ಸೋಮವಾರಪೇಟೆ: ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ, ಜನರಿಗೆ ಗ್ಯಾರಂಟಿ ಯೋಜನೆಗಳನ್ನು ನೀಡಲಾಗುತ್ತಿದೆ. ಜನರಿಗೆ ಉದ್ಯೋಗ, ಆರ್ಥಿಕ ಸಬಲತೆ ನೀಡುವಲ್ಲಿ ಕಾಂಗ್ರೆಸ್‌ನ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಮೈಸೂರು ಸಂಸದ ಯದುವೀರ್ ಚಾಮರಾಜ ಒಡೆಯರ್ ಹೇಳಿದರು.
ರಾಜ್ಯ ಸರ್ಕಾರ ಪುರುಷರಿಂದ ಹೆಚ್ಚಿನ ಬೆಲೆ ಪಡೆದು ಮಹಿಳೆಯರಿಗೆ ಉಚಿತ ಬಸ್ ಸೇವೆ ನೀಡಲಾಗುತ್ತಿದೆ. ಜನರಿಗೆ ನೀಡುವ 10 ಕೆ.ಜಿ ಉಚಿತ ಅಕ್ಕಿಯಲಿ ಕೇಂದ್ರ ಸರ್ಕಾರ ನೀಡುವ 5 ಕೆ.ಜಿ ಅಕ್ಕಿ ಸೇರಿಸಿ, ರಾಜ್ಯ ಸರ್ಕಾರ ತಮ್ಮ ಫೋಟೋ ಹಾಕಿ ನೀಡುತ್ತಿದೆ. 16ನೇ ಹಣಕಾಸು ಯೋಜನೆಯಲ್ಲಿ ಕೇಂದ್ರ ಸರ್ಕಾರ 7000 ಕೋಟಿ ರು. ಹಣ ನೀಡಿದೆ. ಹೀಗಿದ್ದರೂ ಕೇಂದ್ರದಿಂದ ಹಣ ಬರುತ್ತಿಲ್ಲ ಎಂದು ವೃಥಾ ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದು ಹೇಳಿದರು.
ಮಾಜಿ ಸಚಿವ ಅಪ್ಪಚ್ಚು ರಂಜನ್ ಮಾತನಾಡಿ, ರಾಜ್ಯ ಸರ್ಕಾರ ಯಾವುದೇ ಅಭಿವೃದ್ಧಿ ಮಾಡದೆ, ಲೂಟಿ ಹೊಡೆಯುವ ಸರ್ಕಾರವಾಗಿದೆ. ನಮ್ಮ ಭಾಗದ ರೈತರು ಮತ್ತು ಬೆಳೆಗಾರರ ದಶಕಗಳ ಬೇಡಿಕೆಯಾದ ಸಿ ಮತ್ತು ಡಿ ವರ್ಗದ ಭೂಮಿಗಳಿಗೆ ಸಂಬಂಧಿಸಿದ ಅರಣ್ಯ ಇಲಾಖೆಯ ಸೆಕ್ಷನ್-4 ಅಧಿಸೂಚನೆಯನ್ನು ರದ್ದುಗೊಳಿಸಿ, ಕಂದಾಯ ಇಲಾಖೆಗೆ ಹಸ್ತಾಂತರಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ಇದರಿಂದ ತಲತಲಾಂತರದಿಂದ ಕೃಷಿ ಮಾಡಿಕೊಂಡು ಬರುತ್ತಿರುವ ರೈತರಿಗೆ ಭೂಮಿಯ ಹಕ್ಕು ಸಿಗದೆ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.ಪ್ರಕೃತಿ ವಿಕೋಪ ಮತ್ತು ಬರಗಾಲದಿಂದ ಬೆಳೆ ಕಳೆದುಕೊಂಡ ರೈತರಿಗೆ ಸಮಯಕ್ಕೆ ಸರಿಯಾಗಿ ಮತ್ತು ಸಕಾಲದಲ್ಲಿ ಪರಿಹಾರ ವಿತರಣೆಯಲ್ಲಿ ಸರ್ಕಾರ ವಿಫಲವಾಗಿದ್ದು, ಬೆಳೆಗಾರರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸುತ್ತಿಲ್ಲ. ಬಿಪಿಎಲ್ ಕಾರ್ಡ್ ಪರಿಶೀಲನೆಯ ನೆಪದಲ್ಲಿ ಯಾವುದೇ ಪೂರ್ವ ಸೂಚನೆ ಇಲ್ಲದೇ ಕಾರ್ಡ್ಗಳನ್ನು ರದ್ದು ಗೊಳಿಸಲಾಗಿದೆ. ಇದರಿಂದ ಬಡವರಿಗೆ ಉಚಿತ ಪಡಿತರ ಹಾಗೂ ಆರೋಗ್ಯ ಸೇವೆಗಳು ಕೈತಪ್ಪುವ ಆತಂಕ ಎದುರಾಗಿದೆ. ಆದ್ದರಿಂದ, ರಾಜ್ಯದ ಸಾಂವಿಧಾನಿಕ ಮುಖ್ಯಸ್ಥರಾದ ರಾಜ್ಯಪಾಲರು ಈ ಕೂಡಲೇ ಮಧ್ಯಪ್ರವೇಶಿಸಿ, ಸಿ ಮತ್ತು ಡಿ ಭೂಮಿಯ ಸೆಕ್ಷನ್-4 ಅಧಿಸೂಚನೆಯನ್ನು ರದ್ದುಗೊಳಿಸಲು ಹಾಗೂ ಮೇಲೆ ತಿಳಿಸಿದ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿ ರೈತರು ಮತ್ತು ಜನಸಾಮಾನ್ಯರ ಹಿತಾಸಕ್ತಿ ಕಾಪಾಡಲು ರಾಜ್ಯ ಸರ್ಕಾರಕ್ಕೆ ಕಟ್ಟುನಿಟ್ಟಿನ ನಿರ್ದೇಶನ ನೀಡಬೇಕೆಂದು ಸೋಮವಾರಪೇಟೆ ಮಂಡಲ ಬಿಜೆಪಿ ವತಿಯಿಂದ ತಹಸೀಲ್ದಾರ್ ಕೃಷ್ಣಮೂರ್ತಿ ಅವರ ಮೂಲಕ ಮನವಿ ಸಲ್ಲಿಸಿದರು. ಶಾಂತಳ್ಳಿ ಕುಮಾರಲಿಂಗೇಶ್ವರ ದೇವಾಲಯದಿಂದ ಆರಂಭಗೊಂಡ ಜಾಥಾಕ್ಕೆ ಮಾಜಿ ಸಚಿವ ಅಪ್ಪಚ್ಚುರಂಜನ್ ಚಾಲನೆ ನೀಡಿದರು. ಅಲ್ಲಿಂದ ಸೋಮವಾರಪೇಟೆವರೆಗೆ 10 ಕಿ.ಮೀ. ಜಾಥಾವನ್ನು ಕಾಲ್ನಡಿಗೆಯಲ್ಲಿ ಸಂಸದರೊಂದಿಗೆ ಎಲ್ಲಾ ನಾಯಕರು ಹೆಜ್ಜೆ ಹಾಕಿದರು.ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ ಮಾತನಾಡಿ, ರಾಜ್ಯ ಸರ್ಕಾರದಲ್ಲಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದರಿಂದ ಖಜಾನೆ ಬರಿದಾಗಿದೆ. ಹೀಗಿದ್ದರೂ ಅಭಿವೃದ್ಧಿಪಥದತ್ತ ರಾಜ್ಯ ಎಂದು ಜನತೆಗೆ ಮೋಸ ಮಾಡುತ್ತಿರುವ ರಾಜ್ಯ ಸರ್ಕಾರದ ನೀತಿಯನ್ನು ಖಂಡಿಸಿದರು.