ಶಕ್ತಿಯಿಲ್ಲದ ಸರ್ಕಾರದಿಂದ ಸುಪ್ರೀಮ್‌ಗೆ ಹೋಗುವ ನಾಟಕ । ರಂಭಾಪುರಿ ಪೀಠದಲ್ಲಿ ಶ್ರೀಗಳ ಆಶೀರ್ವಾದ
ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಂಡು ಪ್ರಚಾರ ಪಡೆಯುವ ದೃಷ್ಠಿಯಿಂದ ಕೆಲವೊಂದು ತಂತ್ರ ಮಾಡುತ್ತಿದೆ ಎಂದು ಉಡುಪಿ-ಚಿಕ್ಕಮಗಳೂರು ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಆರೋಪಿಸಿದರು.
ರಂಭಾಪುರಿ ಪೀಠದಲ್ಲಿ ಭಾನುವಾರ ಸುದ್ದಿಗಾರರೋಂದಿಗೆ ಮಾತನಾಡಿ, ವಿಪರೀತ ಬರ ಬಂದ ಸಂದರ್ಭದಲ್ಲಿ ಸಮಸ್ಯೆಗಳನ್ನು ಪರಿಹರಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ತಿಳಿಸಿದರು.ಈ ಹಿಂದೆ ಯಡಿಯೂರಪ್ಪ ಸಿಎಂ ಆಗಿದ್ದಾಗ ಕರ್ನಾಟಕದಲ್ಲಿ ವಿಪರೀತ ಪ್ರವಾಹ ಸಂದರ್ಭದಲ್ಲಿ ರಾಜ್ಯ ಸರ್ಕಾರದಿಂದ ಮನೆ ಕಳೆದುಕೊಂಡವರಿಗೆ ₹ 5 ಲಕ್ಷ ಪರಿಹಾರ ಘೋಷಿಸಿ, ಲಕ್ಷಾಂತರ ಮನೆಗಳಿಗೆ ಪರಿಹಾರ ನೀಡಲಾಗಿತ್ತು.
ಕೇಂದ್ರ ರಾಜ್ಯಕ್ಕೆ ಪ್ರತೀ ತಿಂಗಳು 22 ಲಕ್ಷ ಕ್ವಿಂಟಾಲ್ ಅಕ್ಕಿ ಕಳುಹಿಸುತ್ತಿದೆ. ಇದೂ ಕೂಡ ನಮ್ಮದೇ ಅನ್ನಭಾಗ್ಯ ಎನ್ನುತ್ತಾರೆ. ಬರ ಎದುರಿಸಲಾಗದೆ, ಜನ ಜಾನುವಾರು ಗುಳೆ ಹೋಗುವ ಪರಿಸ್ಥಿತಿ ಎದುರಾದಾಗ ತನ್ನಲ್ಲಿ ಶಕ್ತಿ ಇಲ್ಲದ ರಾಜ್ಯ ಸರ್ಕಾರ ಸುಪ್ರೀಂ ಕೊರ್ಟ್ ಗೆ ಹೋಗುವ ನಾಟಕ ಮಾಡಿದೆ. ಇದು ವಿಫಲತೆ ಮುಚ್ಚುವ ತಂತ್ರವೇ ಹೊರತು ಕೇಂದ್ರ ಸರ್ಕಾರದ ಗೊಂದಲವಲ್ಲ ಎಂದು ಸ್ಪಷ್ಟಪಡಿಸಿದರು.ಚಿಕ್ಕಮಗಳೂರಿನಲ್ಲಿ ಅಡಕೆ, ಕಾಫಿ ಬೆಳೆಗಾರರು ಹೆಚ್ಚು ಇದ್ದಾರೆ. ಬಗರ್‌ಹುಕುಂ, ಅಡಕೆ ಹಳದಿ ಎಲೆ ರೋಗ ಮುಂತಾದ ಭೌಗೋಳಿಕ ಸಮಸ್ಯೆ ಇರುವ ಪ್ರದೇಶ. ಉಡುಪಿ ಜಿಲ್ಲೆ ಕೃಷಿ ಮತ್ತು ಮೀನುಗಾರಿಕೆಗೆ ಹೆಸರಾದ ಜಿಲ್ಲೆ.ಉಡುಪಿಯಲ್ಲಿ ನಾನು ಉಸ್ತುವಾರಿ ಸಚಿವನಾಗಿ ಕೆಲಸ ಮಾಡಿದ್ದು, 4 ಬಾರಿ ಶಾಸಕ, 3 ಬಾರಿ ಮಂತ್ರಿ, 2 ಬಾರಿ ವಿರೋಧ ಪಕ್ಷದ ನಾಯಕನಾಗಿ, ಗ್ರಾಪಂನಿಂದ ಎಂಎಲ್‌ಸಿವರೆಗಿನ ರಾಜಕೀಯ ಚಟುವಟಿಕೆಗಳು ನಡೆಸಿದ್ದೇನೆ ಎಂದರು.ಚಿಕ್ಕಮಗಳೂರಿನ ಅಡಕೆ, ಕಾಫಿ ಬೆಳೆಗಾರರು ಸೇರಿದಂತೆ ರೈತರ ಎಲ್ಲಾ ಸಮಸ್ಯೆ ಬಗೆಹರಿಸುವುದು ನನ್ನ ಆದ್ಯತೆ. ನಾನು ಸಂಸದನಾಗಿ ಆಯ್ಕೆಗೊಂಡಲ್ಲಿ ಜಿಲ್ಲೆಯಲ್ಲಿನ ರೇಲ್ವೇ ಯೋಜನೆ ವಿಸ್ತರಣೆ, ಅಗತ್ಯ ಮೂಲಭೂತ ಸೌಕರ್ಯ, ಪ್ರಧಾನಮಂತ್ರಿ ಯೋಜನೆ ರಸ್ತೆ ನಿರ್ಮಾಣ, ಜಲಜೀವನ ಯೋಜನೆ ಸೇರಿದಂತೆ ಎಲ್ಲಾ ಯೋಜನೆಗಳ ಮೂಲಕ ಸರ್ವತೋಮುಖ ಅಭಿವೃದ್ಧಿ ಉದ್ದೇಶವಿದೆ. ನಿಶ್ಚಿತವಾಗಿ ಜನರ ಜೊತೆ ನಿಂತು ಅಭಿವೃದ್ಧಿ ಕಾರ್ಯ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಸಿದರು.
--(ಬಾಕ್ಸ್)--
ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಅವರು ನನಗೆ ಹಿಂದಿ ಬರುವುದಿಲ್ಲ ಎಂದು ಹೇಳಿದ್ದಾರೆ. ನಾನು ಸಾಮಾನ್ಯ ಕೂಲಿ ಮಾಡುವ ಕುಟುಂಬದಲ್ಲಿ ಹುಟ್ಟಿ ಬೆಳೆದವನು. ಹಾಗಾಗಿ ಇಂಗ್ಲೀಷ್ ಮತ್ತು ಹಿಂದಿ ನನಗೆ ಬರುವುದಿಲ್ಲ.
(ಬಾಕ್ಸ್)ರಂಭಾಪುರಿ ಶ್ರೀ ಆಶೀರ್ವಾದ
ಬಾಳೆಹೊನ್ನೂರಿನ ರಂಭಾಪುರಿ ಪೀಠಕ್ಕೆ ಭೇಟಿ ನೀಡಿದ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸಪೂಜಾರಿ ಶ್ರೀ ರಂಭಾಪುರಿ ಜಗದ್ಗುರು ಡಾ.ವೀರಸೋಮೇಶ್ವರ ಸ್ವಾಮೀಜಿ ಆಶೀರ್ವಾದ ಪಡೆದರು. ಮಾಜಿ ಸಚಿವ ಡಿ.ಎನ್.ಜೀವರಾಜ್, ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜಶೆಟ್ಟಿ, ಕಲ್ಮರುಡಪ್ಪ, ಭಾಸ್ಕರ್, ಉಮೇಶ್ ಕಲ್ಮಕ್ಕಿ, ಮಾಲತೇಶ್ ಇದ್ದರು.