- ಹೊಸಕೆರೆ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಹಬ್ಬ, ಪ್ರತಿಭಾ ಪುರಸ್ಕಾರ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಮಕ್ಕಳು ಮೌಲ್ಯಯುತ ಶಿಕ್ಷಣ ಕಲಿತು ಸಮಾಜದಲ್ಲಿ ಸತ್ಪ್ರಜೆಯಾಗಿ ಬಾಳಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಆರ್.ಪುಷ್ಪಾ ಕರೆ ನೀಡಿದರು.
ಶನಿವಾರ ತಾಲೂಕಿನ ಹೊಸಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಮಕ್ಕಳ ಹಬ್ಬ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಇಂದು ಸರ್ಕಾರಿ ಶಾಲೆಗೆ ಸರ್ಕಾರ ಎಲ್ಲಾ ಸೌಲಭ್ಯ ಒದಗಿಸಿಕೊಡುತ್ತಿದೆ. ಇದನ್ನು ಮಕ್ಕಳು ಉಪಯೋಗಿಸಿಕೊಂಡು ಉತ್ತಮ ಅಂಕ ಪಡೆದು ಶಾಲೆಗೆ, ಪೋಷಕರಿಗೆ ಗೌರವ ತರಬೇಕು ಎಂದು ಕರೆ ನೀಡಿದರು.ಬಾಳೆ ಗ್ರಾಮ ಪಂಚಾಯಿತಿ ಸದಸ್ಯ ಮಧು ಕುಮಾರ್ ಮಾತನಾಡಿ, ಶಾಲೆ ಅಭಿವೃದ್ಧಿಗೆ ಗ್ರಾಪಂ ನಿಂದ ಎಲ್ಲಾ ಸೌಲಭ್ಯ ನೀಡಿದ್ದೇವೆ. ಶುದ್ದ ಕುಡಿಯುವ ನೀರಿನ ಯೋಜನೆ, ಮುಂದೆ ಶಾಲೆಯ ಕಾಂಪೌಂಡು ಹಾಗೂ ಎಲ್ಲಾ ಸೌಕರ್ಯವನ್ನು ಹಂತ, ಹಂತವಾಗಿ ಮಾಡಿಕೊಡಲಾಗುವುದು ಎಂದರು.
ತಾಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಎಂ.ಎನ್.ನಾಗೇಶ್ ಮಾತನಾಡಿ, ಪ್ರಸ್ತುತ ಸರ್ಕಾರಿ ಶಾಲೆಯಲ್ಲಿ ಉತ್ತಮ ಗುಣ ಮಟ್ಟದ ಶಿಕ್ಷಣ ಸಿಗುತ್ತಿದೆ. ಪೋಷಕರು ಅತಿ ದುಬಾರಿ ಹಣ ನೀಡಿ ಖಾಸಗಿ ಶಾಲೆಗೆ ಮಕ್ಕಳನ್ನು ಸೇರಿಸುವುದಕ್ಕಿಂತ ಸರ್ಕಾರಿ ಶಾಲೆಗೆ ಸೇರಿಸಬೇಕು ಎಂದು ಸಲಹೆ ನೀಡಿದರು.ಗ್ರಾಮದ ಮುಖಂಡ ಈಚಲದಾಳು ಮಂಜಪ್ಪಗೌಡ ಮಾತನಾಡಿ, ಹೊಸಕೆರೆ ಶಾಲೆಗೆ ಆಟದ ಮೈದಾನದ ಅಗತ್ಯವಿದೆ. ಆದ್ದರಿಂದ ಸರ್ಕಾರ ಆಟದ ಮೈದಾನಕ್ಕೆ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು. ಬಾಳೆ ಗ್ರಾಪಂ ಅಧ್ಯಕ್ಷೆ ರತ್ನಮ್ಮ ಉದ್ಘಾಟಿಸಿದರು. ಶಾಲೆಯ ಎಸ್ ಡಿ ಎಂಸಿ ಅಧ್ಯಕ್ಷ ಗೋಪಾಲ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬಾಳೆ ಗ್ರಾಪಂ ಸದಸ್ಯೆ ಶಾಂತಮ್ಮ, ಪ್ರಿಯೇಶ್, ಗ್ರಾಮದ ಮುಖಂಡ ಈ.ಸಿ.ಶೇವಿಯಾರ್, ತಾ.ಪ್ರಾ.ಶಾ. ಶಿ.ಸಂಘದ ಸಂಘಟನಾ ಕಾರ್ಯದರ್ಶಿ ಬೋಗೇಶಪ್ಪ, ಇಸಿಒ ರಂಗಪ್ಪ, ಸಿಆರ್ ಪಿಗಳಾದ ಓಂಕಾರಪ್ಪ, ಅನಂತಪ್ಪ, ಐ.ಇ.ಆರ್.ಟಿ. ವಿಜಯಕುಮಾರ್, ಎಸ್ ಡಿಎಂಸಿ ಮಾಜಿ ಅಧ್ಯಕ್ಷ ಲಿಂಗಪ್ಪ, ಸಿಆರ್‌ಎಸ್‌ಡಿಎಂಸಿ ಉಪಾಧ್ಯಕ್ಷೆ ಸುನೀತ, ಶಿಕ್ಷಕರಾದ ಮಂಜಪ್ಪ, ಪ್ರಿಯ ಇದ್ದರು.
ಇದೇ ಸಂದರ್ಭದಲ್ಲಿ 7 ನೇತರಗತಿಯಲ್ಲಿ ಅತಿ ಹೆಚ್ಚು ಅಂಕ ಪಡೆದ, ಪ್ರತಿಭಾ ಕಾರಂಜಿ ಹಾಗೂ ಕ್ರೀಡಾ ಕೂಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು. ಶಿಕ್ಷಕಿ ಲಿಸ್ಸಿ ವರದಿ ವಾಚಿಸಿದರು. ಶಿಕ್ಷಕ ಸುಭಾಶ್ , ಮುಖ್ಯ ಶಿಕ್ಷಕ ಯೋಗೀಶ್ ಆರಾಧ್ಯ, ಜೋಯ್ಸ್ ಮತ್ತು ಫಿಲೋಮಿನ ಇದ್ದರು.