ದೇವಸ್ಥಾನಗಳು, ಸಮುದಾಯ ಭವನಗಳ ನಿರ್ಮಾಣ ಸೇರಿದಂತೆ ಮತ್ತಿತರ ಅಭಿವೃದ್ಧಿ ಕಾರ್ಯಗಳಿಗೆ ಬಳಸಲಾಗಿತ್ತು. ಅಗತ್ಯ ಬಂದಲ್ಲಿ ಚಿತ್ರದುರ್ಗದ ಜೈನ ಸಮುದಾಯದ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿಸುವುದಾಗಿ ಹೇಳಿದರು.

ಜೈನ ಧರ್ಮವು ಹಿಂದೂ ಧರ್ಮಕ್ಕಿಂತಲೂ ಅತ್ಯಂತ ಪುರಾತನವಾದದ್ದು. ಇಂತಹ ಶ್ರೇಷ್ಠ ಧರ್ಮವನ್ನು ಎತ್ತಿಹಿಡಿಯುವ, ಸಮಾಜ ಸೇವೆಯನ್ನು ಪ್ರಾಮಾಣಿಕವಾಗಿ ಮಾಡೋಣ. ರಾಜ್ಯ ಸರ್ಕಾರ ನಿಮ್ಮ ಜತೆ ಇದೆ. ಕಾಂಗ್ರೆಸ್ ಸರ್ಕಾರದಲ್ಲಿ ದೇವರಾಜ ಅರಸ್ ಕಾಲದಿಂದಲೂ ಜೈನ ಸಮುದಾಯದ ಒಬ್ಬರು ಸಚಿವರು ಆಗುತ್ತಲೇ ಬಂದಿದ್ದಾರೆ. ನೀವು ಜೈನ ಧರ್ಮದಲ್ಲಿ ಹುಟ್ಟಿರುವುದು ಸಾರ್ಥಕ ಎಂದರು.

ಶ್ರೀಕೃಷ್ಣನ ವಾಣಿಯಂತೆ ಯಾರು ಧರ್ಮವನ್ನು ಕಾಪಾಡುತ್ತಾರೋ, ಧರ್ಮ ಅವರನ್ನು ಕಾಪಾಡುತ್ತದೆ. ಶ್ರವಣಬೆಳಗೊಳದ ಶ್ರೀಗಳು ಕಾರ್ಯಕ್ರಮಕ್ಕೆ ಆಗಮಿಸಿರುವುದು ಸಂತೋಷದ ವಿಚಾರ ಎಂದರು.

ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಮಾತನಾಡಿ, ಮಹಾವೀರರ ಸಂದೇಶವನ್ನು ಇಡೀ ಸಮುದಾಯ ಬಹಳ ನಿಷ್ಠೆಯಿಂದ ಪಾಲಿಸುತ್ತಿರುವುದು ಖುಷಿಯ ಸಂಗತಿ. ಮಹಾತ್ಮ ಗಾಂಧಿಯವರು ಅಹಿಂಸೆ, ಸತ್ಯದ ವಿಚಾರಗಳಡಿ ಹೋರಾಟ ಮಾಡಿದರು ಎಂದರು.

ಶ್ರವಣಬೆಳಗೊಳದ ಸ್ವಸ್ತಶ್ರೀ ಚಾರುಕೀರ್ತಿ ಪಂಡಿತಾಚಾರ್ಯ ವರ್ಯ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಮಾತನಾಡಿ, ಭಗವಾನ್ ಮಹಾವೀರರು ಭೋದಿಸಿರುವ ಪಂಚಶೀಲ ತತ್ವಗಳನ್ನು ನಾವೆಲ್ಲರೂ ಪಾಲನೆ ಮಾಡೋಣ. ಕೇವಲ ವ್ರತ, ಅಭಿಷೇಕ, ಮಂದಿರ ಕಟ್ಟುವುದರಿಂದ ಮಹಾವೀರರಿಗೆ ಗೌರವ ತೋರಿಸಿದಂತಾಗುವುದಿಲ್ಲ, ಅವರು ತೋರಿದ ದಾರಿಯಲ್ಲಿ ಎಲ್ಲರೂ ನಡೆಯುವುದರಿಂದ ಅವರಿಗೆ ಗೌರವ ಸಲ್ಲಿಸಿದಂತಾಗಲಿದೆ ಎಂದರು.

ಕಾರ್ಯಕ್ರಮದ ಬಳಿಕ ಶ್ರೀಗಳನ್ನು ಸಾರೋಟಿನಲ್ಲಿ ಮೆರವಣಿಗೆ ಮೂಲಕ ರಂಗಯ್ಯನ ಬಾಗಿಲ ಬಳಿ ನೂತನವಾಗಿ ನಿರ್ಮಿಸಿರುವ ಮಹಾವೀರ ದಿಗಂಬರ ಮಂದಿರಕ್ಕೆ ಕರೆದೊಯ್ಯಲಾಯಿತು.

ನಗರಸಭೆ ಅಧ್ಯಕ್ಷೆ ಬಿ.ಎನ್.ಸುಮಿತ ರಘು, ಜಿಲ್ಲಾ ಪೊಲೀಸ್ ಅಧೀಕ್ಷಕ ರಂಜಿತ್‌ಕುಮಾರ್ ಬಂಡಾರು, ಜಿಲ್ಲಾ ಕೆಡಿಪಿ ಸದಸ್ಯ ಕೆ.ಸಿ.ನಾಗರಾಜ್, ನಗರಸಭೆ ಪೌರಾಯುಕ್ತೆ ಎಂ.ರೇಣುಕಾ, ಜೈನ ಸಂಘದ ಅಧ್ಯಕ್ಷ ವಸ್ತಿಮಲ್ ಜೈನ್, ಟ್ರಸ್ಟಿಗಳಾದ ಪಿ.ಸೊಭಾಗ್‌ಮಲ್ ಜೈನ್, ಪ್ರೇಮ್‌ಚಂದ್ ಜೈನ್, ಅಶೋಕ್ ಕುಮಾರ್ ಜೈನ್, ರಂಜಿತ್‌ಕುಮಾರ್ ಜೈನ್, ಸಂಸದ ಗೋವಿಂದ ಎಂ ಕಾರಜೋಳ, ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಭಾಗವಹಿಸಿದ್ದರು.

Share this article