)
ಮಂಗಳೂರು: ಕೇಂದ್ರ ಸರ್ಕಾರ 70 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗಾಗಿ ಜಾರಿಗೆ ತಂದಿರುವ ಅತ್ಯಂತ ಮಹತ್ವಾಕಾಂಕ್ಷೆಯ ‘ಆಯುಷ್ಮಾನ್ ವಯೋ ವಂದನಾ’ ಆರೋಗ್ಯ ವಿಮಾ ಯೋಜನೆಯನ್ನು ರಾಜ್ಯದಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸಿಲ್ಲ. ಹಿರಿಯ ಜೀವಗಳನ್ನು ಅಲೆದಾಡಿಸುತ್ತಿರುವ ರಾಜ್ಯ ಸರ್ಕಾರದ ನಡೆಯನ್ನು ಉಡುಪಿ-ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಮಂಗಳವಾರ ವಿಧಾನ ಪರಿಷತ್ತಿನ ಶೂನ್ಯ ವೇಳೆಯಲ್ಲಿ ದಿನಪತ್ರಿಕೆಯ ವರದಿಯನ್ನು ಉಲ್ಲೇಖಿಸಿ ಈ ಗಂಭೀರ ವಿಷಯವನ್ನು ಪ್ರಸ್ತಾಪಿಸಿದರು. ವಿತರಣೆಯಾಗಿರುವ ಲಕ್ಷಾಂತರ ಕಾರ್ಡ್‌ಗಳು ಯಾವುದೇ ಪ್ರಯೋಜನಕ್ಕೆ ಬಾರದಂತಾಗಿವೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.ಕೇಂದ್ರ ಸರ್ಕಾರ ಆಯುಷ್ಮಾನ್ ಭಾರತ್-ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯನ್ನು ವಿಸ್ತರಿಸಿ, 70 ವರ್ಷ ಮೇಲ್ಪಟ್ಟ ಎಲ್ಲರಿಗೂ 5.00 ಲಕ್ಷ ರು.ಗಳವರೆಗೆ ಉಚಿತ ಆರೋಗ್ಯ ವಿಮೆ ಒದಗಿಸುವ ‘ವಯೋ ವಂದನಾ’ ಯೋಜನೆಯನ್ನು ಜಾರಿಗೆ ತಂದಿದೆ.
ನಮ್ಮ ದೇಶದ ಸಂವಿಧಾನದ 21ನೇ ವಿಧಿಯು ಪ್ರತಿಯೊಬ್ಬ ನಾಗರಿಕನಿಗೂ ಗೌರವಯುತ ಜೀವನ ಹಾಗೂ ಆರೋಗ್ಯದ ಹಕ್ಕನ್ನು ನೀಡಿದೆ. ಅದರಲ್ಲೂ ಸಮಾಜದ ದುರ್ಬಲ ವರ್ಗಗಳಾದ ವಯೋವೃದ್ಧರ ಕಲ್ಯಾಣವನ್ನು ಕಾಪಾಡುವುದು ಹಾಗೂ ಅವರಿಗೆ ಸಾಮಾಜಿಕ ಭದ್ರತೆ ಒದಗಿಸುವುದು ಯಾವುದೇ ಸರ್ಕಾರದ ಮೂಲಭೂತ ಕರ್ತವ್ಯವಾಗಿದೆ. ಒಂದು ಸಮಾಜದ ಸಂಸ್ಕೃತಿಯನ್ನು ಆ ಸಮಾಜ ತನ್ನ ಹಿರಿಯರನ್ನು ನಡೆಸಿಕೊಳ್ಳುವ ರೀತಿಯಿಂದಲೇ ಅಳೆಯಲಾಗುತ್ತದೆ. ತಮ್ಮ ಸಂಧ್ಯಾಕಾಲದಲ್ಲಿರುವ ಹಿರಿಯ ನಾಗರಿಕರು ಗೌರವಯುತ ಹಾಗೂ ಭದ್ರತೆಯ ಜೀವನ ನಡೆಸಲು, ಚಿಕಿತ್ಸೆ ಪಡೆಯಲು ಈ ಯೋಜನೆ ಅತ್ಯಂತ ಸಹಕಾರಿಯಾಗಿದೆ. ಆದ್ದರಿಂದ ರಾಜ್ಯ ಸರ್ಕಾರ ಇನ್ನು ಮುಂದಾದರೂ ಕಾಲಹರಣ ಮಾಡದೆ ಆಯುಷ್ಮಾನ್ ವಯೋ ವಂದನಾ ಯೋಜನೆಯನ್ನು ಕೂಡಲೇ ಅನುಷ್ಠಾನಗೊಳಿಸಬೇಕು ಎಂದು ಅವರು ಸದನದಲ್ಲಿ ಒತ್ತಾಯಿಸಿದರು.