ವನ್ಯಜೀವಿ ಮಂಡಳಿ ಕೇಳಿದ ಮಾಹಿತಿ ರಾಜ್ಯ ಸರ್ಕಾರ ನೀಡ್ತಿಲ್ಲ: ಜೋಶಿ

KannadaprabhaNewsNetwork |  
Published : Feb 27, 2024, 01:36 AM IST
ಜೋಶಿ | Kannada Prabha

ಸಾರಾಂಶ

ಕಳಸಾ-ಬಂಡೂರಿಗೆ ಪರಿಸರ ಇಲಾಖೆಯಿಂದ ವಿನಾಯಿತಿ ಸಿಕ್ಕಿದೆ. ವನ್ಯಜೀವಿ ಮಂಡಳಿಗೆ ರಾಜ್ಯ ಸರ್ಕಾರ ಕೆಲವೊಂದಿಷ್ಟು ಮಾಹಿತಿ ನೀಡಬೇಕಿದೆ. ಆ ಕೆಲಸ ಅದು ಮಾಡುತ್ತಿಲ್ಲ ಎಂದು ಕೇಂದ್ರ ಸಚಿವ ಜೋಶಿ ಹೇಳಿದರು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಕಳಸಾ-ಬಂಡೂರಿ ಯೋಜನೆ ಜಾರಿಗೆ ಕೇಂದ್ರ ಸರ್ಕಾರ ಬದ್ಧವಾಗಿದೆ. ಪರಿಸರ ಇಲಾಖೆಯಿಂದ ವಿನಾಯಿತಿ ಸಿಕ್ಕಿದೆ. ಆದರೆ ವನ್ಯಜೀವಿ ಮಂಡಳಿ ಅನುಮತಿ ಕೊಡುವುದು ಮಾತ್ರ ಬಾಕಿಯುಳಿದಿದೆ. ಈ ಸಂಬಂಧಪಟ್ಟಂತೆ ರಾಜ್ಯ ಸರ್ಕಾರದಿಂದ ಕೆಲವೊಂದಿಷ್ಟು ಮಾಹಿತಿ ಕೇಳಿದೆ. ಅದನ್ನು ರಾಜ್ಯ ಸರ್ಕಾರ ಇನ್ನೂ ಕೊಟ್ಟಿಲ್ಲ. ಹೀಗಾಗಿ ಸಮಸ್ಯೆಯಾಗಿದೆ ಅಷ್ಟೇ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಅಣ್ಣಿಗೇರಿಯಲ್ಲಿ ರೈಲ್ವೆ ಇಲಾಖೆಯಿಂದ ನಡೆದ ಕಾರ್ಯಕ್ರಮದಲ್ಲಿ ಹಾಗೂ ತದನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

ಪರಿಸರ ಇಲಾಖೆಯಿಂದ ವಿನಾಯಿತಿ ಸಿಕ್ಕಿದೆ. ಈ ವಿಷಯ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಗೊತ್ತಿಲ್ಲವೇನೋ ಎಂದು ಪ್ರಶ್ನಿಸಿದ ಅವರು, ವನ್ಯಜೀವಿ ಮಂಡಳಿಗೆ ರಾಜ್ಯ ಸರ್ಕಾರ ಕೆಲವೊಂದಿಷ್ಟು ಮಾಹಿತಿ ನೀಡಬೇಕಿದೆ. ಆ ಕೆಲಸ ಅದು ಮಾಡುತ್ತಿಲ್ಲ. ಅಗತ್ಯ ಮಾಹಿತಿ ನೀಡಿದರೆ ಸಚಿವ ಭೂಪೇಂದ್ರ ಯಾಧವ ಅವರೊಂದಿಗೆ ಮಾತನಾಡಿ ಅನುಮತಿ ಕೊಡಿಸುತ್ತೇನೆ. ಕಳಸಾ- ಬಂಡೂರಿ, ಮಹದಾಯಿಗೆ ಅತಿ ಹೆಚ್ಚು ಅಡ್ಡಗಾಲು ಹಾಕಿದ್ದೇ ಕಾಂಗ್ರೆಸ್‌. ಕಾಂಗ್ರೆಸ್‌ ವರಿಷ್ಠೆ ಸೋನಿಯಾಗಾಂಧಿ ಗೋವಾಕ್ಕೆ ಹೋಗಿ ಕರ್ನಾಟಕಕ್ಕೆ ಹನಿ ನೀರು ಕೊಡಬೇಡಿ ಎಂದಿದ್ದರು. ಈ ಯೋಜನೆ ಜಾರಿಯಾಗಬೇಕೆಂದರೆ ಅದು ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಇದ್ದಾಗಲೇ. ಅವರಿಂದ ಮಾತ್ರ ಈ ಯೋಜನೆ ಜಾರಿಯಾಗಲು ಸಾಧ್ಯ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ರೀತಿ ನಾನು ಬೇಜವಾಬ್ದಾರಿಯಿಂದ ಮಾತನಾಡುವುದಿಲ್ಲ. ನ್ಯಾಯಾಧಿಕರಣ ಜಾರಿಗೆ ತಂದಿದ್ದು ಕಾಂಗ್ರೆಸ್‌ನವರು. ನ್ಯಾಯಮೂರ್ತಿ ಅವರನ್ನು, ಸಿಬ್ಬಂದಿಯನ್ನು ನೇಮಕ ಮಾಡಿದ್ದು ಬಿಜೆಪಿ. ಯೋಜನೆಗೆ ಸಂಬಂಧಪಟ್ಟಂತೆ ನೋಟಿಫಿಕೇಶನ್‌ ಹೊರಡಿಸಿದ್ದು ಬಿಜೆಪಿ. ಡಿಪಿಆರ್‌ಗೆ ಒಪ್ಪಿಗೆ ನೀಡಿದ್ದು ನಮ್ಮ ಸರ್ಕಾರ ಎಂದು ಜೋಶಿ ಸಮರ್ಥಿಸಿಕೊಂಡರು.

ಮಾನ ಮರ್ಯಾದೆ ಇಲ್ಲ:

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾನ‌ ಮರ್ಯಾದೆ ಇಲ್ಲ. ಹಾಗಂತ ಬೇರೆಯವರಿಗೂ ಇಲ್ಲ ಎಂದು ಅವರು ಭಾವಿಸಿದ್ದಾರೆ ಎಂದು ಹರಿಹಾಯ್ದ ಜೋಶಿ, ನವಲಗುಂದ ಕಾಂಗ್ರೆಸ್ ಕಾರ್ಯಕ್ರಮದ ಭಾಷಣದಲ್ಲಿ ತಮ್ಮ ವಿರುದ್ಧ ಏಕ ವಚನದಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡರು.

ಸಿದ್ದರಾಮಯ್ಯ ಅವರಷ್ಟು ನೀಚತನಕ್ಕೆ ನಾವು ಇಳಿಯುವುದಿಲ್ಲ. ನೀವು ಹೇಗೆ ಪ್ರಮಾಣವಚನ ಸ್ವೀಕರಿಸಿದ್ದಿರರೋ ಹಾಗೆಯೇ ನಾನು ಕೂಡ ಪ್ರಮಾಣವಚನ ಸ್ವೀಕಾರ ಮಾಡಿರುವೆ. ಆಡಳಿತ, ಅಧಿಕಾರ ನಿಮಗೆ ಜಾಸ್ತಿ ಇರಬಹುದು. ಆದರೆ, ಸಂವಿಧಾನದಲ್ಲಿ ಕೇಂದ್ರ ಸರ್ಕಾರದ ಒಬ್ಬ ಮಂತ್ರಿ ಹಾಗೂ ರಾಜ್ಯದ ಮುಖ್ಯಮಂತ್ರಿ ಸಮಾನರು. ನಾನು ಮಾನ ಮರ್ಯಾದೆ ಬಿಟ್ಟು ವರ್ತನೆ ಮಾಡುವುದಿಲ್ಲ ಎಂದು ಕಿಡಿಕಾರಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ