ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಬೇಸರಗೊಂಡು ತನ್ನ ಪತಿಗೆ ನೇಣಿನ ಕುಣಿಕೆಯ ಫೋಟೋವನ್ನು ವಾಟ್ಸಪ್‌ನಲ್ಲಿ ಕಳುಹಿಸಿ ನವ ವಿವಾಹಿತೆಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಯಶವಂತಪುರ ಪೊಲೀಸ್ ಠಾಣಾ ವ್ಯಾಪ್ತಿ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಬೇಸರಗೊಂಡು ತನ್ನ ಪತಿಗೆ ನೇಣಿನ ಕುಣಿಕೆಯ ಫೋಟೋವನ್ನು ವಾಟ್ಸಪ್‌ನಲ್ಲಿ ಕಳುಹಿಸಿ ನವ ವಿವಾಹಿತೆಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಯಶವಂತಪುರ ಪೊಲೀಸ್ ಠಾಣಾ ವ್ಯಾಪ್ತಿ ನಡೆದಿದೆ.

ಎಸ್‌.ಎಲ್‌.ನಗರದ ನಿವಾಸಿ ಶಾರದಾ (40) ಮೃತ ದುರ್ದೈವಿ. ವರದಕ್ಷಿಣೆ ಕಿರುಕುಳದ ಆರೋಪದ ಮೇರೆಗೆ ಮೃತಳ ಪತಿ ಮಹೇಶ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಮನೆಯಲ್ಲಿ ಮಂಗಳವಾರ ರಾತ್ರಿ ಶಾರದ ಆತ್ಮಹತ್ಯೆ ಮಾಡಿಕೊಂಡಿದ್ದು, ಮರುದಿನ ಮೃತಳ ಕೋಣೆಗೆ ಕುಟುಂಬದವರು ತೆರಳಿದ್ದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ 9 ತಿಂಗಳ ಹಿಂದಷ್ಟೇ ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಶಾರದಾ ಹಾಗೂ ಮಹೇಶ್ ವಿವಾಹವಾಗಿದ್ದು, ಮದುವೆ ಬಳಿಕ ಎಸ್‌ಎಲ್‌ ನಗರದಲ್ಲಿ ಅವರು ನೆಲೆಸಿದ್ದರು. ಇತ್ತೀಚಿಗೆ ಕೌಟುಂಬಿಕ ವಿಚಾರವಾಗಿ ಸತಿ-ಪತಿ ಮಧ್ಯೆ ಮನಸ್ತಾಪವಾಗಿದೆ. ಇದರಿಂದ ಬೇಸರಗೊಂಡು ಆಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಮನೆಯಲ್ಲಿ ಮಂಗಳವಾರ ರಾತ್ರಿ ನಡುಮನೆಯಲ್ಲಿ ಮಹೇಶ್ ಮಲಗಿದ್ದರು. ಆಗ ರಾತ್ರಿ 1.30ರ ಸುಮಾರಿಗೆ ಪತಿಗೆ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ನೇಣಿನ ಕುಣಿಕೆಯ ವಾಟ್ಸಪ್‌ ನಲ್ಲಿ ಪೋಟೋವನ್ನು ಶಾರಾದ ಕಳುಹಿಸಿದ್ದಾರೆ. ಆದರೆ ಮಧ್ಯರಾತ್ರಿ ನಿದ್ರೆಯಲ್ಲಿದ್ದ ಪರಿಣಾಮ ವಾಟ್ಸಪ್ ಸಂದೇಶವನ್ನು ಮಹೇಶ್ ನೋಡಿರಲಿಲ್ಲ. ಮರುದಿನ ಬೆಳಗ್ಗೆ ಎದ್ದು ಮೊಬೈಲ್‌ನಲ್ಲಿ ವಾಟ್ಸಪ್ ನೋಡಿದಾಗ ಅವರಿಗೆ ದಿಗಿಲಾಗಿದೆ. ಕೂಡಲೇ ಕೋಣೆಗೆ ತೆರಳಿದಾಗ ನೇಣಿನ ಕುಣಿಕೆಯಲ್ಲಿ ಪತ್ನಿ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಮ್ಮ ಸೋದರಿ ಸಾವಿಗೆ ವರದಕ್ಷಿಣೆ ಕಿರುಕುಳ ಕಾರಣವಾಗಿದೆ ಎಂದು ಆರೋಪಿಸಿ ಯಶವಂತಪುರ ಠಾಣೆಗೆ ಮೃತಳ ಸೋದರ ದೂರು ನೀಡಿದ್ದರು. ಅದರನ್ವಯ ಎಫ್‌ಐಆರ್ ದಾಖಲಿಸಿ ಮೃತಳ ಪತಿ ಮಹೇಶ್‌ನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.