ಕೈಗಾರಿಕೋದ್ಯಮಿಗಳೊಂದಿಗೆ ಸಂವಾದದ ನಡೆಸಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ
ರಾಜ್ಯದಲ್ಲಿ ಪರಿಶಿಷ್ಟರ ಅಂತ್ಯಕ್ರಿಯೆಗೆ ಕೊಟ್ಟ ಚೆಕ್ ಬೌನ್ಸ್ ಆಗುವಷ್ಟರ ಮಟ್ಟಿಗೆ ಸರ್ಕಾರ ಆರ್ಥಿಕ ದಿವಾಳಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಾಗ್ದಾಳಿ ನಡೆಸಿದರು.
ಜಿಲ್ಲೆಗೆ ಬರ ಅಧ್ಯಯನ ನಡೆಸಲು ಆಗಮಿಸಿದ ಸಂದರ್ಭದಲ್ಲಿ ನಗರದಲ್ಲಿ ಕೈಗಾರಿಕೋದ್ಯಮಿಗಳೊಂದಿಗೆ ಸಂವಾದ ನಡೆಸಿ ಮಾತನಾಡಿದ ಅವರು, ಅನಗತ್ಯ ಉಚಿತ ಭಾಗ್ಯಗಳನ್ನು ಕೊಟ್ಟು ಸರ್ಕಾರ ದಿವಾಳಿಯಾಗುತ್ತಿದೆ. ಇದಕ್ಕೆ ಉದಾಹರಣೆಯಾಗಿ ಗೃಹ ಸಚಿವರ ಕ್ಷೇತ್ರದಲ್ಲಿ ಪರಿಶಿಷ್ಟರ ಅಂತ್ಯ ಸಂಸ್ಕಾರದ ಚೆಕ್ ಬೌನ್ಸ್ ಆಗಿದೆ. ಇದನ್ನು ಸೂಕ್ಷ್ಮವಾಗಿ ಗಮನಿಸಿದರೆ ರಾಜ್ಯ ಸರ್ಕಾರದ ಬೊಕ್ಕಸ ಆರ್ಥಿಕವಾಗಿ ದಿವಾಳಿಯಾಗಿದೆ ಎನ್ನುವುದು ಗೊತ್ತಾಗುತ್ತದೆ ಎಂದರು.ಜಿಲ್ಲೆಯಲ್ಲಿ ಇಬ್ಬರು ಸಚಿವರು ಇದ್ದರೂ ಸಹ ಬರ ಪರಿಸ್ಥಿತಿಯನ್ನು ವೀಕ್ಷಣೆ ಮಾಡಿಲ್ಲ. ರೈತರ ಬಳಿಗೆ ಹೋಗಿ ಅವರು ನೋವು-ನಲಿವನ್ನು ಆಲಿಸಿಲ್ಲ ಎಂದು ಆರೋಪಿಸಿದರು.
ಗ್ರಾಮಾಂತರ ಶಾಸಕ ಬಿ. ಸುರೇಶ್‌ಗೌಡ ಮಾತನಾಡಿ, ರಾಜ್ಯದ ಜನರಿಗೆ ಮಕ್ಮಾಲ್ ಟೋಪಿ ಹಾಕಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ರಾಜ್ಯದಲ್ಲಿ ತೀವ್ರ ಬರ ಬಂದಿದೆ. 3 ಗಂಟೆ ಕೂಡ ರೈತರಿಗೆ ತ್ರಿಫೇಸ್ ವಿದ್ಯುತ್ ಕೊಡುತ್ತಿಲ್ಲ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಗಾಳಿಯೂ ಬೀಸುತ್ತಿಲ್ಲ, ಮಳೆಯೂ ಬಂದಿಲ್ಲ ಎಂದು ಕುಟುಕಿದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಟಿ.ಜೆ.ಗಿರೀಶ್ ಪ್ರಾಸ್ತಾವಿಕ ನುಡಿಗಳನ್ನಾಡಿ, ನಮ್ಮ ಸಂಸ್ಥೆಯು 2000 ಇಸ್ವಿಯಲ್ಲಿ ಪ್ರಾರಂಭಗೊಂಡು ಕಾಲಕಾಲಕ್ಕೆ ಬದಲಾವಣೆಯಾಗುವ ನಿಯಮಗಳನ್ನು ಅಳಪಡಿಸಿಕೊಂಡು ಸರ್ಕಾರ ಮತ್ತು ಕೈಗಾರಿಕೆಗಳ ಸೇತುವೆಯಾಗಿ 24 ವರ್ಷಗಳಿಂದ ಸೇವೆ ಸಲ್ಲಿಸುತ್ತಿದೆ. ಜಿಲ್ಲೆಯ ಕೈಗಾರಿಕೆ ಅಭಿವೃದ್ಧಿ ಹೊಂದಲು ಮತ್ತು ಸಮಸ್ಯೆ ಆಲಿಸಲು ಯಡಿಯೂರಪ್ಪನವರು ಬಂದಿರುವುದು ಸಂತಸ ತಂದಿದೆ ಎಂದರು.
ಕಾರ್ಮಿಕರ ಕನಿಷ್ಠ ವೇತನ 21 ಸಾವಿರದಿಂದ 31 ಸಾವಿರಕ್ಕೆ ನಿಗದಿಪಡಿಸಲಾಗಿದೆ. ಇದರಿಂದ ಕೈಗಾರಿಕೋದ್ಯಮಿಗಳಿಗೆ ಹೊಡೆತ ಬೀಳಲಿದ್ದು, ಕೈಗಾರಿಕೆಗಳನ್ನು ಮುಚ್ಚಬೇಕಾಗುತ್ತದೆ. ಹಾಗಾಗಿ ಈ ಹಿಂದಿನಂತೆ ಕನಿಷ್ಠ ವೇತನ ಮುಂದುವರೆಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಸದ ಜಿ.ಎಸ್. ಬಸವರಾಜು, ಶಾಸಕ ಜ್ಯೋತಿಗಣೇಶ್, ಮಾಜಿ ಸಚಿವ ಬಿ.ಸಿ. ನಾಗೇಶ್, ಮಾಜಿ ಸಂಸದ ಎಸ್.ಪಿ. ಮುದ್ದಹನುಮೇಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಡಾ. ಎಂ.ಆರ್. ಹುಲಿನಾಯ್ಕರ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಹೆಬ್ಬಾಕ ರವಿಶಂಕರ್, ಟಿ.ಆರ್. ಸದಾಶಿವಯ್ಯ ಮತ್ತಿತರರು ಭಾಗವಹಿಸಿದ್ದರು.