ಕನ್ನಡಪ್ರಭ ವಾರ್ತೆ ದಾವಣಗೆರೆ
ಭದ್ರಾ ಜಲಾಶಯದಿಂದ ನಾಲೆಗೆ ನೀರು ಹರಿಸಿ ಐದಾರು ದಿನವಾದರೂ ತಾಲೂಕಿನ ಕುಕ್ಕವಾಡದ ಬಳಿ ದಾವಣಗೆರೆ ಶಾಖಾ ನಾಲೆ 2ನೇ ವಲಯಕ್ಕೆ ಒಂದು ಹನಿ ನೀರು ಬಂದಿಲ್ಲವೆಂದು ಖಾಲಿ ನಾಲೆಗೆ ಇಳಿದು ಪ್ರತಿಭಟಿಸಿದ್ದ ರೈತರು ಗುರುವಾರ ದಾವಣಗೆರೆ-ಚನ್ನಗಿರಿ ರಾಜ್ಯ ಹೆದ್ದಾರಿಗೆ ಟ್ರ್ಯಾಕ್ಟರ್, ದ್ವಿಚಕ್ರ ವಾಹನಗಳ ಅಡ್ಡ ಬಿಟ್ಟು, ಹೆದ್ದಾರಿಯಲ್ಲೇ ಧರಣಿ ನಡೆಸಿ ವಾಹನ ಸಂಚಾರ ತಡೆದ ಘಟನೆ ಕಾರಿಗನೂರು ಕ್ರಾಸ್ ಬಳಿ ವರದಿಯಾಗಿದೆ. ಜಿಲ್ಲೆಯ ಕಾರಿಗನೂರು ಕ್ರಾಸ್ ಬಳಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ತೇಜಸ್ವಿ ವಿ.ಪಟೇಲ್, ರೈತ ಒಕ್ಕೂಟದ ಮುಖಂಡ ಬಿ.ಎಂ.ಸತೀಶ ಕೊಳೇನಹಳ್ಳಿ ಇತರರ ನೇತೃತ್ವದಲ್ಲಿ ಸುಮಾರು ಒಂದು ಗಂಟೆ ಕಾಲ ದಾವಣಗೆರೆ-ಚನ್ನಗಿರಿ ಮಾರ್ಗದ ವಾಹನ ಸಂಚಾರ ಸ್ತಬ್ಧವಾಗಿತ್ತು. ವಿಷಯ ತಿಳಿದ ತಹಸೀಲ್ದಾರ್ ಡಾ.ಅಶ್ವತ್ಥ್ ಸ್ಥಳಕ್ಕೆ ಧಾವಿಸಿ, ಹೆದ್ದಾರಿ ತಡೆ ಹಿಂಪಡೆಯುವಂತೆ ಮನವಿ ಮಾಡಿದರಲ್ಲದೇ, ಸ್ಥಳದಿಂದಲೇ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿ, ನಾಲೆಯಲ್ಲಿ ನೀರಿನ ಗೇಜ್ ಹೆಚ್ಚಿಸುವಂತೆ ಮನವಿ ಮಾಡಿದರು. ಅಲ್ಲದೇ, ಸದ್ಯಕ್ಕೆ ಹೋರಾಟ ಕೈಬಿಡಲು ಮನವಿ ಮಾಡಿದರು. ರೈತರು ಜಿಲ್ಲಾಧಿಕಾರಿ ಸ್ಥಳಕ್ಕೆ ಧಾವಿಸುವವರೆಗೂ ಧರಣಿ ನಡೆಸುವುದಾಗಿ ಪಟ್ಟು ಹಿಡಿದು ಕುಳಿತರು.ಈ ವೇಳೆ ಮಾತನಾಡಿದ ತೇಜಸ್ವಿ ವಿ.ಪಟೇಲ್, ಭದ್ರಾ ಜಲಾಶಯದಿಂದ ನೀರು ಹರಿಸಿ ಐದಾರು ದಿನವಾದರೂ ದಾವಣಗೆರೆ ಶಾಖಾ ನಾಲೆ 2ನೇ ವಲಯಕ್ಕೆ ಹನಿ ನೀರು ಬಂದಿಲ್ಲ. ಅಣೆಕಟ್ಟೆಯಿಂದ ಕಳೆದ ಬಾರಿ ಬಿಟ್ಟಿದ್ದ ನೀರೇ ಇನ್ನೂ ತಲುಪಿರಲಿಲ್ಲ. ಈಗ ಐದಾರು ದಿನಗಳ ಹಿಂದೆ ಮತ್ತೆ ನೀರು ಬಿಟ್ಟರು ನಮ್ಮ ಭಾಗಕ್ಕೆ ನೀರು ಬಂದಿಲ್ಲವೆಂದರೆ ಏನರ್ಥ? ನೀರಾವರಿ ಇಲಾಖೆ ಅಸಮರ್ಥವಾಗಿದೆಯೋ ಅಥವಾ ಜಿಲ್ಲಾಡಳಿತಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲವೋ? ಈ ಕ್ಷಣದವರೆಗೂ ಶಾಖಾ ನಾಲೆ 2ನೇ ವಲಯಕ್ಕೆ ನೀರು ಬಂದಿಲ್ಲ. ನೀರಾವರಿ ಇಲಾಖೆ ನಿರ್ಲಕ್ಷ್ಯಕ್ಕೆ ಅಚ್ಚುಕಟ್ಟು ರೈತರ ಜೀವನವೇ ಹಾಳಾಗುತ್ತಿದೆ. ನಾಲೆಗೆ ನೀರು ಬರದಿದ್ದರೆ ಅಚ್ಚುಕಟ್ಟು ರೈತರು ಏನು ಮಾಡಬೇಕು? ಹೀಗಾದರೆ ಅಚ್ಚುಕಟ್ಟು ಕೊನೆಯ ಭಾಗಕ್ಕೆ ನೀರು ತಲುಪುವುದಾದರೂ ಹೇಗೆ? ದಿನದಿನಕ್ಕೂ ಬೆಳೆಗಳು ಒಣಗುತ್ತಿರುವುದು ರೈತರನ್ನು ಮತ್ತಷ್ಟು ಆತಂಕಕ್ಕೆ ನೂಕುತ್ತಿದೆ ಎಂದು ಆಕ್ರೋಶ ಹೊರ ಹಾಕಿದರು. ರೈತ ಮುಖಂಡ ಬಿ.ಎಂ.ಸತೀಶ ಕೊಳೇನಹಳ್ಳಿ ಮಾತನಾಡಿ, ನೀರಿನ ಸಮಸ್ಯೆಯೆಂಬುದು ಇದ್ದಕ್ಕಿದ್ದಂತೆ ಸೃಷ್ಟಿಯಾಗುವಂತಹದ್ದಲ್ಲ. ಭದ್ರಾ ಅಣೆಕಟ್ಟೆಯ ನೀರು ಸಂಗ್ರಹ ಅವಲಂಬಿಸಿ, ಲೆಕ್ಕಾಚಾರ ಮಾಡಿಯೇ ಮಳೆಗಾಲ, ಬೇಸಿಗೆ ಕಾಲದ ನೀರಾವರಿ ವೇಳಾಪಟ್ಟಿನಿಗದಿಪಡಿಸಬೇಕಾಗುತ್ತದೆ. ಕಾಡಾ ಸಭೆಯಲ್ಲಿ ನೀರಾವರಿ ಇಂಜಿನಿಯರ್ ಗಳು ಮೌನವಹಿಸಿದ್ದರಿಂದಲೇ ಇಂದು ಅಚ್ಚುಕಟ್ಟು ರೈತರು ಸಂಕಷ್ಟ ಎದುರಿಸುವಂತಾಗಿದೆ. ನೀರಿಗಾಗಿ ಟ್ರ್ಯಾಕ್ಟರ್ ಸಮೇತ ಈಗ ಪ್ರತಿಭಟನೆ ನಡೆಸಿದ್ದೇವೆ. ಫೆ.23ರಂದು ಡಿಸಿ ಧರಣಿ ಸ್ಥಳಕ್ಕೆ ಬಂದು, ಸಮಸ್ಯೆ ಪರಿಹರಿಸಿ, ನಾಲೆಗೆ ಸಮರ್ಪಕ ನೀರು ಬರುವಂತೆ ಮಾಡದಿದ್ದರೆ, ನಮ್ಮ ಹೋರಾಟ ಯಾವ ಹಂತಕ್ಕಾದರೂ ತಲುಪುತ್ತದೆ ಎಂದು ಎಚ್ಚರಿಸಿದರು. ಸಂಘದ ಉಪಾಧ್ಯಕ್ಷ ಕೆ.ಎನ್.ಮಂಜುನಾಥ, ಷಣ್ಮುಖ ಸ್ವಾಮಿ, ವಕೀಲರಾದ ಮತ್ತಿ ಹನುಮಂತಪ್ಪ, ದಿಳ್ಯಪ್ಪ ಮುದಹದಡಿ, ಡಿ.ಮಲ್ಲೇಶಪ್ಪ, ಮಹೇಶ್ವರಪ್ಪ, ಗೋಪಾಲ, ಕಲ್ಲೇಶಪ್ಪ, ಅರವಿಂದ, ದಿನೇಶ, ನಿರಂಜನಮೂರ್ತಿ, ಸಿರಿಗೆರೆ ಪ್ರಭು, ಕಿರಣ, ಹರೀಶ, ಜಿ.ಸಿ.ಮಂಜುನಾಥ, ಗಂಗಾಧರ ಇತರರಿದ್ದರು.