ಬಿ.ಎಸ್. ಸುನೀಲ್
ಕೆಶಿಪ್‌ನ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಪ್ರತಿವರ್ಷ ಮಳೆಗಾಲದಲ್ಲಿ ಪಟ್ಟಣದ ಮದ್ದೂರು- ಮಳವಳ್ಳಿ ರಾಜ್ಯ ಹೆದ್ದಾರಿ ನೀರಿನಿಂದ ಜಲಾವೃತಗೊಂಡು ವಾಹನ ಸವಾರರು, ಸಾರ್ವಜನಿಕರು, ವಿದ್ಯಾರ್ಥಿಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಹೆದ್ದಾರಿ ಪಕ್ಕದ ವ್ಯಾಪಾರಸ್ಥರಿಗೆ ಸಮಸ್ಯೆ ಎದುರಾಗಿದೆ.
ತುಮಕೂರು ಜಿಲ್ಲೆಯ ಪಾವಗಡ, ಮಧುಗಿರಿ, ಕೊರಟಗೆರೆ, ಕುಣಿಗಲ್ ಮಾರ್ಗವಾಗಿ ಮದ್ದೂರು- ಕೆ.ಎಂ.ದೊಡ್ಡಿ - ಮಳವಳ್ಳಿ ಸೇರಿದಂತೆ 7 ತಾಲೂಕುಗಳ ವ್ಯಾಪ್ತಿ ರಾಜ್ಯ ಹೆದ್ದಾರಿ ಕಾಮಗಾರಿಯನ್ನು ಗುಜರಾತ್ ಮೂಲದ ಮೈಸೂರು ಬೆಳ್ಳಳ್ಳಿ ಹೈವೆ ಪ್ರೈವೈಟ್ ಲಿಮಿಟೆಡ್ (ಸದ್ಬವ್) ನಿರ್ವಹಿಸಿದೆ.ಆದರೆ, ಕೆಶಿಪ್ ಕಂಪನಿ ಸುಮಾರು 193.34 ಕಿ ಮೀ ಉದ್ದದ 478.58 ಕೋಟಿ ರು.ವೆಚ್ಚದ ರಸ್ತೆ ನಿರ್ಮಾಣ ಕಾಮಗಾರಿ ಮಾಡಿ ರಸ್ತೆ ಇಕ್ಕೆಲಗಳಲ್ಲಿ ಚರಂಡಿ ನಿರ್ಮಿಸಿತ್ತು. ಭಾರತೀನಗರದಲ್ಲಿ ಚರಂಡಿಯನ್ನು ಅವೈಜ್ಞಾನಿಕವಾಗಿ ನಿರ್ಮಿಸಿದ ಪರಿಣಾಮ ಮಳೆಗಾಲದಲ್ಲಿ ನೀರು ಸರಾಗವಾಗಿ ಚರಂಡಿಗೆ ಹರಿಯದೆ ರಸ್ತೆಯಲ್ಲೆ ಕೆರೆಯಂತೆ ನೀರು ನಿಂತು ಸಾಕಷ್ಟು ಅನಾನುಕೂಲಗಳು ಎದುರಾಗಿದೆ.
ಪ್ರತಿ ಬಾರಿಯೂ ಮಳೆಗಾಲದಲ್ಲಿ ರಸ್ತೆಯಲ್ಲಿ ನೀರು ಜಲಾವೃತಗೊಂಡು ಅಂಗಡಿ -ಮುಂಗಟ್ಟುಗಳಿಗೆ ನುಗ್ಗಿ ವ್ಯಾಪರಸ್ಥರಿಗೆ ನಷ್ಟ ಉಂಟಾಗುತ್ತಿದ್ದರೂ ಸಹ ಭಾರತೀನಗರ ಗ್ರಾಮ ಪಂಚಾಯ್ತಿ ಆಡಳಿತ ಮಂಡಳಿ ಈ ಬಗ್ಗೆ ಗಮನ ಹರಿಸದಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.
ಮಳೆಗಾಲದಲ್ಲಂತೂ ಪಟ್ಟಣದ ಭಾರತೀ ಕಾಲೇಜು ಕಾಂಪ್ಲೆಕ್ಸ್ ಎದುರು ನೀರು ನಿಂತು ರಸ್ತೆ ಸಂಪೂರ್ಣ ಜಲಾವೃತ ಗೊಳ್ಳುತ್ತದೆ. ಫುಟ್‌ಪಾತ್‌ನಲ್ಲಿ ನಿಲ್ಲಿಸಿದ್ದ ಗಾಡಿಗಳು ಸಹ ನೀರಿನಲ್ಲಿ ಮುಳುಗುವಂತಾಗಿದೆ. ರಸ್ತೆಯಲ್ಲಿ ಹೆಚ್ಚು ನೀರು ನಿಲ್ಲುವುದರಿಂದ ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟಾಗುವ ಜೊತೆಗೆ ಅಪಘಾತಗಳು ಸಂಭವಿಸಿರುವ ಹಲವು ನಿದರ್ಶನಗಳುಂಟು.
- ಶೇಖರ್, ಮಾಲೀಕರು, ವಿ.ಬಿ. ಬೇಕರಿ, ಭಾರತೀನಗರಮದ್ದೂರು-ಮಳವಳ್ಳಿ ಮುಖ್ಯ ರಸ್ತೆಯ ಭಾರತೀ ಕಾಲೇಜು ಮುಂಭಾಗ ಕೆಶಿಪ್ ಅವೈಜ್ಞಾನಿಕವಾಗಿ ಚರಂಡಿ ನಿರ್ಮಿಸಿದ ಪರಿಣಾಮ ಮಳೆಗಾಲದಲ್ಲಿ ನೀರು ರಸ್ತೆಯಲ್ಲಿ ನಿಲ್ಲುವಂತಾಗಿದೆ. ಸಂಬಂಧಪಟ್ಟ ಇಲಾಖೆಯವರು ಇದಕ್ಕೆ ಮುಕ್ತಿ ದೊರಕಬೇಕು.