ಮಧ್ಯವರ್ತಿಗಳ ಮಟ್ಟದಲ್ಲಿ ವಸತಿ ಪಡೆದುಕೊಳ್ಳುತ್ತಿದ್ದಾರೆ. ಅಷ್ಟರ ಮಟ್ಟಿಗೆ ಕೈ ನಾಯಕರು ಅಸಹಾಯಕರಾಗಿದ್ದಾರೆ. ಇವೆಲ್ಲ ನೋಡಿದಾಗ ಸರ್ಕಾರ ಎಲ್ಲಿಗೆ ಬಂದು ನಿಂತಿದೆ ಎಂದು ಅವರ ಸ್ವಪಕ್ಷೀಯರೇ ಮಾತನಾಡಿಕೊಳ್ಳುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ಚನ್ನಪಟ್ಟಣ
ರಾಜ್ಯ ಸರ್ಕಾರದವರು ಎಸ್ ಟ್ಯಾಕ್ಸ್ ಎಂಬ ನೀತಿಯನ್ನು ಜಾರಿಗೆ ತಂದಿದ್ದಾರೆ. ಗುತ್ತಿಗೆದಾರರಿಗೆ, ಅಧಿಕಾರಿಗಳ ವರ್ಗಾವಣೆಗೆ ಹಾಕುವ ಟ್ಯಾಕ್ಸ್ ಅಂದರೆ ಎಸ್ ಟ್ಯಾಕ್ಸ್ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆರೋಪಿಸಿದರು.ಚನ್ನಪಟ್ಟಣದಲ್ಲಿ ಜನರೊಂದಿಗೆ ಜನತಾದಳ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಲು ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ವಸತಿ ತೆಗೆದುಕೊಳ್ಳಲು ಸ್ವಪಕ್ಷದ ನಾಯಕರೇ ಮಂತ್ರಿಗಳನ್ನು ಭೇಟಿ ಮಾಡಿದರೂ ಆಗುತ್ತಿಲ್ಲ ಎಂದರು.ಮಧ್ಯವರ್ತಿಗಳ ಮಟ್ಟದಲ್ಲಿ ವಸತಿ ಪಡೆದುಕೊಳ್ಳುತ್ತಿದ್ದಾರೆ. ಅಷ್ಟರ ಮಟ್ಟಿಗೆ ಕೈ ನಾಯಕರು ಅಸಹಾಯಕರಾಗಿದ್ದಾರೆ. ಇವೆಲ್ಲ ನೋಡಿದಾಗ ಸರ್ಕಾರ ಎಲ್ಲಿಗೆ ಬಂದು ನಿಂತಿದೆ ಎಂದು ಅವರ ಸ್ವಪಕ್ಷೀಯರೇ ಮಾತನಾಡಿಕೊಳ್ಳುತ್ತಿದ್ದಾರೆ. ಮುಂದೆ ರಾಜ್ಯವನ್ನು ಇವರು ಎಲ್ಲಿಗೆ ತೆಗೆದುಕೊಂಡು ಹೋಗಿ ನಿಲ್ಲಿಸುತ್ತಾರೋ ಗೊತ್ತಿಲ್ಲ ಎಂದರು.ಡಿಕೆ ಬ್ರದರ್ಸ್ ಆಶೀರ್ವಾದ ಇದ್ದರೆ ಅನುದಾನ ಗ್ಯಾರಂಟಿ ಎಂಬ ಶಾಸಕ ಬಾಲಕೃಷ್ಣ ಹೇಳಿಕೆ ವಿಚಾರಕ್ಕೆ ಯಾರ ಆಶಿರ್ವಾದ ಎಲ್ಲಿದೆ? ಇದ್ದರೆ, ಸ್ವಪಕ್ಷದವರೇ ಯಾಕೆ ಈ ರೀತಿ ಅಸಹಾಯಕರಾಗಿದ್ದಾರೆ. ಬಾಲಕೃಷ್ಣ ಡಿಕೆ ಬ್ರದರ್ಸ್ ಆಶಿರ್ವಾದದ ಲಿಸ್ಟ್‌ನಲ್ಲಿದ್ದರಾ, ಇಲ್ವಾ. ಬಾಲಕೃಷ್ಣ ಕೂಡ ಬೊಗಳೆ ಭಾಷಣ ಮಾಡುತ್ತಿದ್ದಾರ ಎಂಬುದು ನನಗೆ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.ವಿಶೇಷ ಅನುದಾನ ಕೊಡತ್ತೇವೆ ಅಂತ ಹೇಳುತ್ತಾರೆ. ಆದರೆ, ಯಾವ ಶಾಸಕರಿಗೆ ಯಾವ ಅನುದಾನ ಸಿಕ್ಕಿದೆ. ಯಾವ ನಾಯಕರಿಗೂ 10 ರು. ಅನುದಾನ ಸಿಕ್ಕಿಲ್ಲ. ಅಭಿವೃದ್ಧಿ ಎನ್ನುವುದು ಶೂನ್ಯ ಅಷ್ಟೇ. ರಾಮನಗರ ಜಿಲ್ಲೆ ಜೆಡಿಎಸ್ ಭದ್ರಕೋಟೆ ಕಳೆದುಕೊಂಡಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಬೈ ಎಲೆಕ್ಷನ್ ಬಳಿಕ ಜೆಡಿಎಸ್ ಅಸ್ತಿತ್ವ ಕಳೆದುಕೊಂಡಿದೆ ಎಂಬ ಭಾವನೆ ನನಗೆ ಇಲ್ಲ ಎಂದರು.ಕಳೆದ 30 ವರ್ಷದಿಂದ ದೇವೇಗೌಡರು, ಕುಮಾರಸ್ವಾಮಿ ಅವರನ್ನು ರಾಜಕೀಯವಾಗಿ ರಾಮನಗರ ಜಿಲ್ಲೆ ಜನತೆ ಬೆಳೆಸಿದ್ದಾರೆ. ಕಳೆದ ಚುನಾವಣೆಯಲ್ಲಿ ಸೋತ್ರೂ ಕೂಡ ಮನೆಯಲ್ಲಿ ಕೂರುವುದಿಲ್ಲ. ಜನರಿಗಾಗಿ ಕೆಲಸ ಮಾಡುತ್ತೇವೆ ಎಂದರು.
ಇತ್ತೀಚೆಗೆ ನಡೆದ ಡೈರಿ ಚುನಾವಣೆಯಲ್ಲಿ ಆಡಳಿತ ಸರ್ಕಾರ ಸಾಕಷ್ಟು ಅನ್ಯಾಯ ಮಾಡಿದೆ. ಇಂಥ ಕೆಟ್ಟ ಚುನಾವಣೆ ಎಂದಿಗೂ ನಡೆದಿರಲಿಲ್ಲ. ಜೆಡಿಎಸ್ ಅಭ್ಯರ್ಥಿ ಜಯಮುತ್ತು ಸೋಲಿಗೆ ಕಾಂಗ್ರೆಸ್‌ನ ಮಹಾನಾಯಕರು ಕಾರಣರಾಗಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ. ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ. ಕಾಲಚಕ್ರ ಬದಲಾವಣೆಯಾಗುತ್ತದೆ. ಮುಂದೆ ನಮಗೆ ಜನ ಆಶೀರ್ವಾದ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಾರ್ವತ್ರಿಕ ಚುನಾವಣೆ ಗಮನದಲ್ಲಿಟ್ಟುಕೊಂಡು ನಿಖಿಲ್ ಕುಮಾರಸ್ವಾಮಿ ಸದಸ್ಯತ್ವ ಅಭಿಯಾನಕ್ಕೆ ಬಂದಿಲ್ಲ. ಡಿಸೆಂಬರ್‌ನಲ್ಲಿ ಬರುವ ಗ್ರಾಪಂ ಚುನಾವಣೆಗೆ ಪಕ್ಷದ ಮುಖಂಡರಿಗೆ ಹುರಿದುಂಬಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.ರಾಜ್ಯಾದ್ಯಂತ ಜೆಡಿಎಸ್ ಸದಸ್ಯ ಸದಸ್ಯತ್ವ ಅಭಿಯಾನ ಆರಂಭವಾಗಿದೆ. ಈಗಾಗಲೇ ತುಮಕೂರು ಜಿಲ್ಲೆಯಲ್ಲಿ ಸದಸ್ಯತ್ವ ನೋಂದಣಿಯಾಗಿದೆ. ಇಂದು ಚನ್ನಪಟ್ಟಣದಲ್ಲಿ ನೋಂದಣಿ ಕಾರ್ಯಕ್ರಮ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ರಾಯಚೂರು ಜಿಲ್ಲೆಯಲ್ಲೂ ಸದಸ್ಯತ್ವ ನೋಂದಣಿ ಕಾರ್ಯಕ್ರಮ ಆರಂಭ ಮಾಡುತ್ತೇವೆ ಎಂದು ತಿಳಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.