ಮೂಲಸೌಕರ್ಯ ಕಡೆಗಣಿಸಿದ ರಾಜ್ಯ ಸರ್ಕಾರ

KannadaprabhaNewsNetwork |  
Published : Sep 25, 2025, 01:00 AM IST
ಗುಂಡಿಗಳ ಊರು ಮಾಡಿದ ಕಾಂಗ್ರೆಸ್ ಸರ್ಕಾರದ ವಿರುದ್ಧ ಹಾವೇರಿಯ ಜೆ.ಎಚ್ ಪಟೇಲ್ ವೃತ್ತದಲ್ಲಿ ಹಾವೇರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ರಾಜದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ರಸ್ತೆಯ ಗುಂಡಿಗಳನ್ನು ಮುಚ್ಚಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಮಾತೆತ್ತಿದರೆ ಗ್ಯಾರಂಟಿ ಕೊಟ್ಟಿದ್ದೇವೆ, ಅಭಿವೃದ್ಧಿಗೆ ಹಣ ಕೇಳಬೇಡಿ ಎಂದು ಸರ್ಕಾರವೇ ಹೇಳುತ್ತಿರುವುದು ನಾಚಿಕೇಗಡಿನ ಸಂಗತಿ.

ಹಾವೇರಿ: ರಾಜ್ಯದ ಮೂಲಸೌಕರ್ಯಗಳನ್ನು ಕಡೆಗಣಿಸಿ ಗುಂಡಿಗಳ ನಗರ ಮಾಡಿದ ಕಾಂಗ್ರೆಸ್ ಸರ್ಕಾರದ ವಿರುದ್ಧ ಬುಧವಾರ ಇಲ್ಲಿನ ಜೆ.ಎಚ್. ಪಟೇಲ್ ವೃತ್ತದಲ್ಲಿ ಹಾವೇರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆ ನೇತೃತ್ವ ವಹಿಸಿದ್ದ ಹಾವೇರಿ ವಿಧಾನಸಭಾ ಕ್ಷೇತ್ರದ ಮುಖಂಡ ಗವಿಸಿದ್ದಪ್ಪ ದ್ಯಾಮಣ್ಣವರ ಮಾತನಾಡಿ, ರಾಜದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ರಸ್ತೆಯ ಗುಂಡಿಗಳನ್ನು ಮುಚ್ಚಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಮಾತೆತ್ತಿದರೆ ಗ್ಯಾರಂಟಿ ಕೊಟ್ಟಿದ್ದೇವೆ, ಅಭಿವೃದ್ಧಿಗೆ ಹಣ ಕೇಳಬೇಡಿ ಎಂದು ಸರ್ಕಾರವೇ ಹೇಳುತ್ತಿರುವುದು ನಾಚಿಕೇಗಡಿನ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಾವೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕರ್ಜಗಿ, ಡೊಂಬರಮತ್ತೂರ, ಇಚ್ಚಂಗಿ, ಹತ್ತಿಮತ್ತೂರು, ನದಿನೀರಲಗಿ, ಭರಡಿ, ಕೂರಗುಂದ, ಹೊಸಕಿತ್ತೂರು, ಹಳೆಕಿತ್ತೂರು, ಗುಡೂರು, ಗುಡಿಸಲಕೊಪ್ಪ ಹೀಗೆ ಬಹುತೇಕ ಗ್ರಾಮೀಣ ಪ್ರದೇಶದಲ್ಲಿ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿವೆ. ಮಳೆ ಬಂದರೆ ಗುಂಡಿ ಕಾಣದೆ ವಾಹನ ಸವಾರರು ಅಪಘಾತಕ್ಕೀಡಾಗುವ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಹಾಗೂ ಅಧಿಕಾರಿಗಳು ದುರಸ್ತಿ ಗೋಜಿಗೆ ಹೋಗುತ್ತಿಲ್ಲ. ಈ ಕೂಡಲೇ ಗುಂಡಿ ಬಿದ್ದ ರಸ್ತೆಗಳನ್ನು ಸರಿಯಾದ ರೀತಿಯಲ್ಲಿ ದುರಸ್ತಿಗೊಳಿಸುವಂತೆ ಒತ್ತಾಯಿಸಿದರು.

ನಿಕಟಪೂರ್ವ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ ಮಾತನಾಡಿ, ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ರಸ್ತೆಗಳು ಗುಂಡಿ ಬಿದ್ದು ಹಾಳಾಗಿದ್ದು, ಗುಂಡಿಗಳನ್ನು ಮುಚ್ಚಿಸುವಂತೆ ಅಧಿಕಾರಿಗಳಿಗೆ ಮನವಿ ಕೊಟ್ಟರೂ ಯಾವುದೇ ಪ್ರಯೋಜನವಾಗಿಲ್ಲ. ಈ ಸರ್ಕಾರಕ್ಕೆ ಹೊಸ ರಸ್ತೆ ನಿರ್ಮಾಣ ಮಾಡಲು ಸಾಧ್ಯವಾಗುತ್ತಿಲ್ಲ. ಹೊಸ ರಸ್ತೆಗಳು ಹೋಗಲಿ ಗುಂಡಿ ಬಿದ್ದ ರಸ್ತೆಗಳನ್ನೇ ದುರಸ್ತಿ ಮಾಡಿಸಿ, ಸಾರ್ವಜನಿಕರಿಗೆ ಓಡಾಡಲು ಅನುಕೂಲತೆ ಕಲ್ಪಿಸಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ನಂಜುಂಡೇಶ ಕಳ್ಳೇರ, ಸಂತೋಷ ಆಲದಕಟ್ಟಿ, ಶಹರ ಘಟಕದ ಅಧ್ಯಕ್ಷ ಗಿರೀಶ ತುಪ್ಪದ, ಮುಖಂಡರಾದ ನಿರಂಜನ ಹೇರೂರ, ಶಿವಯೋಗಿ ಹುಲಿಕಂತಿಮಠ, ಕಿರಣ ಕೋಣನವರ, ನಿಖಿಲ್ ಡೊಗ್ಗಳ್ಳಿ, ಶಿವಯೋಗಿ ಕೊಳ್ಳಿ, ಕಿರಣ ಕೊಳ್ಳಿ, ನೀಲಪ್ಪ ಚಾವಡಿ, ಮೃತ್ಯುಂಜಯ ಮುಷ್ಠಿ, ರಮೇಶ ಪಾಲನಕಾರ, ಗುಡ್ಡಪ್ಪ ಭರಡಿ, ಪ್ರಕಾಶ ಉಜ್ಜನಿಕೊಪ್ಪ, ಮಧು ಹಂದ್ರಾಳ, ಹೊನ್ನಪ್ಪ ಮಾಳಗಿ, ಶಂಭು ಹತ್ತಿ, ಮಂಜು ಹುಲಗೂರು, ಜಗದೀಶ ಕನವಳ್ಳಿ, ನಾಗರಾಜ ಹಾರಿಗೋಲ, ಈರಣ್ಣ ಹೊನ್ನಾಳಿ, ನಾಗರಾಜ ಬಣಕಾರ, ರೋಹಿಣಿ ಪಾಟೀಲ, ಶ್ರೀದೇವಿ, ಶೃತಿ ಸೇರಿದಂತೆ ಇತರರು ಇದ್ದರು.

ನಗರಸಭೆ ಅಧ್ಯಕ್ಷರಿಗೆ ಮುಜುಗರ:

ಸ್ಥಳೀಯ ನಗರಸಭೆಯಲ್ಲಿ ಬಿಜೆಪಿಯ ಶಶಿಕಲಾ ಮಾಳಗಿ ಅಧಿಕಾರ ನಡೆಸುತ್ತಿದ್ದಾರೆ. ಆದರೆ, ರಾಜ್ಯ ಬಿಜೆಪಿ ಕರೆಯ ಮೇರೆಗೆ ಹಾವೇರಿ ವಿಧಾನಸಭಾ ಕ್ಷೇತ್ರದ ಮುಖಂಡರು ಹಾವೇರಿ ನಗರದಲ್ಲೇ ಪ್ರತಿಭಟಿಸಿದ್ದರಿಂದ ಅಧ್ಯಕ್ಷರು ಮುಜುಗರ ಅನುಭವಿಸುವಂತಾಯಿತು. ಈಗಾಗಲೇ ನಗರಸಭೆಯಿಂದ ಗುಂಡಿ ಮುಚ್ಚಿಸಿ, ಡಾಂಬರೀಕರಣ ಮಾಡಿಸಲು ₹10 ಲಕ್ಷ ಟೆಂಡರ್ ಕರೆಯಲಾಗಿದೆ. ಗುತ್ತಿಗೆದಾರರು ಮಳೆ ಇರುವ ಕಾರಣಕ್ಕೆ ಡಾಂಬರ್ ಹಾಕಲು ವಿಳಂಬ ಮಾಡುತ್ತಿದ್ದಾರೆ ಎಂದು ಅಧ್ಯಕ್ಷರ ಪರವಾಗಿ ರಾಮು ಮಾಳಗಿ ಮಂಗಳವಾರವೇ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ಹಾಕಿದ್ದರು. ಆದರೂ ಕೂಡ ಮುಖಂಡರು ಪ್ರತಿಭಟನೆ ನಡೆಸಿದ್ದಾರೆ. ನಗರದಲ್ಲಿ ಗುಂಡಿ ಮುಚ್ಚಿಸಲು ಟೆಂಡರ್ ಕರೆದಿರುವುದು ಗೊತ್ತಾಗಿಯೂ ಪ್ರತಿಭಟನೆ ಮಾಡಿರುವುದು ಸರಿಯಲ್ಲ. ಆದರೆ, ಹಾವೇರಿ ವಿಧಾನಸಭಾ ಕ್ಷೇತ್ರದ ಗ್ರಾಮೀಣ ಭಾಗದಲ್ಲಿ ಪ್ರತಿಭಟನೆ ನಡೆಸಿದ್ದರೆ ಹೆಚ್ಚು ಗಮನಸಳೆಯುತ್ತಿತ್ತು ಎಂಬ ಮಾತುಗಳು ಸಾರ್ವಜನಿಕರಿಂದ ವ್ಯಕ್ತವಾಗಿವೆ.

PREV

Recommended Stories

ಪಾಲಿಕೆಗಳ ಚುನಾವಣೆ ಮುಗಿವವರೆಗೆ ಬೆಂಗಳೂರಲ್ಲಿ ಮತಪಟ್ಟಿ ಪರಿಷ್ಕರಣೆ ಮುಂದೂಡಿ : ಕೇಂದ್ರ ಆಯುಕ್ತರಿಗೆ ಪತ್ರ
ಡ್ರಾಪ್‌ ನೆಪದಲ್ಲಿ ಗುತ್ತಿಗೆದಾರನ ದರೋಡೆ ಮಾಡಿದ್ದ ನಾಲ್ವರ ಬಂಧನ