- ಬಿಜೆಪಿ ಅಧಿಕಾರದಲ್ಲಿ ಇಲ್ಲದ ರಾಜ್ಯಗಳಲ್ಲಿ ಈ ಸಮಸ್ಯೆ, ಯಾತ್ರೆಗೆ ಹೋಗದಂತೆ ಡಿಸಿ- ಜಿಪಂ ಸಿಇಓಗಳಿಗೆ ಸರ್ಕಾರದ ಸೂಚನೆ, ವಿಕಸಿತ ಭಾರತ ಯಾತ್ರೆಗೆ ಚಾಲನೆ
ಬಿಜೆಪಿ ಅಧಿಕಾರದಲ್ಲಿ ಇಲ್ಲದಿರುವ ಕರ್ನಾಟಕವೂ ಸೇರಿದಂತೆ ದೇಶದ ನಾಲ್ಕೈದು ರಾಜ್ಯಗಳಲ್ಲಿ ವಿಕಸಿತ ಭಾರತ ಯಾತ್ರೆಗೆ ಅಲ್ಲಿನ ಸರ್ಕಾರಗಳು ಸಹಕರಿಸುತ್ತಿಲ್ಲ ಎಂದು ಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ತಾಲೂಕಿನ ಮುಗುಳವಳ್ಳಿ ಗ್ರಾಮದಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆಗೆ ಶನಿವಾರ ಚಾಲನೆ ನೀಡಿ ಮಾತನಾಡಿದರು.ಕೇಂದ್ರ ಸರ್ಕಾರದ ಯೋಜನೆಗಳನ್ನು ಜನರಿಗೆ ನೆನಪು ಮಾಡಿಸುವುದು, ಯಾರಿಗೆ ಸವಲತ್ತು ಸಿಕ್ಕಿದೆಯೋ ಅವರ ಅನುಭವವನ್ನು ಹಂಚಿಕೊಳ್ಳುವುದು ಈ ಯಾತ್ರೆಯ ಸಂಕಲ್ಪವಾಗಿದೆ. ಅದ್ದರಿಂದ ಕಳೆದ ನವೆಂಬರ್ 15 ರಂದು ಯಾತ್ರೆ ಆರಂಭಗೊಂಡಿತು. ಅದಕ್ಕೂ ಎರಡು ತಿಂಗಳು ಮುನ್ನ ಐಎಎಸ್ ಹಾಗೂ ಉನ್ನತ ಅಧಿಕಾರಿಗಳಿಗೆ ತರಬೇತಿ ಸಹ ನೀಡಲಾಗಿತ್ತು. ಈ ತರಬೇತಿಯಲ್ಲಿ ನಮ್ಮ ರಾಜ್ಯದ ಅಧಿಕಾರಿಗಳು ಭಾಗವಹಿಸಿದ್ದರು ಎಂದ ಅವರು, ವಿಕಸಿತ ಭಾರತ ಯಾತ್ರೆಗೆ ನಮ್ಮ ರಾಜ್ಯದ ಜಿಲ್ಲಾಧಿಕಾರಿಗಳು, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಭಾಗವಹಿಸಬಾರದೆಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿತು. ಈ ಕಾರಣಕ್ಕಾಗಿ ಎಲ್ಲೂ ಕೂಡ ಅಧಿಕಾರಿಗಳು ಭಾಗವಹಿಸುತ್ತಿಲ್ಲ. ಹಾಗಾಗಿ ಬ್ಯಾಂಕ್ ಅಧಿಕಾರಿಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಭಾರತ ದೇಶ, 2047 ರ ವೇಳೆಗೆ ವಿಶ್ವದಲ್ಲಿ ನಂಬರ್ ಒನ್ ಮಾಡುವುದು ಪ್ರಧಾನಿ ನರೇಂದ್ರ ಮೋದಿಯವರ ಗುರಿಯಾಗಿದೆ. ದೊಡ್ಡ ದೇಶಗಳ ಸಾಲಿನಲ್ಲಿ ಭಾರತ ಎದ್ದು ನಿಲ್ಲಬೇಕು, ವಿಶ್ವದಲ್ಲಿ ನಾವು 5ನೇ ಸ್ಥಾನದಲ್ಲಿ ಇದ್ದೇವೆ. ಮುಂದೆ 2 ಅಥವಾ 3ನೇ ಸ್ಥಾನಕ್ಕೆ ಬರಬೇಕು, ಆ ನಿಟ್ಟಿನಲ್ಲಿ ಕೆಲಸ ಆಗಬೇಕು. ಈ ಉದ್ದೇಶದಿಂದ ಯಾತ್ರೆಯಲ್ಲಿ ಪ್ರಮಾಣವಚನ ಸ್ವೀಕರಿಸಲಾಗುತ್ತಿದೆ ಎಂದರು.
ಭಾರತ ಮುಂದುವರೆಯುತ್ತಿರುವ ದೇಶ, ಮುಂದೊಂದು ದಿನ ಮುಂದುವರೆದ ದೇಶ ಆಗಬೇಕು. ಭಾರತ ಎತ್ತರಕ್ಕೆ ಬೆಳೆಯಬೇಕು. ಆ ನಿಟ್ಟಿನಲ್ಲಿ ರಾಜಕಾರಣಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಅಧಿಕಾರಿಗಳು, ತಮ್ಮ ತಮ್ಮ ಇಲಾಖೆಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಕೆಲಸದಲ್ಲಿ ಗೌರವ ಇಟ್ಟುಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯ್ತಿ ಕಾರ್ಯನಿರ್ವಹಕ ಅಧಿಕಾರಿ ತಾರಾನಾಥ್, ಮುಗುಳವಳ್ಳಿ ಗ್ರಾಪಂ ಪಿಡಿಒ ಸುಮ ಉಪಸ್ಥಿತರಿದ್ದರು. 6 ಕೆಸಿಕೆಎಂ 5