ಶರಾವತಿ ಸಂತ್ರಸ್ತರಿಗೆ ರಾಜ್ಯ ಸರ್ಕಾರ ಅನ್ಯಾಯ: ಶ್ರೀನಿವಾಸ್

KannadaprabhaNewsNetwork |  
Published : Feb 17, 2026, 01:45 AM IST
ಪೋಟೋ: 15ಎಸ್‌ಎಂಜಿಕೆಪಿ03ಶಿವಮೊಗ್ಗದ ಪತ್ರಿಕಾಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಲೆನಾಡು ರೈತ ಹೋರಾಟ ಸಮಿತಿಯ ಸಂಚಾಲಕ ತೀ.ನ. ಶ್ರೀನಿವಾಸ್ ಮಾತನಾಡಿದರು.  | Kannada Prabha

ಸಾರಾಂಶ

ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆಗಳನ್ನು ಕೇಂದ್ರ-ರಾಜ್ಯ ಸರ್ಕಾರಗಳು ಬಗೆಹರಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ಮಾಡಿದ್ದರೂ ರಾಜ್ಯ ಸರ್ಕಾರ ಸಂತ್ರಸ್ತರನ್ನು ಎತ್ತಂಗಡಿ ಮಾಡಿ ರೈತರಿಗೆ ಅನ್ಯಾಯ ಎಸಗುತ್ತಿದೆ ಎಂದು ಮಲೆನಾಡು ರೈತ ಹೋರಾಟ ಸಮಿತಿಯ ಸಂಚಾಲಕ ತೀ.ನ.ಶ್ರೀನಿವಾಸ್ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆಗಳನ್ನು ಕೇಂದ್ರ-ರಾಜ್ಯ ಸರ್ಕಾರಗಳು ಬಗೆಹರಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ಮಾಡಿದ್ದರೂ ರಾಜ್ಯ ಸರ್ಕಾರ ಸಂತ್ರಸ್ತರನ್ನು ಎತ್ತಂಗಡಿ ಮಾಡಿ ರೈತರಿಗೆ ಅನ್ಯಾಯ ಎಸಗುತ್ತಿದೆ ಎಂದು ಮಲೆನಾಡು ರೈತ ಹೋರಾಟ ಸಮಿತಿಯ ಸಂಚಾಲಕ ತೀ.ನ.ಶ್ರೀನಿವಾಸ್ ಆರೋಪಿಸಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸುಪ್ರೀಂ ಕೋರ್ಟ್ ಅರಣ್ಯವಾಸಿಗಳಿಗೆ ಅರಣ್ಯ ಹಕ್ಕು ಕಾಯ್ದೆ ಪ್ರಕಾರ ನ್ಯಾಯಕೊಡಿ ಎಂದಿದ್ದರೂ ಕೋರ್ಟ್ ಆದೇಶ ಉಲ್ಲಂಘಿಸಿ ಸುಮಾರು 80 ಸಾವಿರ ರೈತರ ಅರ್ಜಿಗಳನ್ನು ವಜಾ ಮಾಡಲಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಮುಳುಗಡೆ ಸಂತ್ರ್ತರಿಗೆ ಕೊಟ್ಟ ಹಕ್ಕುಪತ್ರ ವಜಾ ಮಾಡಲು ಅರಣ್ಯ ಇಲಾಖೆ ಶಿಫಾರಸು ಮಾಡಿದಂತೆ ಪ್ರಕರಣ ದಾಖಲು ಮಾಡಲಾಗಿದೆ. ಕೋರ್ಟ್ ಆದೇಶದ ಹೆಸರಿನಲ್ಲಿ ಸುಮಾರು 40 ಸಾವಿರ ರೈತರ ಮೇಲೆ ಕಾನೂನುಬಾಹಿರ ಹಕ್ಕುಪತ್ರ ಪಡೆದಿದ್ದಾರೆ ಎಂದು ಆರೋಪಿಸಿದರು.

ಈ ರೈತರ ಸಮಸ್ಯೆಯನ್ನು ಬಗೆಹರಿಸಿ ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಆದೇಶ ಮಾಡಿ 14 ತಿಂಗಳು ಕಳೆದರೂ ಸಮಸ್ಯೆ ಬಗೆಹರಿದಿಲ್ಲ. ಸ್ಥಳ ಪರಿಶೀಲಿಸದೆ ಗ್ರಾಮಗಳಲ್ಲಿರುವ ರೈತರು ಭೂಮಿ ಹಕ್ಕಪತ್ರ ಪಡೆದಿರುವ ಕಾನು, ಸೊಪ್ಪಿನಬೆಟ್ಟ, ಜಾಡಿ, ದನಗಳಿಗೆ ಗೋಮಾಳ, ಹುಲ್ಲುಬನಿ ಎಂದಿರುವ ಪ್ರದೇಶಗಳನ್ನು ಸ್ಥಳೀಯ ಗ್ರಾಮ ಪಂಚಾಯ್ತಿಗಳು ಜನರ ಅಭಿಪ್ರಾಯ ಪಡೆಯದೇ ಅರಣ್ಯ ಎಂದು ಘೋಷಿಸಲಾಗಿದೆ. ಒಂದು ವೇಳೆ ಶರಾವತಿ ಮುಳುಗಡೆ ಸಂತ್ರಸ್ತರನ್ನು ಒಕ್ಕಲೆಬ್ಬಿಸುವ ಕ್ರಮ ಮುಂದುವರಿದರೆ ದೆಹಲಿ, ಬೆಳಗಾವಿ ಮಾದರಿ ಹೋರಾಟವನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸಾವಿರ ದಿನ ಪೂರೈಸಿದ್ದೇವೆ, ನುಡಿದಂತೆ ನಡೆದಿದ್ದೇವೆ ಎಂದು ಹೇಳುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಲೆನಾಡಿನ ರೈತರ ಸಮಸ್ಯೆ ಬಗೆಹರಿಸಲು ಒಂದು ಸಭೆ ನಡೆಸಲು ಒಂದು ದಿನವನ್ನು ನಿಗದಿಮಾಡದೆ ರೈತರ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಕಂದಾಯ ಮಂತ್ರಿ ಕೃಷ್ಣ ಭೈರೇಗೌಡ ಅವರು ರಾಜ್ಯದಲ್ಲೇ ಶಿವಮೊಗ್ಗ ಹೆಚ್ಚು ಭೂಮಿ ಸಮಸ್ಯೆಯನ್ನು ಹೊಂದಿದೆ. ಕಂದಾಯ ಇಲಾಖೆ ಕೊಟ್ಟ ಭೂಮಿಯನ್ನು ಅರಣ್ಯ ಇಲಾಖೆ ನಮ್ಮದು ಎಂದು ಹೇಳುತ್ತಿದೆ ಎಂದು ಮಾಧ್ಯಮದವರ ಎದುರು ಹೇಳುತ್ತಾರೆಯೇ ವಿನಃ, ಸಂತ್ರಸ್ತರ ಒಂದು ಸಭೆಯನ್ನೂ ಕರೆದಿಲ್ಲ. ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಅವರು ಶಿವಮೊಗ್ಗಕ್ಕೆ ಪಿಕ್‍ನಿಕ್‍ಗೆ ಬಂದಂತೆ ಬಂದು ಹೋಗುತ್ತಾರೆ. ಹೆದ್ದಾರಿ ಬದಿಯಲ್ಲಿರುವ ಕೆಲವು ಬಲಾಢ್ಯರ ಹಿತಾಸಕ್ತಿ ರಕ್ಷಿಸಲು ಸಂರಕ್ಷಿತ ಅಭಯಾರಣ್ಯವನ್ನು ಬೇರೆ ಕಡೆ ಸ್ಥಳಾಂತರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.

ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಸಿದ್ಧರಾಮಯ್ಯ, ಡಿ.ಕೆ.ಶಿವಕುಮಾರ್ ಶಿವಮೊಗ್ಗದಲ್ಲಿ ಸಾರ್ವಜನಿಕ ಸಭೆಗೆ ಆಗಮಿಸಿದ್ದಾಗ ಸಂತ್ರಸ್ತರ ಪರವಾಗಿ ಮನವಿಯನ್ನು ನೀಡಲಾಗಿತ್ತು. ಚುನಾವಣೆ ಮುಗಿದ ಬಳಿಕ ತಾವು ಅಧಿಕಾರಕ್ಕೆ ಬಂದರೆ ಸಂತ್ರಸ್ತರ ಸಮಸ್ಯೆಯನ್ನು ಬಗೆಹರಿಸುವುದಾಗಿ ಆಶ್ವಾಸನೆ ನೀಡಿದ್ದರು. ಆದರೆ ಅದು ಇನ್ನೂ ಈಡೇರಲಿಲ್ಲ. ಉಸ್ತುವಾರಿ ಸಚಿವ ಮಧುಬಂಗಾರಪ್ಪ ಅವರು ಮುಖ್ಯಮಂತ್ರಿಗಳಿಗೂ ರೈತರ ಸಮಸ್ಯೆ ಕುರಿತು ಸಮಸ್ಯೆ ಬಗೆಹರಿಸಲು ಒಂದು ವರ್ಷದ ಹಿಂದೆ ಪತ್ರಬರೆದರೂ ಮುಖ್ಯಮಂತ್ರಿಗಳ ಸಭೆ ನಿಗದಿ ಮಾಡಿಲ್ಲ. ಸಚಿವ ಮಧು ಬಂಗಾರಪ್ಪ ತಮ್ಮ ತಂದೆ ಬಂಗಾರಪ್ಪನವರು ರೈತರಿಗೆ ಭೂಮಿ ಕೊಟ್ಟಂತೆ ಮುಂದೆ ಬಂದು ರೈತರ, ಸಂತ್ರಸ್ತರ ಹಿತ ಕಾಪಾಡಬೇಕು ಎಂದು ಸಲಹೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಚಿವರ ಭರವಸೆ, ಧರಣಿ ಅಂತ್ಯಗೊಳಿಸಿದ ಗುತ್ತಿಗೆದಾರರು
ಇಸ್ಲಾಂ ಶ್ರೇಷ್ಠ ಧರ್ಮ ಹೇಳಿಕೆ ದುರದೃಷ್ಟಕರ; ಮಾಜಿ ಶಾಸಕ ರೆಡ್ಡಿ ಬೇಸರ