ಕನ್ನಡಪ್ರಭ ವಾರ್ತೆ ಬೆಂಗಳೂರು

ನಾಡಪ್ರಭು ಕೆಂಪೇಗೌಡರ 517ನೇ ಜಯಂತಿ ಅಂಗವಾಗಿ ಬೆಂಗಳೂರು ನಗರದಲ್ಲಿ 15 ಲಕ್ಷ ಗಿಡ ನೆಡುವ ಕಾರ್ಯಕ್ರಮಕ್ಕೆ ಶನಿವಾರ ಬೆಳಗ್ಗೆ 7.15ಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮತ್ತು ಬಿಡಿಎ ಅಧ್ಯಕ್ಷ ಎನ್‌.ಎ.ಹ್ಯಾರೀಸ್‌ ಅವರು ಚಾಲನೆ ನೀಡಲಿದ್ದಾರೆ.

ಬೆಂಗಳೂರನ್ನು ಐಟಿ ಹಬ್‌ ಮಾತ್ರವಲ್ಲದೆ ಹಸಿರು ನಗರನ್ನಾಗಿ ಪರಿವರ್ತಿಸುವ ದೂರದೃಷ್ಟಿಯಿಂದ ದೀರ್ಘಕಾಲದ ಪರಿಸರ ಸುಸ್ಥಿರತೆಗಾಗಿ 15ಲಕ್ಷ ಸಸಿ ನೆಡುವ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಚಲ್ಲಘಟ್ಟ ಮೆಟ್ರೋ ನಿಲ್ಧಾಣದ ಬಳಿಯಿಂದ 10ಕೆ ರನ್‌ ಮತ್ತು 5ಕೆ ವಾಕಥಾನ್‌ ಹಾಗೂ 15 ಲಕ್ಷ ಸಸಿ ನೆಡುವ ಅಭಿಯಾನ ಆರಂಭಗೊಳ್ಳಲಿದ್ದು ವಿವಿಧ ಇಲಾಖೆಯ ಅಧಿಕಾರಿ ಸಿಬ್ಬಂದಿಗಳು ಮತ್ತು ಸಂಘಸಂಸ್ಥೆಗಳು ಸೇರಿದಂತೆ ಸುಮಾರು ಒಂದು ಲಕ್ಷಕ್ಕೂ ಅಧಿಕ ಸ್ವಯಂಸೇವಕರು ಪಾಲ್ಗೊಳ್ಳಿದ್ದಾರೆ. ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಒಂದರಲ್ಲೇ 5 ಲಕ್ಷ ಸಸಿಗಳು ನೆಡಲಾಗುತ್ತಿದೆ.

ಉಳಿದ 10 ಲಕ್ಷ ಸಸಿಗಳನ್ನು ಬನಶಂಕರಿ 6ನೇ ಹಂತ ಸೇರಿದಂತೆ ಇತರ ಬಿಡಿಎ ಬಡಾವಣೆಗಳಲ್ಲಿ ಹಾಗೂ ಪ್ರಮುಖ ರಸ್ತೆಗಳ ಬದಿಗಳಲ್ಲಿ ವಿತರಿಸಿ ನೆಡಲಾಗುವುದು. ಒಟ್ಟಾರೆಯಾಗಿ ಈ ಯೋಜನೆಯು 15 ಲಕ್ಷ ಸಸಿಗಳನ್ನು ನೆಡುವ ಗುರಿ ಹೊಂದಿದೆ. ಮಾವು, ಹಲಸು, ಬೇವಿನ ಮರ, ಸಪೋಟ ಮುಂತಾದ ವೈವಿಧ್ಯಮಯ ಸ್ಥಳೀಯ ಮತ್ತು ಔಷಧೀಯ ಪ್ರಬೇಧಗಳೊಂದಿಗೆ ಸುಮಾರು 350 ಬಗೆಯ ಸ್ಥಳೀಯ ಔಷಧೀಯ ಸಸ್ಯಗಳನ್ನು ನೆಡಲು ಉದ್ದೇಶಿಸಲಾಗಿದೆ.