ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಚಿತ್ರದುರ್ಗ ತಾಲೂಕು ತುರುವನೂರು ಗ್ರಾಮದ ಪ್ರೌಢಶಾಲಾ ಆವರಣದಲ್ಲಿ ಮಂಗಳವಾರ ಆಯೋಜಿಸಲಾದ ಹೋಬಳಿ ಮಟ್ಟದ ಪಂಚ ಗ್ಯಾರಂಟಿ ಯೋಜನಗಳ ಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಈ ಬಾರಿ ಬಜೆಟ್‍ನ ಸುಮಾರು ₹50 ಸಾವಿರ ಕೋಟಿಗೂ ಅಧಿಕ ಹಣವನ್ನು ಗ್ಯಾರಂಟಿ ಯೋಜನೆಗಳಿಗಾಗಿ ಮೀಸಲು ಇರಿಸಲಾಗಿದೆ. ಕಳೆದ ಜೂನ್ 21 ರಂದು ಶಕ್ತಿ ಯೋಜನೆಗೆ ಚಾಲನೆ ನೀಡಲಾಯಿತು. ಇದರಿಂದ ರಾಜ್ಯದ ಎಲ್ಲಾ ವರ್ಗದ ಮಹಿಳೆಯರು ಉಚಿತವಾಗಿ ರಾಜ್ಯಾದ್ಯಂತ ಪ್ರಯಾಣ ಮಾಡುವ ಅವಕಾಶ ಲಭಿಸಿದೆ ಎಂದರು.
ಚುನಾವಣೆ ಸಂದರ್ಭದಲ್ಲಿ ಜನರಿಗೆ ಅನ್ನಭಾಗ್ಯ, ಗೃಹಲಕ್ಷ್ಮೀ, ಗೃಹಜ್ಯೋತಿ, ಶಕ್ತಿ ಹಾಗೂ ಯುವನಿಧಿ ಯೋಜನೆಗಳನ್ನು ಜಾರಿ ಮಾಡುವ ಭರವಸೆಯನ್ನು ಪ್ರಣಾಳಿಕೆಯಲ್ಲಿ ನೀಡಲಾಗಿತ್ತು. ವಿರೋಧ ಪಕ್ಷಗಳು ಈ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುವುದು ಸಾಧ್ಯವಿಲ್ಲ. ಒಂದು ವೇಳೆ ಜಾರಿ ಮಾಡಿದರೆ ರಾಜ್ಯ ದಿವಾಳಿಯಾಗುತ್ತದೆ ಎಂದು ಟೀಕೆ ಮಾಡುವುದರೊಂದಿಗೆ, ಕುಹಕದ ಮಾತುಗಳನ್ನು ಆಡಿದ್ದವು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದ ಸರ್ಕಾರ, ಕೊಟ್ಟ ಮಾತಿನಂತೆ ಯೋಜನೆಗಳನ್ನು ಯಶಸ್ವಿಯಾಗಿ ಜಾರಿ ಮಾಡಿ, ಟೀಕೆ ಟಿಪ್ಪಣಿ ಹಾಗೂ ಕುಹಕಗಳಿಗೆ ತಕ್ಕ ಉತ್ತರ ನೀಡಿದೆ ಎಂದರು.ಚುನಾವಣೆ ಸಂದರ್ಭದಲ್ಲಿ ನೀಡುತ್ತಿದ್ದ ಆಶ್ವಾಸನೆಗಳನ್ನು ಈಡೇರಿಸುವ ಬದ್ಧತೆಗೆ ಹೊಸ ರೂಪವಾಗಿ ಗ್ಯಾರಂಟಿ ಎಂಬ ಮಾತು ಪ್ರಚಲಿತವಾಗಿದೆ. ಮಾರುಕಟ್ಟೆಯಲ್ಲಿ ಖರೀದಿಸುವ ವಸ್ತುಗಳಿಗೆ ತಯಾರಕರು ಗ್ಯಾರಂಟಿ ಅವಧಿ ಕಾರ್ಡುಗಳನ್ನು ನೀಡುತ್ತಾರೆ. ಅದೇ ರೀತಿ ಸರ್ಕಾರವು ಪ್ರಣಾಳಿಕೆಯಲ್ಲಿ ನೀಡಿದ ಆಶ್ವಾಸನೆ ಈಡೇರಿಸುವ ಬದ್ಧತೆ ತೋರಬೇಕು. ತುರುವನೂರು ಹೋಬಳಿಯಲ್ಲಿ ಶೇ.95ರಷ್ಟು ಎಲ್ಲಾ ಗ್ಯಾರಂಟಿ ಯೋಜನೆ ಫಲಾನುಭವಿಗಳಿಗೆ ನೀಡಲಾಗಿದೆ. ದಾಖಲೆಗಳ ಕೊರತೆ ಹಾಗೂ ತಾಂತ್ರಿಕ ಕಾರಣಗಳಿಂದ ಹಲವು ಜನರ ಅರ್ಜಿಗಳಲ್ಲಿ ತೊಂದರೆ ಉಂಟಾಗಿದೆ. ಇದನ್ನು ಸಹ ಸರಿಪಡಿಸಿ 100ಕ್ಕೆ 100 ರಷ್ಟು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುವುದಾಗಿ ಶಾಸಕ ಟಿ.ರಘುಮೂರ್ತಿ ಹೇಳಿದರು.
ಇದೇ ವೇಳೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಯಿತು. ಇದರ ಅಂಗವಾಗಿ ಗ್ರಾಮದ ಪ್ರೌಢಶಾಲಾ ವಿಧ್ಯಾರ್ಥಿನಿಯರಿಗೆ ಏರ್ಪಡಿಸಲಾದ ಪ್ರಬಂಧ, ಚಿತ್ರಕಲೆ, ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ವೇದಿಕೆಯಲ್ಲಿ ಸನ್ಮಾನಿಸಿ ಪ್ರಮಾಣ ಪತ್ರ ವಿತರಿಸಲಾಯಿತು.