ದಾಂಡೇಲಿ: ಕಟ್ಟಡ ನಿರ್ಮಾಣ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ರಾಜ್ಯ ಸರ್ಕಾರದ ಕಾರ್ಮಿಕ ಅಧಿಕಾರಿಗಳು, ಮಂತ್ರಿಗಳು ವಿಶೇಷ ಮುತುವರ್ಜಿ ವಹಿಸುತ್ತಿಲ್ಲ ಎಂದು ರಾಜ್ಯ ಕಟ್ಟಡ, ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ ರಾಜ್ಯ ಸಮಿತಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಹೇಳಿದರು.
ಅವರು ಭಾನುವಾರ ದಾಂಡೇಲಿ ಪೇಪರ್ ಮಿಲ್ ಎಂಪ್ಲಾಯಿಸ್ ಯುನಿಯನ್ ಸಿಐಟಿಯು ಕಚೇರಿ ಸಭಾಭವನದಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕರ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಮಾತನಾಡುತ್ತಿದ್ದರು.ನಮ್ಮ ಸಂಘ ಕೋರ್ಟಿಗೆ ಹೋಗಿ ಶೈಕ್ಷಣಿಕ ಸೌಲಭ್ಯ ಕೂಡಲೇ ವಿತರಿಸಬೇಕೆಂದು ಆದೇಶ ತಂದರೂ ಕುಂಟುತ್ತಾ ಸಾಗುತ್ತಿದೆ. ಸರ್ಕಾರದ ಬಡಜನ ವಿರೋಧಿ ಕಾರ್ಮಿಕ ವಿರೋಧಿ ಧೋರಣೆಯನ್ನು ಬಲವಾಗಿ ಖಂಡಿಸುವುದಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಎರಡು ಪಕ್ಷಗಳು ಬಂಡವಾಳ ಶಾಹಿಗಳ ಪರ ನೀತಿ ಹೊಂದಿದೆ. ಕೆಲಸದ ಅವಧಿಯನ್ನು 8 ಗಂಟೆಯಿಂದ 10 ಗಂಟೆಗೆ ಹೆಚ್ಚಿಸಲು ಹೊರಟಿವೆ. ಇದು ಜಾರಿಯಾದರೆ ಕಾರ್ಮಿಕರು ಈ ಪಕ್ಷಗಳನ್ನು ಎಂದು ಕ್ಷಮಿಸುವುದಿಲ್ಲ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಶಾಂತಾರಾಮ ನಾಯಕ, ಕಟ್ಟಡ ನಿರ್ಮಾಣ ಕಾರ್ಮಿಕ ಮದುವೆ ಧನ ಸಹಾಯ, ಶೈಕ್ಷಣಿಕ, ಆರೋಗ್ಯ, ಹೆರಿಗೆ ಭತ್ಯೆ, ಪೆನ್‌ಷನ್ ಮುಂತಾದವುಗಳನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.ಜಿಲ್ಲಾ ಪ್ರಧಾನ ಕಾರ್ಯದರ್ಶಿ ತಿಲಕ್ ಗೌಡ ಮಾತನಾಡಿ, ನೈಜ ಕಾರ್ಮಿಕರ ಸದಸ್ಯತ್ವ ರದ್ದು ಮಾಡಿದರೆ ಹೋರಾಟ ಮಾಡುವುದಾಗಿ ಎಚ್ಚರಿಸಿದರು. ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಸಲಿಂ ಸೈಯದ್ ಎಲ್ಲ ಕಾರ್ಮಿಕರ ಧ್ವನಿಯಾಗಿ ಸಿಐಟಿಯು ಕೆಲಸ ಮಾಡುತ್ತೀದೆ ಎಂದರು.
ಮುಖಂಡರಾದ ನಾಗಪ್ಪ ನಾಯ್ಕ ಸಿರ್ಸಿ, ಜಯಶ್ರೀ ಹಿರೇಕರ ಹಳಿಯಾಳ, ಭೀಮಣ್ಣ ಬೋವಿ ಮುಂಡಗೋಡ, ಪ್ರೇಮಾನಂದ ವೇಳಿಪ್ ಜೋಯಿಡಾ, ಜ್ಯೋತಿ ನಾರ್ವೆಕರ್ ಜಗಲಪೇಟ್, ಜಗದೀಶ್ ನಾಯ್ಕ ಮುಂತಾದವರ ವೇದಿಕೆ ಮೇಲೆ ಇದ್ದರು. ಕೃಷ್ಣ ಬಟ್ ಸ್ವಾಗತಿಸಿದರು. ಜಯಶ್ರೀ ವಂದಿಸಿದರು.ನೂತನ ಸಮಿತಿ ರಚನೆ:
ಕಟ್ಟಡ ನಿರ್ಮಾಣ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ ಜಿಲ್ಲಾ ಸಮಿತಿಯನ್ನು ಈ ಸಮ್ಮೇಳನದಲ್ಲಿ ಆಯ್ಕೆ ಮಾಡಲಾಯಿತು.ಅಧ್ಯಕ್ಷರಾಗಿ ಕೃಷ್ಣ ಭಟ್ ದಾಂಡೇಲಿ, ಪ್ರಧಾನ ಕಾರ್ಯದರ್ಶಿಯಾಗಿ ತಿಲಕ್ ಗೌಡ ಹೊನ್ನಾವರ, ಖಜಾಂಚಿಯಾಗಿ ತಿಮ್ಮಪ್ಪ ಗೌಡ ಆಯ್ಕೆಯಾದರು.
ಉಪಾಧ್ಯಕ್ಷರಾಗಿ ಶಾಂತಾರಾಮ ನಾಯಕ ಅಂಕೋಲಾ, ಪ್ರಭಾಕರ ಅಮ್ಟೆಕರ ರಾಮನಗರ, ಹನುಮಂತ ಸಿಂದೋಗಿ ಹಳಿಯಾಳ ಮತ್ತು ಜಂಟಿ ಕಾರ್ಯದರ್ಶಿಗಳಾಗಿ ಜ್ಯೋತಿ ನಾರ್ವೆಕರ್, ಕೊಸಾಂವ ಡಿಸೋಜ, ಭೀಮಣ್ಣ ಬೋವಿ ಮತ್ತು ಸಮಿತಿ ಸದಸ್ಯರಾಗಿ 14 ಕಾರ್ಮಿಕರು ಆಯ್ಕೆಯಾದರು.