ಬಡವರ ‘ಕೈ’ ಹಿಡಿದ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ: ಸುಂದರೇಶ್

KannadaprabhaNewsNetwork | Published : Feb 23, 2024 1:50 AM

ಸಾರಾಂಶ

ಕಾಂಗ್ರೆಸ್ ಪಕ್ಷದ 5 ಗ್ಯಾರಂಟಿಗಳ ಶಿವಮೊಗ್ಗ ಜಿಲ್ಲಾ ಫಲಾನುಭವಿಗಳ ಸಮಾವೇಶವನ್ನು ಫೆ.24ರಂದು ಶಿವಮೊಗ್ಗದ ಫ್ರೀಡಂ ಪಾರ್ಕ್‌ನ ಅಲ್ಲಮಪ್ರಭು ಬಯಲು ಮಂಟಪದಲ್ಲಿ ಆಯೋಜಿಸಲಾಗಿದ್ದು, ಸಮಾವೇಶದಲ್ಲಿ ಜಿಲ್ಲೆಯಿಂದ ಸುಮಾರು 50 ಸಾವಿರಕ್ಕೂ ಹೆಚ್ಚು ಫಲಾನುಭವಿಗಳು ಭಾಗವಹಿಸುವ ನಿರೀಕ್ಷೆಯಿದೆ ಎನ್ನಲಾಗಿದೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಬಡವರ ಕಷ್ಟಗಳಿಗೆ ಕೈ ಹಿಡಿದ ಕಾಂಗ್ರೆಸ್ ಸರ್ಕಾರದಿಂದ ಗ್ಯಾರಂಟಿಗಳ ಬಗ್ಗೆ ಮತ್ತಷ್ಟು ವಿಶ್ವಾಸ ತುಂಬಲು ಶಿವಮೊಗ್ಗದಲ್ಲಿ ಫೆ.24ರಂದು ಬೆಳಗ್ಗೆ 11ಕ್ಕೆ ಫ್ರೀಡಂ ಪಾರ್ಕ್‌ನಲ್ಲಿ ಜಿಲ್ಲಾ ಫಲಾನುಭವಿಗಳ ಸಮಾವೇಶವನ್ನು ಆಯೋಜಿಸಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸಮಾವೇಶದಲ್ಲಿ ಶಿವಮೊಗ್ಗ ಜಿಲ್ಲೆಯಿಂದ ಸುಮಾರು 50 ಸಾವಿರಕ್ಕೂ ಹೆಚ್ಚು ಫಲಾನುಭವಿಗಳು ಭಾಗವಹಿಸುವ ನಿರೀಕ್ಷೆಯಿದೆ. ಇದರಲ್ಲಿ ಸುಮಾರು 30 ಸಾವಿರ ಮಹಿಳೆಯರು ಭಾಗವಹಿಸುತ್ತಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ಸಚಿವರು, ಶಾಸಕರು, ಪಕ್ಷದ ರಾಜಕೀಯ ಮುಖಂಡರು ಮತ್ತು ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ರಾಜ್ಯದಲ್ಲಿ ಈಗಾಗಲೇ ಕೋಟ್ಯಂತರ ಮಹಿಳೆಯರು ಮತ್ತು ಬಡವರು ಗ್ಯಾರಂಟಿ ಯೋಜನೆಗಳ ಪ್ರಯೋಜನ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲೂ ಕೂಡ ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಮತ್ತು ಬಡವರು ಎಲ್ಲಾ 4 ಗ್ಯಾರಂಟಿಗಳ ಯೋಜನೆಗಳನ್ನು ಈಗಾಗಲೇ ಪಡೆಯುತ್ತಿದ್ದು, 5ನೇ ಯೋಜನೆಯಾದ ಯುವನಿಧಿಗೂ ನೋಂದಣಿ ಮಾಡಿಕೊಳ್ಳುತ್ತಿ ದ್ದಾರೆ ಎಂದು ತಿಳಿಸಿದರು.

ಗ್ಯಾರಂಟಿಗಳ ಯಶಸ್ಸನ್ನು ಸಹಿಸಿದ ಬಿಜೆಪಿಯುವರು ಬೇಕಾಬಿಟ್ಟಿಯಾಗಿ ಮಾತನಾಡುತ್ತಿದ್ದಾರೆ. ಅವರಿಗೆ ಬಡವರ ಕಷ್ಟಗಳೇ ಗೊತ್ತಿಲ್ಲ ತಮ್ಮ ಆಡಳಿತದಲ್ಲಿ ಭ್ರಷ್ಟಚಾರ ಮಾಡಿ ಈಗ ಏನು ಮಾಡಬೇಕು ಎಂದು ಗೊತ್ತಿಲ್ಲದೇ ತಲ್ಲಣದಿಂದ ಗ್ಯಾರಂಟಿ ಯೋಜನೆಗಳನ್ನು ಟೀಕಿಸುತ್ತಿದ್ದಾರೆ. ಅವರು ಏನೇ ಮಾಡಿದರು ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ ಎಂದು ಹರಿಹಾಯ್ದರು.

ಧರ್ಮಗಳ ಬಗ್ಗೆ ವಿಷ ಬೀಜ ಬಿತ್ತಿ ಚುನಾವಣೆಯನ್ನು ಎದುರಿಸುವ ಕಾಲ ಮುಗಿದು ಹೋಗಿದೆ. ಬಿಜೆಪಿಯವರಿಗೆ ಬಡವರ ಪರ ಯೋಜನೆ ತಂದರೆ ಸಹಿಸಲು ಆಗಲ್ಲ. ಯಾವ ಅಭಿವೃದ್ಧಿ ಮಾಡಿದರು, ಏನೇ ಹೇಳಿದರೂ ಅದನ್ನು ಕೆಟ್ಟ ದೃಷ್ಟಿಯಿಂದ ನೋಡುತ್ತಾರೆ. ಅಧಿಕಾರ ಕಳೆದುಕೊಂಡು ಹುಚ್ಚರಾಗಿದ್ದಾರೆ ಎಂದು ಲೇವಡಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಆರ್.ಪ್ರಸನ್ನಕುಮಾರ್, ಎಂ.ಶ್ರೀಕಾಂತ್, ಕಲಗೋಡು ರತ್ನಾಕರ್. ಸಿ.ಎಚ್.ಚಂದ್ರ ಭೂಪಾಲ್, ಎಸ್.ಟಿ.ಚಂದ್ರಶೇಖರ್, ಕಲೀಂ ಪಾಶಾ, ಪಿ.ಎಸ್. ಗಿರೀಶ್ ರಾವ್, ಎಂ.ಪಿ. ದಿನೇಶ್ ಪಾಟೀಲ್, ಚಂದನ, ಅಡ್ಡು, ಶಿ.ಜು.ಪಾಶ ಮತ್ತಿತರರು ಇದ್ದರು.

ಸಮಾವೇಶಕ್ಕೆ 10 ಸಾವಿರ ಜನ: ಯೋಗೀಶ್‌

ಶಿವಮೊಗ್ಗ: ಕಾಂಗ್ರೆಸ್ ಪಕ್ಷದ 5 ಗ್ಯಾರಂಟಿಗಳ ಜಿಲ್ಲಾ ಫಲಾನುಭವಿಗಳ ಸಮಾವೇಶವನ್ನು ಫೆ.24ರಂದು ಶಿವಮೊಗ್ಗದ ಫ್ರೀಡಂ ಪಾರ್ಕ್‌ನ ಅಲ್ಲಮಪ್ರಭು ಬಯಲು ಮಂಟಪದಲ್ಲಿ ಆಯೋಜಿ ಸಿದ್ದು, ಈಗಾಗಲೇ ಶಿವಮೊಗ್ಗ ನಗರದಲ್ಲಿ ಸುಮಾರು 15 ಸಾವಿರಕ್ಕೂ ಹೆಚ್ಚು ಆಹ್ವಾನ ಪತ್ರಿಕೆಯನ್ನು ಮನೆ ಮನೆಗೆ ಹಂಚಲಾಗಿದೆ ಎಂದು ಮಹಾನಗರ ಪಾಲಿಕೆ ಮಾಜಿ ಸದಸ್ಯ ಎಚ್‌.ಸಿ.ಯೋಗೀಶ್‌ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸುಮಾರು 10 ಸಾವಿರಕ್ಕೂ ಹೆಚ್ಚು ಜನರು ನಗರವೊಂದರಿಂದಲೇ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಕಾಂಗ್ರೆಸ್ ಪಕ್ಷದ 5 ಗ್ಯಾರಂಟಿಗಳು ಕೂಡ ಯಶಸ್ವಿಯತ್ತ ಸಾಗುತ್ತಿವೆ. ಶಿವಮೊಗ್ಗ ನಗರದಲ್ಲಿಯೇ 62 ಸಾವಿರ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳು ಇದ್ದಾರೆ. 62 ಸಾವಿರ ಮನೆಗಳಿಗೆ ಉಚಿತ ವಿದ್ಯುತ್ ಇದೆ. ಸುಮಾರು 61 ಲಕ್ಷ ಬಾರಿ ನಗರದ ಮಹಿಳೆಯರು ಉಚಿತ ಬಸ್ ಪ್ರಯಾಣ ಮಾಡಿದ್ದಾರೆ. 100ಕ್ಕೂ ಹೆಚ್ಚು ಜನರು ಯುವನಿಧಿಯಲ್ಲಿ ಹೆಸರು ನೊಂದಾಯಿಸಿಕೊಂಡಿದ್ದಾರೆ. 51 ಸಾವಿರಕ್ಕೂ ಹೆಚ್ಚು ಮಹಿಳೆಯರ ಖಾತೆಗೆ ಅಕ್ಕಿಯ ಹಣ ಜಮಾ ಆಗಿದೆ ಎಂದು ವಿವರಿಸಿದರು.ಶಿವಮೊಗ್ಗದಲ್ಲಿ ಫೆ.24ರಂದು ಬೆಳಗ್ಗೆ 11ಕ್ಕೆ ನಡೆಯುವ ಸಮಾವೇಶಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಸೇರಿದಂತೆ ಅನೇಕ ಗಣ್ಯರು ಆಗಮಿಸಲಿದ್ದಾರೆ. ಸರ್ಕಾರಿ ಕಾರ್ಯಕ್ರಮವಾಗಿರುವುದರಿಂದ ಅಧಿಕಾರಿಗಳು ಇರುತ್ತಾರೆ. ಅಂದು ಡಿ.ಕೆ.ಶಿವಕುಮಾರ್ ಅವರಿಗೆ ಪಂಚ ಗ್ಯಾರಂಟಿಗಳ ಹಾರವನ್ನು ಹಾಕಲಾಗುವುದು. ಈ ಹಾರ ತುಂಬ ವಿಶೇಷ ವಾಗಿದ್ದು, ಗ್ಯಾರಂಟಿಗಳ ಮಹತ್ವವನ್ನು ಬಿಂಬಿಸುತ್ತವೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಎಸ್.ಪಿ. ದಿನೇಶ್, ಶಿವಕುಮಾರ್, ಕೆ.ರಂಗನಾಥ್, ಸುವರ್ಣ ನಾಗರಾಜ್, ವಿಶ್ವನಾಥ್ ಕಾಶಿ, ಯಮುನಾ ರಂಗೇಗೌಡ, ಅಲ್ತಾಫ್ ಪರ್ವಿಜ್, ಮಂಜುಳಾ, ರೇಷ್ಮಾ, ಮಧು, ಚಿನ್ನಪ್ಪ ಮತ್ತಿತರರು ಇದ್ದರು.

Share this article