ಆರೋಗ್ಯಯುತ ಸಮಾಜ ನಿರ್ಮಾಣದಲ್ಲಿ ವೈದ್ಯರ ಪಾತ್ರ ಮುಖ್ಯ-ಸಚಿವ ಎಚ್‌ಕೆ ಪಾಟೀಲ

KannadaprabhaNewsNetwork |  
Published : Jun 16, 2025, 02:27 AM ISTUpdated : Jun 16, 2025, 02:28 AM IST
ಪೋಟೋ ಇದೆ. | Kannada Prabha

ಸಾರಾಂಶ

ರೋಗಿಗಳನ್ನು ಉಳಿಸುವಾಗ ನಮ್ಮನ್ನು ನಾವು ರಕ್ಷಿಸಿಕೊಳ್ಳುವುದಕ್ಕೂ ಆದ್ಯತೆ ನೀಡಬೇಕು. ಆರೋಗ್ಯಯುತ ಸಮಾಜ ನಿರ್ಮಾಣದಲ್ಲಿ ವೈದ್ಯರ ಪಾತ್ರ ಮುಖ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಗದಗ:ರೋಗಿಗಳನ್ನು ಉಳಿಸುವಾಗ ನಮ್ಮನ್ನು ನಾವು ರಕ್ಷಿಸಿಕೊಳ್ಳುವುದಕ್ಕೂ ಆದ್ಯತೆ ನೀಡಬೇಕು. ಆರೋಗ್ಯಯುತ ಸಮಾಜ ನಿರ್ಮಾಣದಲ್ಲಿ ವೈದ್ಯರ ಪಾತ್ರ ಮುಖ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ನಗರದ ಜಿಲ್ಲಾಸ್ಪತ್ರೆಯಲ್ಲಿ ಐಎಂಎ ವತಿಯಿಂದ ಹಮ್ಮಿಕೊಂಡಿದ್ದ ಎರಡು ದಿನಗಳ ಮೆಡಿಕೋ ಲಿಗಲ್ ವಾರ್ಷಿಕ ರಾಜ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವೈದ್ಯೋ ನಾರಾಯಣೋ ಹರಿ ಎಂಬ ನುಡಿಯಂತೆ ವೈದ್ಯರು ನಾರಾಯಣನಿಗೆ ಸಮ. ಜನರ ಜೀವ ರಕ್ಷಣೆಯಲ್ಲಿ ಸದಾ ಮುಂದಿರುವ ವೈದ್ಯರು ತಮ್ಮ ಆರೋಗ್ಯ ರಕ್ಷಣೆಗೂ ಆದ್ಯತೆ ನೀಡಬೇಕು ಎಂದರು.

ಸಾಮಾಜಿಕ ಹೊಣೆಗಾರಿಕೆ ವೈದ್ಯರ ಕರ್ತವ್ಯದಲ್ಲೇ ಅಡಗಿರುತ್ತದೆ. ಕರ್ತವ್ಯದಲ್ಲಿ ವೈದ್ಯರು ಜೀವನ ಅಡವಿಟ್ಟು ಸೇವೆ ಮಾಡುತ್ತಾರೆ. ಪ್ರಕೃತಿ ವಿಕೋಪ, ಯುದ್ಧ ಸಂದರ್ಭದಲ್ಲಿ, ಆಂತರಿಕ ಸಂಘರ್ಷದ ಸಂದರ್ಭದಲ್ಲಿ ವೈದ್ಯರ ಸೇವೆ ಪ್ರಮುಖವಾಗಿರುತ್ತದೆ. ಅಂತಹ ಸಂದರ್ಭದಲ್ಲಿ ವೈದ್ಯರಿಗೆ ಕಾನೂನು ತೊಡಕು ಎದುರಾಗುತ್ತವೆ. ಕಾನೂನು ತೊಡಕುಗಳಿಂದ ಜೀವ ರಕ್ಷಣೆ ಮಾಡಿಕೊಂಡು ಸೇವೆಯಲ್ಲಿ ತೊಡಗಿಸುವುದು ಹೇಗೆ ಎಂಬುದನ್ನು ಈ ಸಮ್ಮೇಳನದಿಂದ ಕಲಿಯಬಹುದಾಗಿದೆ. ದೈನಂದಿನ ಕರ್ತವ್ಯದಲ್ಲಿ ಕಾನೂನು ಪಾಲನೆ ನಮ್ಮೆಲ್ಲರಿಗೂ ಅನಿವಾರ್ಯ. ಕಾನೂನು ಪಾಲನೆಯೊಂದಿಗೆ ಕರ್ತವ್ಯದಲ್ಲಿ ಗುಣಮಟ್ಟ ಕಾಯ್ದುಕೊಳ್ಳುವ ಮೂಲಕ ನೈತಿಕತೆ ಮತ್ತು ಪ್ರಾಮಾಣಿಕತೆಯಿಂದ ದೈನಂದಿನ ಕೆಲಸ ನಿರ್ವಹಿಸಬೇಕು ಎಂದರು.

ಸರ್ಕಾರ ನಿಗದಿಪಡಿಸಿದ ಮಾರ್ಗಸೂಚಿಗಳ ಅನ್ವಯ ಜನರ ಆರೋಗ್ಯ ಜೀವನಮಟ್ಟ ಸುಧಾರಣೆಗೆ ವೈದ್ಯರು ಸೇವೆ ನಿರ್ವಹಿಸಬೇಕು. ಸೇವೆಯಲ್ಲಿ ಪ್ರಾಮಾಣಿಕತೆ ಅಳವಡಿಸಿಕೊಳ್ಳಬೇಕು. ನಾಗರಿಕ ಸಮಾಜ ವೈದ್ಯರನ್ನು ಗಮನಿಸುತ್ತಿರುತ್ತದೆ. ಕಾನೂನು ವ್ಯಾಪ್ತಿಯಲ್ಲೇ ಕಾಯಕನಿಷ್ಠರಾಗಬೇಕು. ಹಿರಿಯ ವೈದ್ಯರ ಸೇವೆಯನ್ನು ಕಿರಿಯ ವೈದ್ಯರು ಅನುಕರಿಸಬೇಕು. ಸಾಮಾಜಿಕ ವ್ಯವಸ್ಥೆಯಲ್ಲಿ ವೈದ್ಯರು ಚಿಕಿತ್ಸೆ ವಿಳಂಬ ಮಾಡಬಾರದು. ರೋಗಿಗಳಿಗೆ ಆತ್ಮವಿಶ್ವಾಸ ಬರುವಂತೆ ನಿಮ್ಮ ಸಂಬಂಧ ಗಟ್ಟಿಗೊಳಿಸಬೇಕು. ಸಾಮಾಜಿಕ ನಂಬಿಕೆ ಗಳಿಸಿಕೊಳ್ಳಲು ಸಹಕಾರಿ ಆಗುತ್ತದೆ ಎಂದು ಹೇಳಿದರು.

ಐಎಂಎ ರಾಷ್ಟ್ರೀಯ ಉಪಾಧ್ಯಕ್ಷ ಡಾ. ಜಿ.ಬಿ. ಬಿಡನಾಳ ಮಾತನಾಡಿ, ವೈದ್ಯರು ದೈನಂದಿನ ಸೇವೆಯಲ್ಲಿ ಕಾನೂನು ತೊಡಕುಗಳ ಬಗ್ಗೆ ಅರಿವು ಹೊಂದುವ ಅನಿವಾರ್ಯತೆ ಇದೆ. ನಿರ್ಲಕ್ಷ್ಯ ವಹಿಸಿದರೆ ತೊಂದರೆಗೆ ಒಳಗಾಗುತ್ತೇವೆ ಎಂಬುದನ್ನು ಮರೆಯಬಾರದು ಎಂದರು.

ಡಾ. ವಿ.ಡಿ. ಚಿನಿವಾಲ ಮಾತನಾಡಿ, ಪ್ರಥಮ ಬಾರಿಗೆ ರಾಜ್ಯದಲ್ಲಿ ಮೆಡಿಕೊ ಸಮ್ಮೇಳನ ನಡೆಸಿದ ಕೀರ್ತಿ ಗದುಗಿಗೆ ಸಲ್ಲುತ್ತದೆ. ಜಿಲ್ಲೆಯು ಸಹಕಾರಿ ಕ್ಷೇತ್ರದ ಜತೆಗೆ ವಾಣಿಜ್ಯ ಕ್ಷೇತ್ರದಲ್ಲೂ ಅಭಿವೃದ್ಧಿ ಆಗುತ್ತಿದೆ. ಅದರ ಜತೆಗೆ ವೈದ್ಯಕೀಯ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದುತ್ತಿರುವುದು ಸಂತಸ ತಂದಿದೆ ಎಂದರು.

ಐಎಂಎ ರಾಷ್ಟ್ರೀಯ ಅಧ್ಯಕ್ಷ ದಿಲೀಪ ಬನ್ಸಾಲಿ, ಡಾ. ಯೋಗಾನಂದ ರೆಡ್ಡಿ, ಡಾ. ಬಸವರಾಜ ಬೊಮ್ಮನಹಳ್ಳಿ, ಡಾ. ವೀರಭದ್ರಪ್ಪ, ಡಾ. ವಿ.ಎ. ಮಾಲೂರು, ಡಾ. ರಾಜಶೇಖರ ಬಳ್ಳಾರಿ, ಡಾ. ಅನ್ನದಾನಿ ಮೇಟಿ, ಡಾ. ವೆಂಕಟಾ ಚಲಪತಿ, ಡಾ. ಹೊನ್ನೇಗೌಡ, ಡಾ. ತುಕಾರಾಂ ಸೂರಿ, ಡಾ. ಅರವಿಂದ, ಡಾ. ರಾಧಿಕಾ ಕುಲಕರ್ಣಿ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ