ಶಾಲಾ ಮಕ್ಕಳ ಶೂ, ಸಾಕ್ಸ್‌ ಖರೀದಿಗೆ ಏಳು ವರ್ಷ ಹಿಂದಿನ ದರ ನಿಗದಿಪಡಿಸಿದ ಸರ್ಕಾರ!

KannadaprabhaNewsNetwork |  
Published : Jun 03, 2024, 01:17 AM ISTUpdated : Jun 03, 2024, 08:00 AM IST
ಶೂ ಸಾಕ್ಸ್‌ | Kannada Prabha

ಸಾರಾಂಶ

ರಾಜ್ಯ ಸರ್ಕಾರ ಶಾಲಾ ಕಾಲೇಜುಗಳಲ್ಲಿ ಶೂ ಸಾಕ್ಸ್‌ ಖರೀದಿಗೆ ಏಳು ವರ್ಷದ ಹಿಂದಿನ ದರಗಳನ್ನು ನಿಗದಿಪಡಿಸಿದೆ

 ಬೆಂಗಳೂರು :  ಸರ್ಕಾರಿ ಶಾಲಾ ಮಕ್ಕಳ ಉಚಿತ ಶೂ ಮತ್ತು ಸಾಕ್ಸ್‌ ಯೋಜನೆಗೆ ಏಳು ವರ್ಷಗಳ ಹಿಂದಿನ ದರವನ್ನೇ ಈ ಬಾರಿಯೂ ಮುಂದುವರೆಸಿದ ಪರಿಣಾಮ ಸರ್ಕಾರದ ಷರತ್ತಿನಂತೆ ರಾಷ್ಟ್ರಮಟ್ಟದ ಕಂಪನಿಗಳಿಂದ ಗುಣಮಟ್ಟದ ಶೂ, ಸಾಕ್ಸ್‌ ಖರೀದಿಸಲು ಜವಾಬ್ದಾರಿ ಹೊತ್ತಿರುವ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳು (ಎಸ್‌ಡಿಎಂಸಿ) ದಾನಿಗಳ ಬಳಿ ಕೈಯೊಡ್ಡುವ ಅನಿವಾರ್ಯ ಪರಿಸ್ಥಿತಿಗೆ ಸಿಲುಕಿವೆ.

ಸರ್ಕಾರ ನಿಗದಿಪಡಿಸಿರುವ ಹಳೆಯ ದರದಲ್ಲಿ ಇಲಾಖೆ ಸೂಚಿಸಿರುವಂತೆ ಉತ್ತಮ ಗುಣಮಟ್ಟದ ಶೂ, ಸಾಕ್ಸ್‌ ಖರೀದಿಸಲು ಸಾಧ್ಯವಿಲ್ಲ. ಜೊತೆಗೆ ಖರೀದಿಸಲು ವಿಧಿಸಿರುವ ಷರತ್ತು ಪಾಲಿಸುವುದು ಕಷ್ಟ. ಮುಕ್ತ ಮಾರುಕಟ್ಟೆಯಲ್ಲೇ ಒಂದು ಜೊತೆ ಗುಣಮಟ್ಟದ ಶೂ ಬೆಲೆ 450-500 ರು. ಇದೆ. ಜೊತೆಗೆ ಇಂಧನ ಬೆಲೆ ಏರಿಕೆಯಿಂದ ಸರಕು ಸಾಗಣೆ ದರ ಪ್ರತಿ ವರ್ಷ ಏರುತ್ತಿರುತ್ತದೆ.

ಹೀಗಿರುವಾಗ ಸರ್ಕಾರ ದರ ಪರಿಷ್ಕರಿಸದೇ ಈ ಹಿಂದೆ ಇದ್ದಂತೆ 1ರಿಂದ 5ನೇ ತರಗತಿ ಮಕ್ಕಳಿಗೆ ಒಂದು ಜೊತೆ ಶೂ, ಎರಡು ಜೊತೆ ಸಾಕ್ಸ್‌ ಖರೀದಿಗೆ 265 ರು., 6-8ನೇ ತರಗತಿಗೆ ತಲಾ 295 ರು., 9-10ನೇ ತರಗತಿ ಮಕ್ಕಳಿಗೆ ತಲಾ 325 ರು. ನಿಗದಿ ಮಾಡಿದೆ. ಈ ದರದಲ್ಲಿ ರಾಷ್ಟ್ರಮಟ್ಟದ ಕಂಪನಿಗಳಿಂದ ಗುಣಮಟ್ಟದ ಶೂಗಳನ್ನು ಹೇಗೆ ಖರೀದಿಸಲು ಸಾಧ್ಯ ಎನ್ನುವುದು ಬಹುತೇಕ ಶಾಲೆಗಳ ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರುಗಳು ಹಾಗೂ ಶಾಲಾ ಶಿಕ್ಷಕರುಗಳ ವಲಯದ ಪ್ರಶ್ನೆಯಾಗಿದೆ.ಸರ್ಕಾರ ತನ್ನ ಆದೇಶದಲ್ಲಿ ದಾನಿಗಳು, ಸಂಘ ಸಂಸ್ಥೆಗಳು ನೆರವು ನೀಡಿದರೆ ಅದನ್ನ ಬಳಸಿಕೊಂಡು ಇನ್ನಷ್ಟು ಗುಣಮಟ್ಟದ ಶೂ, ಸಾಕ್ಸ್‌ ಖರೀದಿಸಲು ಸೂಚಿಸಿದೆ. ಆದರೆ, ಎಲ್ಲ ಶಾಲೆಗಳಿಗೂ ದಾನಿಗಳು ಎಲ್ಲಿ ಸಿಗುತ್ತಾರೆ? ಅದರಲ್ಲೂ ಕಡಿಮೆ ಮಕ್ಕಳಿರುವ ಶಾಲೆಗಾದರೆ ಹೇಗಾದರೂ ಮಾಡಬಹುದು. ಹೆಚ್ಚು ಮಕ್ಕಳಿರುವ ಶಾಲೆಗಳಿಗೆ ದೊಡ್ಡ ಮೊತ್ತದ ದೇಣಿಗೆ ಬೇಕಾಗುತ್ತದೆ. ಸರ್ಕಾರ ಶಾಲೆ ಆರಂಭವಾದ ಬಳಿಕ ಹಣ ಬಿಡುಗಡೆ ಮಾಡಿದೆ. ಈಗ ಪ್ರಕ್ರಿಯೆ ಶುರು ಮಾಡಿದರೂ ಖರೀದಿ ಮಾಡಲು ತಿಂಗಳುಗಳೇ ಬೇಕಾಗುತ್ತದೆ. ದಾನಿಗಳಿಗಾಗಿ ಕಾಯುತ್ತಾ ಕೂತರೆ ಶೂ, ಸಾಕ್ಸ್‌ ಖರೀದಿ ಇನ್ನಷ್ಟು ತಡವಾಗುತ್ತದೆ ಎಂದು ರಾಜ್ಯ ಸರ್ಕಾರಿ ಶಾಲೆಗಳಲ್ಲಿನ ಎಸ್‌ಡಿಎಂಸಿ ಪ್ರತಿನಿಧಿಗಳು, ಶಿಕ್ಷಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಹಳೆಯ ದರ ಮುಂದುವರಿಕೆ:ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಮೊದಲ ಸರ್ಕಾರದ ಅವಧಿಯಲ್ಲಿ 2015-16ನೇ ಸಾಲಿನ ಬಜೆಟ್‌ನಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಶೂ, ಸಾಕ್ಸ್‌ ಭಾಗ್ಯ ಘೋಷಿಸಲಾಗಿತ್ತು. ಆ ವರ್ಷ 5ನೇ ತರಗತಿವರೆಗಿನ ಮಕ್ಕಳಿಗೆ ತಲಾ 225 ರು., 6-8ನೇ ತರಗತಿ ಮಕ್ಕಳಿಗೆ ತಲಾ 250 ರು. ಮತ್ತು 9-10ನೇ ತರಗತಿ ಮಕ್ಕಳಿಗೆ ತಲಾ 275 ರು. ದರ ನಿಗದಿ ಮಾಡಲಾಗಿತ್ತು. ಖರೀದಿ ಪ್ರಕ್ರಿಯೆ ಮುಗಿಯುವುದರೊಳಗೆ ಶೈಕ್ಷಣಿಕ ವರ್ಷವೇ ಮುಗಿದಿದ್ದರಿಂದ ಅವುಗಳನ್ನು 2016-17ನೇ ಸಾಲಿಗೆ ನೀಡಲಾಯಿತು. 2017-18ನೇ ಸಾಲಿನಲ್ಲಿ ಶೂ ಸಾಕ್ಸ್‌ ಖರೀದಿ ದರ ಪರಿಷ್ಕರಿದ್ದು ಬಿಟ್ಟರೆ ಇದುವರೆಗೂ ಹಳೆಯ ದರವನ್ನೇ ಮುಂದುವರೆಸಿದೆ. 2024-25ನೇ ಸಾಲಿನಲ್ಲಿ 1-10ನೇ ತರಗತಿಯ 42.65 ಲಕ್ಷ ಮಕ್ಕಳಿಗೆ 121 ಕೋಟಿ ರು. ಅನುದಾನ ಬಿಡುಗಡೆ ಮಾಡಿದೆ.

ಅಧಿಕಾರಿಗಳು ಏನಂತಾರೆ?

ಪ್ರತಿ ಶಾಲೆಯಲ್ಲೂ ಎಲ್ಲ ಮಕ್ಕಳಿಗೂ ಒಂದೇ ಕಂಪನಿಯ ಶೂ, ಸಾಕ್ಸ್‌ಗಳನ್ನು ಸಗಟು ದರದಲ್ಲಿ ಖರೀದಿಸುವುದರಿಂದ ದರ ಕಡಿಮೆಯಾಗುತ್ತದೆ. ವಿವಿಧ ತರಗತಿ ಮಕ್ಕಳಿಗೆ ಅವರ ಪಾದದ ಅಳತೆಗೆ ತಕ್ಕಂತೆ ಬೇರೆ ಬೇರೆ ಶ್ರೇಣಿಯ ಶೂ, ಸಾಕ್ಸ್‌ ಖರೀದಿಸುವುದರಿಂದ ಸರ್ಕಾರ ನಿಗದಿಪಡಿಸಿರುವ ದರದಲ್ಲಿ ಗುಣಮಟ್ಟದ ಶೂ, ಸಾಕ್ಸ್‌ ಖರೀದಿ ಸಾಧ್ಯವಿದೆ. ಹಾಗಾಗಿ ದರ ಪರಿಷ್ಕರಣೆ ಅಗತ್ಯವಿಲ್ಲ ಎಂದು ಸರ್ಕಾರ ನಿರ್ಧರಿಸಿದೆ ಎಂಬುದು ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳ ಹೇಳಿಕೆ.

ಶೂ, 2 ಜೊತೆ ಸಾಕ್ಸ್‌ ಖರೀದಿಗೆ ಸರ್ಕಾರದ ದರತರಗತಿದರ1-5265 ರು.6 - 8295 ರು.9 - 10325 ರು.ಲಿಂಗರಾಜು ಕೋರಾ

PREV

Recommended Stories

ಬೆಂಗಳೂರಲ್ಲಿ ಭರ್ಜರಿ ಮಳೆಗೆ ವಾಹನ ಸವಾರರ ಪರದಾಟ
ಬೆಂಗಳೂರು : ನಗರದ ಕೆಲವು ಸ್ಥಳಗಳಲ್ಲಿ ಸೆ.20 ರಂದು ವಿದ್ಯುತ್ ಕಡಿತ