ಕನ್ನಡಪ್ರಭ ವಾರ್ತೆ ಬೆಂಗಳೂರು
ಹೆಬ್ಬಾಳ ಪಶುವೈದ್ಯಕೀಯ ಕಾಲೇಜಿನಿಂದ ಹೆಬ್ಬಾಳ ಕೆರೆವರೆಗೆ 2.2 ಕಿ.ಮೀ. ಉದ್ದದ 6 ಪಥದ ಕಿರು ಸುರಂಗ ರಸ್ತೆಗೆ 3-4 ದಿನಗಳಲ್ಲಿ ಗುದ್ದಲಿ ಪೂಜೆ ನೆರವೇರಿಸಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ರಾಜ್ಯ ಸರ್ಕಾರ ಸಿದ್ಧತೆ ನಡೆಸಿದ್ದಾರೆ. ಅಲ್ಲದೆ, ಹೆಬ್ಬಾಳದ ಎಸ್ಟೀಮ್ ಮಾಲ್‌ನಿಂದ ಸಿಲ್ಕ್‌ಬೋರ್ಡ್‌ವರೆಗಿನ 16.74 ಕಿ.ಮೀ. ಉದ್ದದ ಟನಲ್ ರಸ್ತೆ ನಿರ್ಮಾಣಕ್ಕೆ ಅದಾನಿ ಸೇರಿದಂತೆ 2 ಸಂಸ್ಥೆ ಮಾತ್ರ ಮುಂದೆ ಬಂದಿವೆ. ಹೀಗಾಗಿ ಕಾಂಗ್ರೆಸ್ ಹೈಕಮಾಂಡ್‌ಗೆ ಈ ಬಗ್ಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗಮನಕ್ಕೆ ತಂದಿದ್ದಾರೆ. ಹೈಕಮಾಂಡ್ ಒಪ್ಪಿಗೆ ನೀಡಿದರೆ ಆ ಯೋಜನೆಗೂ ಚಾಲನೆ ದೊರೆಯಲಿದೆ ಎಂದು ಮೂಲಗಳು ತಿಳಿಸಿವೆ.ಹೆಬ್ಬಾಳ ಪಶು ವೈದ್ಯಕೀಯ ಕಾಲೇಜಿನಿಂದ ಹೆಬ್ಬಾಳ ಕೆರೆವರೆಗೆ ಟೋಲ್ ರಹಿತ ಟನಲ್ ರಸ್ತೆ ನಿರ್ಮಾಣ ಮಾಡಲಾಗುತ್ತಿದ್ದು, ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಗಿದಿದೆ.
ಬಿಡಿಎಯಿಂದ 7,000 ಕೋಟಿ ರು.:ಹೆಬ್ಬಾಳ-ಸಿಲ್ಕ್‌ಬೋರ್ಡ್ ಟನಲ್ ರಸ್ತೆಯನ್ನು ಬೂಟ್ ಮಾದರಿಯಲ್ಲಿ ನಿರ್ಮಿಸುತ್ತಿದ್ದು, ಒಟ್ಟಾರೆ ಯೋಜನಾ ವೆಚ್ಚದ ಶೇ.40 ರಷ್ಟು ಹಣವನ್ನು ವಿಜಿಎಫ್ (ವಯಾಬಿಲಿಟಿ ಗ್ಯಾಪ್ ಫಂಡಿಂಗ್) ಆಗಿ ಸರ್ಕಾರ ಭರಿಸಬೇಕಾಗುತ್ತದೆ. ಇದಕ್ಕಾಗಿ ಬಿಡಿಎಯಿಂದ 7,000 ಕೋಟಿ ರು. ಒದಗಿಸಲು ಸರ್ಕಾರ ಸಿದ್ಧತೆ ನಡೆಸಿದೆ. ಇದಕ್ಕಾಗಿ ಬಿಡಿಎ ಜಮೀನನ್ನು ಹರಾಜು ಮಾಡಿ ಹಣ ಕ್ರೂಢೀಕರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪರ್ಯಾಯ ಆಯ್ಕೆಯೇ ಇಲ್ಲ:ಬಿಜೆಪಿಯು ಟನಲ್ ರಸ್ತೆಗೆ ವಿರೋಧಿಸಿದ್ದರೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಪ್ರೋತ್ಸಾಹ ನೀಡುತ್ತಿದ್ದಾರೆ. ನೀವು ಬೆಂಗಳೂರಿನ ರಸ್ತೆಗಳನ್ನು ನಮಗೆ ಹಸ್ತಾಂತರಿಸಿದರೆ ನಾವೇ ಟನಲ್ ರಸ್ತೆ ನಿರ್ಮಿಸುತ್ತೇವೆ ಎಂದು ಹೇಳಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ಇತ್ತೀಚೆಗೆ ಹೇಳಿದ್ದರು. ಅಲ್ಲದೆ,ಬೆಂಗಳೂರಿನಲ್ಲಿ 1.35 ಕೋಟಿ ವಾಹನಗಳಿದ್ದು, ಭೂಸ್ವಾಧೀನ ತುಂಬಾ ದುಬಾರಿ ಆಗಿದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಟನಲ್ ರಸ್ತೆ ಪರ್ಯಾಯ ಎಂಬಂತಾಗಿದೆ. ಮುಂಬೈನಲ್ಲೂ ಏಳು ಕಡೆ ಮಾಡುತ್ತಿದ್ದಾರೆ. ಹೀಗಾಗಿ ಬೆಂಗಳೂರಿನಲ್ಲೂ ಟನಲ್ ರಸ್ತೆ ನಿರ್ಮಾಣ ಮಾಡುತ್ತೇವೆ ಎಂದು ಸಮರ್ಥಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಲಾಲ್‌ಬಾಗ್‌ಗೆ ಧಕ್ಕೆ ಆಗಲ್ಲ:ಲಾಲ್‌ಬಾಗ್ ಮೂಲಕ ಸುರಂಗ ರಸ್ತೆ ಹಾದು ಹೋಗಲು ವಿರೋಧ ಇದ್ದರೂ ಲಾಲ್‌ಬಾಗ್‌ಗೆ ಧಕ್ಕೆಯಾಗುವುದಿಲ್ಲ. ಲಾಲ್‌ಬಾಗ್ ದಾಟಿದ ಬಳಿಕ ಮೂಲೆಯಲ್ಲಿ ಎಕ್ಸಿಟ್ ನೀಡಲಾಗುತ್ತದೆ. ಜತೆಗೆ ವಿಧಾನಸೌಧದಿಂದ 1 ಕಿ.ಮೀ. ದೂರದಲ್ಲಿ ಎಂಟ್ರಿ, ಎಕ್ಸಿಟ್ ವಿನ್ಯಾಸ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
