ಕನ್ನಡಪ್ರಭ ವಾರ್ತೆ ರಿಪ್ಪನ್‍ಪೇಟೆ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಗ್ಯಾರಂಟಿ ಯೋಜನೆ ಘೋಷಿಸಿದೆ. ಆದರೆ, ಸಾಗರ, ಹೊಸನಗರ, ತೀರ್ಥಹಳ್ಳಿ, ಶಿಕಾರಿಪುರ ಹಾಗೂ ಸೊರಬ ತಾಲೂಕು ಸೇರಿದಂತೆ 4,700 ಗ್ರಾಮಗಳಿಗೆ ಕೆಂಪು ಬಸ್‍ಗಳ ಸೇವೆಯೇ ಇಲ್ಲ ಎಂದು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು. ರಿಪ್ಪನ್‍ಪೇಟೆ ಸಮೀಪದ ನೆವಟೂರು ಗ್ರಾಮದ ದೇವೇಂದ್ರಪ್ಪಗೌಡರ ಮನೆ ಆವರಣದಲ್ಲಿ ಅಯೋಜಿಸಲಾದ ಬಾಳೂರು ಮತ್ತು ಕೆಂಚನಾಲ ಬೂತ್‌ಗಳ ಬಿಜೆಪಿ ಕಾರ್ಯಕರ್ತರ ಭೇಟಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸರ್ಕಾರದ ಗ್ಯಾರಂಟಿ ಯೋಜನೆ ಸೌಲಭ್ಯದಿಂದ ವಂಚಿತರನ್ನಾಗಿಸಿರುವ ಕೆಂಪು ಬಸ್‍ಗಳಲ್ಲಿ ಸಂಚರಿಸುವ ಪುರುಷರಿಂದ ಡಬಲ್ ಚಾರ್ಜ್ ವಸೂಲಿ ಮಾಡುವುದರೊಂದಿಗೆ ಹಣ ಹೊಂದಿಸುವ ಕಾರ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನಿರತವಾಗಿದೆ ಎಂದು ಟೀಕಿಸಿದರು. ಬಿಜೆಪಿ ತತ್ವ -ಸಿದ್ಧಾಂತಗಳ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಸ್ತಿನ ಪಕ್ಷವಾಗಿದೆ. ಕಾರ್ಯಕರ್ತರ ಪರಿಶ್ರಮದಲ್ಲಿ ಪಕ್ಷವನ್ನು ಕಟ್ಟಿ ಬೆಳೆಸುವುದರೊಂದಿಗೆ ನಮ್ಮ ನಾಯಕರು ತಪಸ್ಸು ಮಾಡಿದ್ದಾರೆ. ಕೇಂದ್ರದ ಬಿಜೆಪಿ ಸರ್ಕಾರ ಆಧಿಕಾರಕ್ಕೆ ಬಂದ ಕಾಶ್ಮೀರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗಿದೆ, ಕೊರೋನಾ ಸಂಕಷ್ಟ ಪರಿಸ್ಥಿತಿ ಸಮರ್ಥವಾಗಿ ಎದುರಿಸಲಾಗಿದೆ, ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣ ಮುಂತಾದ ಸಾಧನೆಗಳನ್ನು ಜಾರಿಗೊಳಿಸಲಾಗಿದೆ ಎಂದು ವಿವರಿಸಿದರು. ಇಂದಿನ ರಾಜ್ಯಸರ್ಕಾರ ರೈತರ ಕಂದಾಯ ಜಮೀನಿಗೆ ಉಪಸಮಿತಿ ರಚಿಸುವ ಮೂಲಕ ಅರಣ್ಯ ಕಾಯ್ದೆ ಅನ್ವಯ ಕ್ರಿಮಿನಲ್ ಕೇಸ್ ದಾಖಲಿಸುವ ಕರಾಳ ಕಾಯ್ದೆ ಜಾರಿಗೊಳಿಸುವುದಾಗಿ ಅರಣ್ಯ ಸಚಿವ ಈಶ್ವರ ಖಂಡ್ರೆ ಮತ್ತು ಕಂದಾಯ ಸಚಿವ ಕೃಷ್ಣಬೈರೇಗೌಡ ಹೇಳಿಕೆ ನೀಡಿದ್ದಾರೆ. ಸರ್ಕಾರದ ಮಂತ್ರಿಗಳಿಗೆ ಬುದ್ಧಿ ಭ್ರಮಣೆ ಆದಂತಾಗಿದೆ. ಬರ ಪರಿಸ್ಥಿತಿ ನಿರ್ವಹಣೆಯಲ್ಲಿ ವಿಫಲಗೊಂಡಿರುವ ರಾಜ್ಯ ಸರ್ಕಾರ ಕೇಂದ್ರದ ಕಡೆ ಬೆರಳು ಮಾಡುತ್ತ ರೈತರು, ನಾಗರೀಕರನ್ನು ಬೀದಿಗೆ ಬೀಳುವಂತೆ ಮಾಡಿದೆ ಎಂದು ದೂರಿದರು. ರೈಲ್ವೆ ಯೋಜನೆಗೆ ಸವೆ: ಮೈಸೂರು- ಬೆಂಗಳೂರು- ಶಿವಮೊಗ್ಗ- ಸಾಗರ- ತಾಳಗುಪ್ಪ ರೈಲ್ವೆ ಸಂಪರ್ಕವನ್ನು ಶಿರಸಿಯವರೆಗೂ ಮುಂದುವರಿಸುವ ಮೂಲಕ ಕೊಂಕಣ ರೈಲ್ವೆಗೆ ಸಂಪರ್ಕ ಕಲ್ಪಿಸುವ ಉದ್ದೇಶ ಹೊಂದಲಾಗಿದೆ. ಈಗಾಗಲೇ ಕೇಂದ್ರದ ರೈಲ್ವೆ ಇಲಾಖೆ ಸರ್ವೇ ಮುಗಿಸಿದೆ. ಅನುದಾನ ಸಹ ಬಿಡುಗಡೆಯಾಗಿದೆ. ಶೀಘ್ರದಲ್ಲಿಯೇ ಟೆಂಡರ್ ಪ್ರಕ್ರಿಯೆ ನಡೆಯಲಿದೆ. ಇನ್ನೂ 25 ಸಾವಿರ ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮಾಡಲಾಗಿದೆ ಎಂದು ಸಂಸದರು ತಿಳಿಸಿದರು. ಮುಂದಿನ ಜನವರಿಯಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಗಳು ಸಮೀಪಿಸಲಿವೆ. ಎಂಪಿ ಚುನಾವಣೆ ನಡೆಯುವುದು ಆ ಕಾರಣದಿಂದ. ನಮ್ಮ ಕಾರ್ಯಕರ್ತರು ಚುನಾವಣೆಗೆ ಸನ್ನದ್ಧರಾಗಬೇಕು. ಪಕ್ಷದ ಗೆಲುವಿಗೆ ಶ್ರಮಿಸಬೇಕು ಎಂದು ತಿಳಿಸಿದರು. ಬಾಳೂರು ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ಗಣಪತಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ.ಮೇಘರಾಜ್, ತಾಲೂಕು ಅಧ್ಯಕ್ಷ ಗಣಪತಿ ಬೆಳಗೋಡು, ಪಕ್ಷದ ಮುಖಂಡರಾದ ಬಿ.ಯುವರಾಜ್‍ಗೌಡ ಚಿಕ್ಕಮಣತಿ, ಎನ್.ಆರ್. ದೇವಾನಂದ, ಎ.ವಿ.ಮಲ್ಲಿಕಾರ್ಜುನ, ಆರ್.ಟಿ.ಗೋಪಾಲ, ಜಿ.ಪಂ. ಮಾಜಿ ಸದಸ್ಯ ಸುರೇಶ್ ಸ್ವಾಮಿರಾವ್, ಎ.ಟಿ.ನಾಗರತ್ನ, ತಾ.ಪಂ. ಮಾಜಿ ಸದಸ್ಯೆ ಸರಸ್ವತಿ ಗಣಪತಿ, ಕೆಂಚನಾಲ ಬೂತ್ ಸಮಿತಿ ಅಧ್ಯಕ್ಷ ಪರಮೇಶ್, ಹಾಲಪ್ಪ ಚಿಕ್ಕಮಣತಿ, ದೇವೇಂದ್ರಪ್ಪಗೌಡ ನೆವಟೂರು, ಕಗ್ಗಲಿ ಲಿಂಗಪ್ಪ, ಗಿರೀಶ್ ಜಂಬಳ್ಳಿ, ಗ್ರಾಪಂ ಮಾಜಿ ಅಧ್ಯಕ್ಷೆ ಮಂಜುಳ ಕೇತಾರ್ಜಿ ರಾವ್, ಲೀಲಾ ಉಮಾಶಂಕರ ಹಾಜರಿದ್ದರು. - - - -31ಆರ್.ಪಿ.ಟಿ.2ಪಿ: ಬಾಳೂರು, ಕೆಂಚನಾಲ ಬೂತ್‌ಗಳ ಬಿಜೆಪಿ ಕಾರ್ಯಕರ್ತರ ಭೇಟಿ ಕಾರ್ಯಕ್ರಮದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿದರು.