ಕನ್ನಡಪ್ರಭ ವಾರ್ತೆ ಬೆಂಗಳೂರು

ಜಮೀನಿನಲ್ಲಿ ಸಿಕ್ಕಿದ ಬಂಗಾರವನ್ನು ಕಡಿಮೆ ಬೆಲೆಗೆ ಕೊಡುವುದಾಗಿ ನಂಬಿಸಿ ಉದ್ಯಮಿಯಿಂದ 25 ಲಕ್ಷ ರು. ಹಣ ಪಡೆದು ಮೋಸ ಮಾಡಿದ್ದ ವಂಚಕನನ್ನು ತಿಲಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಳ್ಳಾರಿ ಜಿಲ್ಲೆ ಹರಪ್ಪನಹಳ್ಳಿ ತಾಲೂಕಿನ ಶೀಬು ಅಲಿಯಾಸ್ ಹನುಮಂತಪ್ಪ ಬಂಧಿತನಾಗಿದ್ದು, ಆರೋಪಿಯಿಂದ 19.93 ಲಕ್ಷ ರು. ಹಣವನ್ನು ಜಪ್ತಿ ಮಾಡಲಾಗಿದೆ. ಈ ಕೃತ್ಯದಲ್ಲಿ ತಲೆಮರೆಸಿಕೊಂಡಿರುವ ಇತರ ಮೂವರು ಆರೋಪಿಗಳಿಗೆ ಪೊಲೀಸರು ಬಲೆ ಬೀಸಿದ್ದಾರೆ.

2 ತಿಂಗಳ ಹಿಂದೆ ಕಡಿಮೆ ಬೆಲೆಗೆ ಬಂಗಾರ ನೀಡುವುದಾಗಿ ನಂಬಿಸಿ ಕಾರ್ ಡೀಲರ್ ಶಿಶಿರ್ ಅವರಿಗೆ ನಕಲಿ ಚಿನ್ನ ಕೊಟ್ಟು ದುಷ್ಕರ್ಮಿಗಳು ಮೋಸ ಮಾಡಿದ್ದರು. ಸಬ್ ಇನ್ಸ್‌ಪೆಕ್ಟರ್ ಮಹೇಶ್ ನೇತೃತ್ವದ ತಂಡ ಮೊಬೈಲ್ ಕರೆಗಳು ಹಾಗೂ ಬಾತ್ಮೀದಾರರ ಮಾಹಿತಿ ಪಡೆದು ಬಳ್ಳಾರಿ ಜಿಲ್ಲೆ ಹರಪನಹಳ್ಳಿಯಲ್ಲಿ ಆರೋಪಿಯನ್ನು ಬಂಧಿಸಿ ಕರೆತಂದಿದ್ದಾರೆ.

ಹೇಗೆ ವಂಚನೆ


ಹಲವು ವರ್ಷಗಳಿಂದ ವಿಜಯನಗರದಲ್ಲಿ ಕೇರಳ ಮೂಲದ ಶಿಶಿರ್ ನೆಲೆಸಿದ್ದು, ನಗರದಲ್ಲಿ ಅವರು ಕಾರ್ ಡೀಲರ್ ಆಗಿದ್ದಾರೆ. ಶಿಶಿರ್ ಅವರಿಗೆ ಕೇರಳದ ಸಿಯಾನ್ ಹಾಗೂ ಕೌಶಿಕ್ ಜತೆ ಹಳೆಯ ಸ್ನೇಹವಿದೆ. ಈ ಗೆಳೆತನದಲ್ಲಿ 2 ತಿಂಗಳ ಹಿಂದೆ ಶಿಶಿರ್ ಅವರಿಗೆ ಕರೆ ಮಾಡಿ ‘ಬಂಗಾರ’ ಖರೀದಿ ಬಗ್ಗೆ ಸ್ನೇಹಿತರು ಪ್ರಸ್ತಾಪಿಸಿದ್ದರು. ತಮಗೆ ಪರಿಚಿತ ರೈತನ ಭೂಮಿಯಲ್ಲಿ ಉಳುಮೆ ಮಾಡುವಾಗ 1.5 ಕೆಜಿ ಚಿನ್ನ ಸಿಕ್ಕಿದೆ. ಇದನ್ನು ಕಡಿಮೆ ಬೆಲೆಗೆ ಆತ ಮಾರಲು ಮುಂದಾಗಿದ್ದೇನೆ. ನಮಗೆ ಆತ ಪರಿಚಿತ ವ್ಯಕ್ತಿ. ನೀನು ಒಪ್ಪಿದ್ದರೆ ನಿನಗೆ ಕೊಡಿಸುತ್ತೇವೆ’ ಎಂದು ಆರೋಪಿಗಳು ಆಸೆ ತೋರಿಸಿದ್ದರು. ಅಂತೆಯೇ ಏ.22 ರಂದು ತಿಲಕನಗರದ ಸಮೀಪದ ಹೋಟೆಲ್‌ಗೆ ಮಾತುಕತೆಗೆ ಶಿಶಿರ್‌ ಅನ್ನು ಆರೋಪಿಗಳು ಕರೆಸಿದ್ದರು. ಆಗ ಹರಪನಹಳ್ಳಿ ಕೃಷಿಕ ಎಂದು ಹನುಮಂತಪ್ಪನನ್ನು ಶಿಶಿರ್‌ಗೆ ಆತನ ಸ್ನೇಹಿತರು ಪರಿಚಯಿಸಿದ್ದರು. ಈ ವೇಳೆ ರೈತನ ನಾಟಕವಾಡಿ ದೂರುದಾರರಿಗೆ ಮತ್ತಷ್ಟು ನಂಬಿಕೆಯನ್ನು ಹನುಮಂತಪ್ಪ ಮೂಡಿಸಿದ್ದಾನೆ.

ಈ ವಿಶ್ವಾಸದಲ್ಲೇ 2 ಲಕ್ಷ ರು. ಹಣವನ್ನು ಆತನಿಗೆ ಮುಂಗಡವಾಗಿ ದೂರುದಾರ ನೀಡಿದ. ಕೆಲ ದಿನಗಳ ನಂತರ ಹರಪನಹಳ್ಳಿ ತಾಲೂಕಿಗೆ ಕರೆದೊಯ್ದು 1.5 ಕೆಜಿ ಬಂಗಾರವನ್ನು ಶಿಶಿರ್ ಅವರಿಗೆ ಕೊಟ್ಟು 25 ಲಕ್ಷ ರು.ಹಣವನ್ನು ಆರೋಪಿಗಳು ಪಡೆದಿದ್ದರು. ಆದರೆ ಮನೆಗೆ ಬಂದು ಪರಿಶೀಲಿಸಿದಾಗ ಬಂಗಾರ ಅಲ್ಲ ಕಾಗೆ ಬಂಗಾರ ಎಂಬುದು ಗೊತ್ತಾಗಿದೆ. ಕೊನೆಗೆ ತಮಗೆ ಕಡಿಮೆ ಬೆಲೆ ಚಿನ್ನ ಕೊಡುವುದಾಗಿ ನಂಬಿಸಿ ನಕಲಿ ಚಿನ್ನ ಕೊಟ್ಟಿರುವವರ ವಿರುದ್ಧ ಕ್ರಮ ಜರುಗಿಸುವಂತೆ ತಿಲಕನಗರ ಠಾಣೆಗೆ ಶಿಶಿರ್ ದೂರು ನೀಡಿದರು. ಅದರನ್ವಯ ತಾಂತ್ರಿಕ ಮಾಹಿತಿ ಆಧರಿಸಿ ಹನುಮಂತಪ್ಪನ್ನು ಬಂಧಿಸಿದ್ದಾರೆ.