ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ: ಬಂಡಿ

KannadaprabhaNewsNetwork | Published : Nov 16, 2024 12:31 AM

ಸಾರಾಂಶ

ರಾಜ್ಯ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಘೋಷಿಸಿದ ಗ್ಯಾರಂಟಿ ಜನರನ್ನು ಆಕರ್ಷಿಸಿದ ಪರಿಣಾಮ ರಾಜ್ಯದಲ್ಲಿ ಆಡಳಿತಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರವು ಅಭಿವೃದ್ಧಿಯನ್ನು ಸಂಪೂರ್ಣವಾಗಿ ಮರೆತಿದೆ

ಗಜೇಂದ್ರಗಡ: ರಾಜ್ಯದ ಜನರಿಗೆ ಗ್ಯಾರಂಟಿ ಯೋಜನೆಗಳ ಮೂಲಕ ದಿಕ್ಕು ತಪ್ಪಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವು ಅಭಿವೃದ್ಧಿಯನ್ನು ಮರೆತು ಭ್ರಷ್ಟಾಚಾರದಲ್ಲಿ ಮುಳಗಿದೆ ಎಂದು ಮಾಜಿ ಸಚಿವ ಕಳಕಪ್ಪ ಬಂಡಿ ಹೇಳಿದರು.

ಸ್ಥಳೀಯ ಬಿಜೆಪಿ ಕಾರ್ಯಾಲಯದಲ್ಲಿ ಬಿಜೆಪಿ ರೋಣ ಮಂಡಲ ಹಾಗೂ ಗಜೇಂದ್ರಗಡ ನಗರ ಘಟಕದಿಂದ ಶುಕ್ರವಾರ ನಡೆದ ಸಂಘಟನಾ ಪರ್ವ ಅಭಿಯಾನದಲ್ಲಿ ಮಾತನಾಡಿದರು.

ರಾಜ್ಯ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಘೋಷಿಸಿದ ಗ್ಯಾರಂಟಿ ಜನರನ್ನು ಆಕರ್ಷಿಸಿದ ಪರಿಣಾಮ ರಾಜ್ಯದಲ್ಲಿ ಆಡಳಿತಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರವು ಅಭಿವೃದ್ಧಿಯನ್ನು ಸಂಪೂರ್ಣವಾಗಿ ಮರೆತಿದೆ. ಪರಿಣಾಮ ಘೋಷಿಸಿದ ಯೋಜನೆ ಜಾರಿಗೆ ತರಲು ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಸಿಎಂ ಸಿದ್ದರಾಮಯ್ಯ ಸರ್ಕಾರದ ಕೆಲ ಸಚಿವರ ಮೇಲೆ ಹಾಗೂ ಶಾಸಕರ ಮೇಲೆ ಗಂಭೀರ ಭ್ರಷ್ಟಾಚಾರದ ಆರೋಪಗಳಿವೆ. ಪರಿಣಾಮ ಈಗಾಗಲೇ ಸಚಿವರೊಬ್ಬರು ಜೈಲಿಗೆ ಹೋಗಿ ಬಂದಿದ್ದು, ಇನ್ನು ಮುಂದಿನ ಸರದಿ ಯಾರದ್ದು ಎನ್ನುವ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಸರ್ಕಾರದಲ್ಲಿ ಚರ್ಚೆಗಳು ನಡೆಯುತ್ತಿವೆ ಎಂದು ಲೇವಡಿ ಮಾಡಿದ ಅವರು, ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ಪಕ್ಷದ ಸದಸ್ಯತ್ವ ಪಡೆಯುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅತಿ ಹೆಚ್ಚು ಕಾರ್ಯಕರ್ತರನ್ನು ಹೊಂದಿರುವ ಬಿಜೆಪಿಗೆ ಮುಂದಿನ ದಿನಗಳಲ್ಲಿ ಹೊಸ ಪದಾಧಿಕಾರಿಗಳ ನೇಮಕವಾಗಲಿದೆ. ನಿಷ್ಠಾವಂತ ಕಾರ್ಯಕರ್ತರೇ ಮೊದಲ ಆದ್ಯತೆ ಆಗಲಿದ್ದು, ನೀವು ಸಹ ಪಕ್ಷದ ಹುದ್ದೆಗಳನ್ನು ಹೊತ್ತು ಪಕ್ಷವನ್ನು ಮತ್ತಷ್ಟು ಬಲಿಷ್ಠಗೊಳಿಸಲು ಶ್ರಮಿಸಬೇಕು. ರಾಜ್ಯದ ಕಾಂಗ್ರೆಸ್ ಸರ್ಕಾರದ ದುರಾಡಳಿತ ಹಾಗೂ ಭ್ರಷ್ಟಾಚಾರವನ್ನು ಮನೆ, ಮನೆಗೆ ತಲುಪಿಸುವ ಕಾರ್ಯ ಮಾಡೋಣ ಎಂದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ, ಆರ್.ಕೆ. ಚವ್ಹಾಣ, ಎಸ್‌ಟಿ ಮೋರ್ಚಾದ ರಾಜ್ಯ ಸದಸ್ಯ ಎಚ್.ಕೆ. ಹಟ್ಟಿಮನಿ, ರೋಣ ಮಂಡಲ ಅಧ್ಯಕ್ಷ ಮುತ್ತಣ್ಣ ಕಡಗದ, ನಗರ ಘಟಕದ ಅಧ್ಯಕ್ಷ ರಾಜೇಂದ್ರ ಘೋರ್ಪಡೆ, ಅಶೋಕ ನವಲಗುಂದ, ಉಮೇಶ ಮಲ್ಲಾಪುರ, ಬಾಲಾಜಿರಾವ್ ಬೋಸಲೆ, ಶರಣಪ್ಪ ಪ್ಯಾಟಿ ಸೇರಿ ಶಕ್ತಿ ಕೇಂದ್ರದ ಪ್ರಮುಖರು ಇದ್ದರು.

Share this article