ಕೇಂದ್ರದ ಯೋಜನೆಗಳಿಗೆ ರಾಜ್ಯ ಸರ್ಕಾರ ಸಹಕಾರ ನೀಡಲಿ-ಜೋಶಿ

KannadaprabhaNewsNetwork |  
Published : Mar 15, 2026, 02:15 AM IST
ಟೈಕಾನ್‌ ಸಮಾವೇಶಕ್ಕೆ ಜೋಶಿ ಚಾಲನೆ ನೀಡಿದರು. | Kannada Prabha

ಸಾರಾಂಶ

ಗಾಮನಗಟ್ಟಿ ಕೈಗಾರಿಕಾ ಪ್ರದೇಶದಲ್ಲಿ ಎಫ್‌ಎಂಸಿಜಿ ಕ್ಲಸ್ಟರ್‌ ಸ್ಥಾಪನೆಯಾಗಿದೆ. ರಾಜ್ಯ ಸರ್ಕಾರ ಭೂಮಿ ದರ ಹೆಚ್ಚಿಸಿದೆ. ಇದರಿಂದ ಕೈಗಾರಿಕೋದ್ಯಮಿಗಳು ತಮ್ಮ ಘಟಕ ಸ್ಥಾಪಿಸಿಕೊಳ್ಳಲು ಮುಂದೆ ಬರುತ್ತಿಲ್ಲ. ಈ ಬಗ್ಗೆ ಸಂಸ್ಥೆಗಳು ಸರ್ಕಾರದ ಗಮನಕ್ಕೆ ತರಬೇಕು ಎಂದು ಪ್ರಹ್ಲಾದ ಜೋಶಿ ಹೇಳಿದರು.

ಹುಬ್ಬಳ್ಳಿ:

ಕೇಂದ್ರದ ಯೋಜನೆಗಳಿಗೆ ರಾಜ್ಯ ಸರ್ಕಾರ ಸಹಕಾರ ನೀಡಬೇಕು. ಇಲ್ಲದಿದ್ದಲ್ಲಿ ಅಭಿವೃದ್ಧಿಗೆ ಹಿನ್ನಡೆಯಾಗುತ್ತದೆ. ಧಾರವಾಡ- ಬೆಳಗಾವಿ ರೈಲು ಮಾರ್ಗ ಯೋಜನೆಗೆ ರಾಜ್ಯ ಸರ್ಕಾರ ಭೂಸ್ವಾಧೀನ ಮಾಡಿ ಕೊಡುತ್ತಿಲ್ಲ. ಇದರಿಂದಾಗಿ ಆ ಕೆಲಸ ಇನ್ನು ಶುರುವಾಗುತ್ತಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ನಗರದಲ್ಲಿ ಶನಿವಾರ ಟೈ ಹುಬ್ಬಳ್ಳಿ ವತಿಯಿಂದ ಏರ್ಪಡಿಸಿದ್ದ ಟೈಕಾನ್- 2026 ಉತ್ತರ ಕರ್ನಾಟಕ ರೈಸಿಂಗ್ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಅದಕ್ಕಾಗಿ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಹಾಗೂ ಟೈ ಪದಾಧಿಕಾರಿಗಳು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಒತ್ತಾಯಿಸಿದರು.

ಗಾಮನಗಟ್ಟಿ ಕೈಗಾರಿಕಾ ಪ್ರದೇಶದಲ್ಲಿ ಎಫ್‌ಎಂಸಿಜಿ ಕ್ಲಸ್ಟರ್‌ ಸ್ಥಾಪನೆಯಾಗಿದೆ. ರಾಜ್ಯ ಸರ್ಕಾರ ಭೂಮಿ ದರ ಹೆಚ್ಚಿಸಿದೆ. ಇದರಿಂದ ಕೈಗಾರಿಕೋದ್ಯಮಿಗಳು ತಮ್ಮ ಘಟಕ ಸ್ಥಾಪಿಸಿಕೊಳ್ಳಲು ಮುಂದೆ ಬರುತ್ತಿಲ್ಲ. ಈ ಬಗ್ಗೆ ಸಂಸ್ಥೆಗಳು ಸರ್ಕಾರದ ಗಮನಕ್ಕೆ ತರಬೇಕು ಎಂದರು.

ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗದ ಕಾಮಗಾರಿಗೆ ಶೀಘ್ರದಲ್ಲೇ ಅನುಮೋದನೆ ದೊರೆಯಲಿದೆ. ಇದರಿಂದ ಉತ್ತರ ಕರ್ನಾಟಕ ಭಾಗದ ಕೈಗಾರಿಕೋದ್ಯಮಿಗಳಿಗೆ ಬಹಳಷ್ಟು ಸಹಕಾರವಾಗಲಿದೆ. ಇದು ಬಂದರುಗಳಿಗೆ ಸಂಪರ್ಕದ ಕೊಂಡಿಯಾಗಲಿದ್ದು, ಅಭಿವೃದ್ಧಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

ದೇಶದಲ್ಲಿ ವಾಣಿಜ್ಯೋದ್ಯಮಿಗಳಿಗೆ ಕೌಶಲ್ಯ ಬಹಳ ಅವಶ್ಯಕ. ದೇಶದ ಎಲ್ಲ ಕ್ಷೇತ್ರದಲ್ಲಿ ಅವಕಾಶಗಳು ತೆರೆದು ಕೊಂಡಿವೆ. ಕೃತಕ್ ಬುದ್ಧಿಮತ್ತೆ (ಎಐ), ತಂತ್ರಜ್ಞಾನ ಸೇರಿದಂತೆ ಹಲವು ಕ್ಷೇತ್ರ ಬೆಳೆದಿವೆ. ದೇಶದಲ್ಲಿ ಮುಂದಿನ ಐದು ವರ್ಷದಲ್ಲಿ ಕೋಟ್ಯಂತರ ಉದ್ಯೋಗ ಸೃಷ್ಟಿಯಾಗಲಿವೆ. ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಯಾಗಲಿದೆ ಎಂದು ಹೇಳಿದರು.

ದೇಶದಲ್ಲಿ 300ಕ್ಕೂ ಹೆಚ್ಚು ಮೊಬೈಲ್ ತಯಾರಿಕಾ ಕಂಪನಿಗಳಿದ್ದು, ವಿಶ್ವಕ್ಕೆ ಶೇ.30ರಷ್ಟು ಮೊಬೈಲ್‌ಗಳನ್ನು ಇಲ್ಲಿಂದ ರವಾನೆ ಮಾಡಲಾಗುತ್ತಿದೆ. ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ. ಬೇರೆ ರಾಜ್ಯಗಳಲ್ಲಿ ವಿದ್ಯುತ್ ದರ ಕಡಿಮೆಯಿದ್ದು, ರಾಜ್ಯದಲ್ಲಿ 90 ಪೈಸೆ ಹೆಚ್ಚಿಸಲಾಗಿದೆ. ಇದು ಕೈಗಾರಿಕೋದ್ಯಮಿಗಳಿಗೆ ಹೊರೆಯಾಗಲಿದೆ. ಭಾರತ ಉತ್ಪನ್ನಗಳಿಗೆ ವಿದೇಶದಲ್ಲಿ ಬಾರಿ ಬೇಡಿಕೆ ಇದ್ದು ದೇಶದಲ್ಲಿ ವಿಮಾನ ನಿಲ್ದಾಣ, ರೈಲ್ವೆ ಮಾರ್ಗ, ರಸ್ತೆ ಸಂಪರ್ಕ ಮಾಡಿದ್ದರಿಂದ ಅಭಿವೃದ್ಧಿಗೆ ಸಹಕಾರವಾಗಿದೆ ಎಂದರು.

ವಿಧಾನಸಭೆ ಪ್ರತಿ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಮಾತನಾಡಿ, ಟೈ ಇವತ್ತು ದೊಡ್ಡ ಸಂಸ್ಥೆಯಾಗಿ ಬೆಳೆದಿದೆ. 16 ವರ್ಷ ಹಿಂದೆ 5 ಜನ ಆರಂಭಿಸಿದ್ದೇವು. ಈಗ ಬಹಳ ಹೆಸರುಗಳಿಸಿದೆ. ನವೋದ್ಯಮಿಗಳಿಗೆ ಮಾರ್ಗದರ್ಶನ ಮಾಡಲಾಗುತ್ತಿದೆ. ಶಿಕ್ಷಣ ಸೇರಿದಂತೆ ನಾಲ್ಕು ಕ್ಷೇತ್ರದ ಒಳಗೊಂಡು ಮುಂದೆ ನಡೆದಿದೆ. ಉದ್ಯಮಿಗಳಿಗೆ ಪ್ರೋತ್ಸಾಹ ನೀಡುವಂತೆ ವಾತಾವರಣ ನಿರ್ಮಾಣವಾಗಿದೆ. ಸ್ವಂತ ಯೋಜನೆ, ಆಲೋಚನೆಯಿಂದ ಅನೇಕರು ಉದ್ಯಮಿಗಳಾಗಿ ಬೆಳೆದಿದ್ದಾರೆ ಎಂದು ಹೇಳಿದರು. ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ, ಟೈ ಹುಬ್ಬಳ್ಳಿ ಅಧ್ಯಕ್ಷ ಗಿರೀಶ ಮಾನೆ, ವಿಶಾಲ ನಾಡಗೌಡರ, ಸ್ವರ್ಣಾ ಗ್ರೂಪ್‌ ಆಫ್‌ ಕಂಪನೀಸ್‌ನ ವ್ಯವಸ್ಥಾಪಕ ನಿರ್ದೇಶಕ ವಿ.ಎಸ್. ವಿ ಪ್ರಸಾದ, ಅಮೃತ ಕಬಾಡೆ, ಪ್ರಭಾ ಹಂಡಿಗೌಡರ ಇದ್ದರು.ಟೈಕಾನ್- 2026 ಸಮಾವೇಶ ಅನೇಕ ಸಾಧಕರ, ಸ್ಟಾರ್ಟ್‌ಅಪ್‌ಗಳ ಸಮಾಗಮಕ್ಕೆ ಸಾಕ್ಷಿಯಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಹೊಸ ಉದ್ಯಮಗಳ ಅನ್ವೇಷಣೆ, ಅನುಷ್ಠಾನ ಹಾಗೂ ಪೋಷಣೆಗೆ ಇದು ಸಹಕಾರಿಯಾಗಿದೆ. ಅಲ್ಲದೇ, ಈ ಭಾಗದಲ್ಲಿ ಉದ್ಯಮ ಕ್ಷೇತ್ರದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದು, ನವೋದ್ಯಮಿಗಳಿಗೆ ಪ್ರೋತ್ಸಾಹ ಸಿಕ್ಕಿದೆ ಅನೇಕರು ಉದ್ದಿಮೆದಾರರಾಗಿ ಬೆಳೆದಿದ್ದಾರೆ. ವಿಶೇಷವಾಗಿ ಉತ್ತರ ಕರ್ನಾಟಕ ರೈಸಿಂಗ್ ಘೋಷವಾಕ್ಯದಲ್ಲಿ ಆಯೋಜಿಸಿ ಈ ಭಾಗದ ಕೈಗಾರಿಕಾ ಅಭಿವೃದ್ಧಿಗೆ ಮುನ್ನಡಿ ಬರೆಯಲಾಗಿದೆ ಎಂದು ಡಾ.ಸಿಎಚ್.ವಿಎಸ್‌ವಿ. ಪ್ರಸಾದ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲಿಂಗರಾಜ ಪಾಟೀಲಗೆ ವಿಜಯೇಂದ್ರ, ಜೋಶಿ ಸಮಾಧಾನ
ಉತ್ತಮ ಶಿಕ್ಷಕರಾಗಲು ಪಾಠದ ಜ್ಞಾನದ ಜತೆಗೆ ಮಾನವೀಯ ಮೌಲ್ಯಗಳು ಅಗತ್ಯ