ಶಿರಹಟ್ಟಿ: ಜೀವನದಲ್ಲಿ ಮುಖ್ಯ ಘಟ್ಟ ಅಂದರೆ ಪ್ರೌಢ ಶಿಕ್ಷಣ. ಇಂತಹ ಶಿಕ್ಷಣ ಪಡೆಯುವಾಗ ವಿದ್ಯಾರ್ಥಿಗಳು ಶಾಲೆಯ ಎಲ್ಲ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಅದರಲ್ಲಿ ಯಶಸ್ಸು ಪಡೆಯಬೇಕು. ಪಠ್ಯದ ಜೊತೆಗೆ ಕ್ರೀಡಾ ಚಟುವಟಿಕೆಗಳಲ್ಲಿ ಅಲ್ಲಿನ ಸೋಲು ಗೆಲುವನ್ನು ನೋಡದೇ ಅದರಲ್ಲಿ ಭಾಗವಹಿಸುವುದು ಅವಶ್ಯ ಎಂದು ಸಿಸಿಎನ್ ಶಾಲೆಯ ಸಂಸ್ಥಾಪಕ ಅಧ್ಯಕ್ಷರಾದ ಚಂದ್ರಕಾಂತ ನೂರಶೆಟ್ಟರ ಹೇಳಿದರು.
ಕ್ರೀಡೆಯು ಮನುಷ್ಯನ ಅವಿಭಾಜ್ಯ ಅಂಗವಾಗಿದ್ದು, ಇದರಿಂದ ಸೋಮಾರಿತನ ಹೋಗುತ್ತದೆ. ದೇಹದ ಆರೋಗ್ಯ ಸ್ಥಿತಿ ಉತ್ತಮವಾಗಿರುತ್ತದೆ. ಕ್ರೀಡೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ. ಭಾಗವಹಿಸುವುದು ಮುಖ್ಯ. ಇದರಿಂದಾಗಿ ಬಾಂಧವ್ಯ, ಸಹೋದರತ್ವ ಬೆಳೆಯುತ್ತದೆ. ಕ್ರೀಡೆಯಲ್ಲಿ ಭಾಗವಹಿಸುವವರು ಮತ್ತು ಕ್ರೀಡಾ ಆಯೋಜಕರು ಯಾವುದೇ ಗದ್ದಲ, ಗಲಾಟೆಗಳಿಗೆ ಅವಕಾಶ ನೀಡದೇ ಯಶಸ್ವಿಯಾಗಿ ಕ್ರೀಡಾಕೂಟವನ್ನು ನಡೆಸಬೇಕೆಂದು ಸಲಹೆ ನೀಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಎಂ.ಎಂ. ಹವಳದ ಮಾತನಾಡಿ, ಇಂದಿನ ಯುವಕರಲ್ಲಿ ಕ್ರೀಡೆಗಳಲ್ಲಿ ಆಸಕ್ತಿ ಕುಂಠಿತಗೊಂಡಿರುವುದರಿಂದ ಗ್ರಾಮೀಣ ಪ್ರತಿಭೆಗಳು ಹೊರಹೊಮ್ಮುತ್ತಿಲ್ಲ. ಇದಕ್ಕಾಗಿ ಶಾಲೆಗಳಲ್ಲಿ ಪ್ರತಿ ವರ್ಷ ಹಮ್ಮಿಕೊಳ್ಳುವ ಕ್ರೀಡೆಗಳಲ್ಲಿ ಆಸಕ್ತಿ ವಹಿಸಿ ಭಾಗವಹಿಸಿ ತಾಲೂಕು, ಜಿಲ್ಲೆ, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡುವ ಗುರಿಯನ್ನು ವಿದ್ಯಾರ್ಥಿಗಳು ಹೊಂದಬೇಕು ಎಂದು ಕರೆ ನೀಡಿದರು.ವಿದ್ಯಾರ್ಥಿಗಳು ಪ್ರೌಢ ವ್ಯವಸ್ಥೆಯಲ್ಲಿ ಹೆಚ್ಚು ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಮುಂದಿನ ಶಿಕ್ಷಣಕ್ಕೆ ಅನುಕೂಲವಾಗುತ್ತದೆ. ಶಾಲಾ ಜೀವನದಲ್ಲಿ ಪಾಠ ಎಷ್ಟು ಮುಖ್ಯವೋ ಅಷ್ಟೇ ಕ್ರೀಡೆಗಳು ಮುಖ್ಯವಾಗಿವೆ. ವಿದ್ಯಾರ್ಥಿಗಳು ಪಾಠದ ಜೊತೆಗೆ ಆಟದಲ್ಲಿ ಹೆಚ್ಚು ಭಾಗವಹಿಸಬೇಕು. ಆಟಗಳು ದೇಹದ ಸದೃಢತೆ ಹೆಚ್ಚಿಸಲು ನೆರವಾಗುವುದು. ಆ ಕಾರಣದಿಂದ ಪಾಠದ ಜೊತೆಗೆ ಆಟವು ಅತಿ ಅವಶ್ಯವಾಗಿದೆ. ಶಾಲಾ ವಾತಾವರಣದಲ್ಲಿರುವ ಎಲ್ಲ ವಿದ್ಯಾರ್ಥಿಗಳು ಸೋಲು ಗೆಲುವಿನ ಬಗ್ಗೆ ಚಿಂತಿಸದೆ ಭಾಗವಹಿಸಬೇಕು ಎಂದರು.
ಶಾಲೆಯ ದೈಹಿಕ ಶಿಕ್ಷಕ ಇಮ್ರಾನ್ ಸುಂಕದ ಹಾಗೂ ಇತರರು ಇದ್ದರು. ನಯನ ದೊಡ್ಡಮನಿ ಸ್ವಾಗತಿಸಿದರು. ಕೃತಿಕಾ ಕೊಪ್ಪದ, ಅಕ್ಷತಾ ಅರ್ಕಸಾಲಿ ನಿರೂಪಣೆ ಮಾಡಿದರು. ಪೂಜಾ ಸ್ವಾಮಿ ಹಾಗೂ ಸಂಗಡಿಗರಿಂದ ಪ್ರಾರ್ಥನಾ ಗೀತೆ ನಡೆಯಿತು. ತೇಜಸ್ವಿನಿ ಮಾಬಳಿ ವಂದಿಸಿದರು.