ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸುಪ್ರಿಂಕೋರ್ಟ್ ನಿರ್ದೇಶನದಂತೆ ರಾಜ್ಯ ಸರ್ಕಾರ ಜಾರಿಮಾಡಿರುವ ಒಳಮೀಸಲಾತಿ ಅವೈಜ್ಞಾನಿಕವಾಗಿದೆ. ಇದನ್ನು ಅಲೆಮಾರಿ ಬುಡಕಟ್ಟು ಮಹಾಸಭಾ, ಕರ್ನಾಟಕ ಅಸ್ಪೃಶ್ಯ ಅಲೆಮಾರಿ ಸಮುದಾಯಗಳ ಮಹಾ ಒಕ್ಕೂಟ ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ ಎಂದರು.
ಒಳಮೀಸಲಾತಿಯನ್ನು ಜಾರಿ ಮಾಡುವ ಸಂದರ್ಭದಲ್ಲಿ ರಾಜ್ಯ ಸರ್ಕಾರ ತನ್ನ ಮನಸ್ಸಿನಂತೆ ನಡೆಯುವುದಾದರೆ ಜಸ್ಟೀಸ್ ನಾಗಮೋಹನ್‌ದಾಸ್ ಸಮಿತಿ ನೇಮಕ ಏಕೆ ಮಾಡಬೇಕಾಗಿತ್ತು. ನೂರಾರು ಕೋಟಿ ರುಪಾಯಿ ಏಕೆ ಸಾರ್ವಜನಿಕರ ಹಣವನ್ನು ಪೋಲು ಮಾಡಬೇಕಾಗಿತ್ತು ಎಂದು ಕಿಡಿ ಕಾರಿದರು.ಸರ್ಕಾರ ಅಲೆಮಾರಿಗಳಿಗೆ ಶೇ1ರಷ್ಟು ಮೀಸಲಾತಿ ಜಾರಿಮಾಡಲಾಗದಿದ್ದಲ್ಲಿ ನಮಗೆ ನಿಗಮ ಮಂಡಳಿ ಮಾಡುವ , ವಿಶೇಷ ಅನುದಾನ ನೀಡುವ ಮಾತು ಬಿಟ್ಟು ಮೊದಲು ಕೋರ್ಟಿಗೆ ತನ್ನ ಹೇಳಿಕೆಯನ್ನು ದಾಖಲಿಸಲಿ. ನಮಗೆ ನ್ಯಾಯಾಂಗದ ಮೇಲೆ ಅಪಾರವಾದ ನಂಬಿಕೆಯಿದ್ದು, ಅಲ್ಲಿಯೇ ನ್ಯಾಯ ಪಡೆದುಕೊಳ್ಳುತ್ತೇವೆ ಎಂದರು.
ತಬ್ಬಲಿ ಸಮುದಾಯಗಳಿಗೆ ಶೇ1ರಷ್ಟು ಮೀಸಲಾತಿ ನೀಡದೆ ವಂಚಿಸಲು ಕಾರಣ ನಮ್ಮ ಸಮುದಾಯ ಶೈಕ್ಷಣಿಕವಾಗಿ, ಆರ್ಥಿಕವಾಗಿ,ರಾಜಕೀಯವಾಗಿ ಮುನ್ನೆಲೆಗೆ ಬಂದಿಲ್ಲ ಎನ್ನುವುದೇ ಆಗಿದೆ. ರಾಜ್ಯದಲ್ಲಿ ಅಲೆಮಾರಿ ಸಮುದಾಯದ 49 ಪಂಗಡದ ಜನಸಂಖ್ಯೆ 5 ಲಕ್ಷಕ್ಕೂ ಮೀರಿದೆ ಎನ್ನುವುದನ್ನು ನಾಗಮೋಹನ್‌ದಾಸ್ ಸಮಿತಿ ವರದಿಯಲ್ಲಿದೆ. ನಾವು ಅವರಿವರ ಪಾಲನ್ನು ಕಿತ್ತು ನಮಗೆ ಕೊಡಿ ಎಂದು ಕೇಳುತ್ತಿಲ್ಲ. ನ್ಯಾಯಬದ್ಧವಾಗಿ ನಮಗೆ ಕೊಡಬೇಕಾದಷ್ಟನ್ನೇ ಕೊಟ್ಟರೆ ಶತಮಾನಗಳ ನಮ್ಮ ಶಾಪ ವಿಮೋಚನೆ ಆಗಿ, ನಮ್ಮ ಮಕ್ಕಳು ಶೈಕ್ಷಣಿಕವಾಗಿ, ಸಾಮಾಜಿಕ, ಆರ್ಥಿಕ, ರಾಜಕೀಯವಾಗಿ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ. ಬೆಳಗಾವಿ ಅಧಿವೇಶನದಲ್ಲಾದರೂ ಖಾತರಿಗೊಳಿಸುವಂತೆ ಒತ್ತಾಯಿಸಿದರು.ವಕೀಲ ರಮೇಶ್ ಮಾತನಾಡಿ, ರಾಜ್ಯ ಸರ್ಕಾರದ ಮೇಲೆ ನಮಗೆ ನಂಬಿಕೆಯಿಲ್ಲ. ಒಳಮೀಸಲಾತಿ ಜಾರಿ ವಿಚಾರದಲ್ಲಿ ತಬ್ಬಲಿ ಸಮುದಾಯಗಳಿಗೆ ಶೇ.1 ರಷ್ಟು ಮೀಸಲಾತಿ ಒದಗಿಸಲು ಪ್ರಬಲ ಸಮುದಾಯಗಳ ಸಚಿವರು ಅಡ್ಡಿಯಾಗಿದ್ದಾರೆ. ಮುಖ್ಯಮಂತ್ರಿಗಳು ನಮಗೆ ನ್ಯಾಯ ಒದಗಿಸುವ ಮನಸ್ಸಿದ್ದರೂ ಬಲಾಢ್ಯ ಸಮುದಾಯದ ಸಚಿವರ ಹೆದರಿಕೆಯಿಂದ ಮಾಡಲಾಗುತ್ತಿಲ್ಲ. ಹೀಗಾಗಿ ಹೈಕೋರ್ಟಿನಲ್ಲಿ ದಾವೆ ಹೂಡಿದ್ದೇವೆ. ಸರ್ಕಾರ ಈ ಕೂಡಲೇ ತನ್ನ ನಿಲುವನ್ನು ಲಿಖಿತವಾಗಿ ಸಲ್ಲಿಸಿದ್ದಲ್ಲಿ ನ್ಯಾಯಾಲಯದ ಮೂಲಕವೇ ನಮ್ಮ ಪಾಲನ್ನು ಪಡೆದುಕೊಳ್ಳುತ್ತೇವೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದರು.
ಸುದ್ದಿಗೋಷ್ಠಿಯಲ್ಲಿ ಅಲೆಮಾರಿ ಬುಡಕಟ್ಟು ಮಹಾಸಭಾ ಜಿಲ್ಲಾಧ್ಯಕ್ಷ ಎಸ್.ವಿ.ಗಂಗಾಧರ್, ಖಜಾಂಚಿ ಮಂಜುನಾಥ್ ಜಿ.ಎಂ.,ಗೌರವಾಧ್ಯಕ್ಷ ಕುಳಾಯಪ್ಪ, ಆರ್. ರಾಮಾಂಜಮ್ಮ, ಅಶ್ವತ್ಥಪ್ಪ, ಮಾಲಮ್ಮ, ಗಂಗರತ್ನಮ್ಮ ಇತರರು ಇದ್ದರು.