ಹಾನಗಲ್ಲ: ಪ್ರತಿಯೊಂದು ಕುಟುಂಬಗಳನ್ನು ಸಹ ಆರ್ಥಿಕವಾಗಿ ಮೇಲೆತ್ತಿ ಸಶಕ್ತಗೊಳಿಸಬೇಕು ಎನ್ನುವ ಉದ್ದೇಶದಿಂದ ರಾಜ್ಯ ಸರ್ಕಾರ ಬಹಳ ಗಟ್ಟಿಯಾಗಿ ಬಡವರ ಪರವಾಗಿ ನಿಂತಿದೆ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.ತಾಲೂಕಿನ ತಿಳವಳ್ಳಿ ಗ್ರಾಮದ ಗ್ರಾಪಂ ಸಭಾಭವನದಲ್ಲಿ ಶುಕ್ರವಾರ ಗ್ಯಾರಂಟಿ ಯೋಜನೆಗಳ ತಾಲೂಕು ಮಟ್ಟದ ಅನುಷ್ಠಾನ ಸಮಿತಿ ಆಯೋಜಿಸಿದ್ದ ಗ್ಯಾರಂಟಿ ಫಲಾನುಭವಿಗಳ ಸ್ಪಂದನಾ ಸಭೆ ಉದ್ಘಾಟಿಸಿ ಮಾತನಾಡಿದರು.
ವಿರೋಧ ಪಕ್ಷಗಳು ಗ್ಯಾರಂಟಿ ಯೋಜನೆಗಳನ್ನು ಬಹಳ ವಿರೋಧಿಸುತ್ತಿವೆ. ಸರ್ಕಾರ ದಿವಾಳಿಯಾಗಿದೆ ಎಂದು ಹೇಳುವ ಮೂಲಕ ಈ ಯೋಜನಗಳನ್ನು ಬಂದ್ ಮಾಡಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಯೋಜನೆಗಳ ಲಾಭ ಪಡೆಯುತ್ತಿರುವ ಮಹಿಳೆಯರು ಗಟ್ಟಿ ಧ್ವನಿ ಮೊಳಗಿಸಿ, ರಾಜ್ಯ ಸರ್ಕಾರದ ಜತೆಗೆ ನಿಲ್ಲುವ ಮೂಲಕ ವಿರೋಧಿಗಳ ಬಾಯಿ ಮುಚ್ಚಿಸಬೇಕಿದೆ. ಗ್ಯಾರಂಟಿ ಯೋಜನೆಗಳಿಂದ ಬಡ ಕುಟುಂಬಗಳಲ್ಲಿ ಆರ್ಥಿಕ ನಿರ್ವಹಣೆಗೆ ಅನುಕೂಲವಾಗಿದೆ. ವ್ಯಾಪಾರ ಮಾಡಲು, ವಾಹನ, ಗೃಹೋಪಯೋಗಿ ವಸ್ತು ಖರೀದಿಸಲು, ಮನೆ ಕಟ್ಟಲು, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಮಹಿಳೆಯರು ಗ್ಯಾರಂಟಿ ಹಣ ಬಳಸುತ್ತಿದ್ದಾರೆ. ಮಧ್ಯವರ್ತಿಗಳ ಕಾಟವಿಲ್ಲದೇ ಪ್ರತಿವರ್ಷ ಕನಿಷ್ಟ ₹45ರಿಂದ ₹50 ಸಾವಿರ ಆರ್ಥಿಕ ನೆರವು ಸಿಗುತ್ತಿದೆ. ಸಾಕಷ್ಟು ಕುಟುಂಬಗಳು ನೆಮ್ಮದಿಯ ಜೀವನ ಸಾಗಿಸಲು ಸಾಧ್ಯವಾಗಿದೆ ಎಂದರು.ಗ್ಯಾರಂಟಿ ಅನುಷ್ಠಾನ ಸಮಿತಿಯ ರಾಜ್ಯ ಉಪಾಧ್ಯಕ್ಷ ಎಸ್.ಆರ್. ಪಾಟೀಲ ಮಾತನಾಡಿ, ಗ್ಯಾರಂಟಿ ಯೋಜನೆಗಳು ಮಹಿಳೆಯರಿಗೆ ಶಕ್ತಿ ತುಂಬಿವೆ. ಬದುಕಿನಲ್ಲಿ ಭರವಸೆ ಮೂಡಿಸಿವೆ. ಇಂತಹ ಯೋಜನೆಗಳನ್ನು ಯಾವುದೇ ಕಾರಣಕ್ಕೂ ಸ್ಥಗಿತಗೊಳ್ಳುವುದಿಲ್ಲ ಎಂದರು.ಸಮಿತಿಯ ಜಿಲ್ಲಾಧ್ಯಕ್ಷ ಎಂ.ಎಂ. ಹಿರೇಮಠ, ತಾಲೂಕಾಧ್ಯಕ್ಷ ವಿಜಯಕುಮಾರ ದೊಡ್ಡಮನಿ ಮಾತನಾಡಿ, ತಾಂತ್ರಿಕ ಕಾರಣದಿಂದ ಕೆಲ ಅರ್ಹ ಫಲಾನುಭವಿಗಳು ಗೃಹಲಕ್ಷ್ಮೀ ಯೋಜನೆಯಿಂದ ವಂಚಿತರಾಗಿದ್ದಾರೆ. ಸಮೀಕ್ಷೆ ಕೈಗೊಂಡು ಅರ್ಹರಿಗೆಲ್ಲ ಯೋಜನೆಯ ಲಾಭ ದೊರಕಿಸಲು ಪ್ರಯತ್ನಿಸಲಾಗುತ್ತಿದೆ ಎಂದರು.ಗ್ರಾಪಂ ಅಧ್ಯಕ್ಷೆ ರೇಖಾ ಕುರುಬರ, ಪ್ರೇಮಾ ಮಾಯಕ್ಕನವರ, ರೂಪಾ ಕಾನಮನಿ, ಚಂದ್ರಪ್ಪ ಜಾಲಗಾರ, ಮಂಜು ಗೊರಣ್ಣನವರ, ಪುಟ್ಟಪ್ಪ ನರೇಗಲ್, ಫಯಾಜ್ ಲೋಹಾರ, ಉಮೇಶ ತಳವಾರ, ಶಿವಯೋಗಿ ಒಡೆಯರ್, ಬಸವರಾಜ ಚವ್ಹಾಣ, ರಾಮಣ್ಣ ಶೇಷಗಿರಿ, ಯಲ್ಲಪ್ಪ ಕಲ್ಲೇರ, ಭೀಮಣ್ಣ ಲಮಾಣಿ, ತಾಪಂ ಇಒ ಪರಶುರಾಮ ಪೂಜಾರ ಇದ್ದರು.