ಕನ್ನಡಪ್ರಭ ವಾರ್ತೆ ಬೆಳಗಾವಿ

ಅನಗೋಳ ಪ್ರದೇಶದಲ್ಲಿ ನಡೆದ ಕಳ್ಳತನ ಪ್ರಕರಣವನ್ನು ಭೇದಿಸಿರುವ ತಿಲಕವಾಡಿ ಪೊಲೀಸರು ಇಬ್ಬರು ಆರೋಪಿತರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೂಲತಃ ಚಿತ್ರದುರ್ಗದ ಹಾಲಿ ಪೀರನವಾಡಿಯ ಉಜ್ವಲಾ ರವಿ ಕಮ್ಮಾರ(40) ಮತ್ತು ಹಿಂಡಲಗಾ ನಿವಾಸಿ ಶಿವಾ ಶಂಕರ ಅಪ್ಪಯ್ಯನವರ(30) ಬಂಧಿತ ಆರೋಪಿಗಳು. ಆರೋಪಿಗಳಿಂದ ₹ 16.57 ಲಕ್ಷ ಮೌಲ್ಯದ ಒಟ್ಟು 110.49 ಗ್ರಾಂ ತೂಕದ ಬಂಗಾರದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಆಭರಣಗಳಲ್ಲಿ ಚೈನ್‌ಗಳು, ಉಂಗುರಗಳು ಸೇರಿದಂತೆ ವಿವಿಧ ಬಂಗಾರದ ವಸ್ತುಗಳು ಸೇರಿವೆ.

ಈ ಕಾರ್ಯಾಚರಣೆಯಲ್ಲಿ ತಿಳಕವಾಡಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಪರಶುರಾಮ ಪೂಜೇರಿ ನೇತೃತ್ವದಲ್ಲಿ ಪಿಎಸ್‌ಐ ವಿಶ್ವನಾಥ ಘಂಟಾಮಠ, ಪಿಎಸ್‌ಐ ಪ್ರಭಾಕರ ಡೊಳ್ಳಿ ಹಾಗೂ ಸಿಬ್ಬಂದಿಗಳಾದ ಮಹೇಶ್ ಪಾಟೀಲ, ಕರಲಿಂಗಣ್ಣವರ, ಲಾಡಜಿಸಾಬ ಮುಲ್ತಾನಿ, ಸತೀಶ ಗಿರಿ, ಲಕ್ಷ್ಮೀ ಡೇಳಿಜ್, ಮಮತಾ ಬಿ.ಜೆ. ಮತ್ತು ಟೆಕ್ನಿಕಲ್ ಸೆಲ್‌ನ ರಮೇಶ್ ಅಕ್ಕಿ, ಮಹಾದೇವ ಖಾಸೀದ ಭಾಗವಹಿಸಿದ್ದರು. ತಂಡದ ಕಾರ್ಯವನ್ನು ಮೆಚ್ಚಿದ ಬೆಳಗಾವಿ ನಗರ ಪೊಲೀಸ್ ಆಯುಕ್ತರು ಸಂಬಂಧಿಸಿದ ಅಧಿಕಾರಿಗಳಿಗೆ ಬಹುಮಾನ ಘೋಷಿಸಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಟಿಳಕವಾಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.