ಬ್ಯಾಡಗಿ: ಮುಖ್ಯರಸ್ತೆ ಅಗಲೀಕರಣ ವಿಚಾರದಲ್ಲಿ ಸೆಟ್‌ಬ್ಯಾಕ್ ಸ್ಥಳೀಯ ಸಮಸ್ಯೆ ಮುಖ್ಯರಸ್ತೆ ಅಗಲೀಕರಣ ಬಳಿಕ ಪಟ್ಟಣದ ಪರಿಮಿತಿಯಲ್ಲಿನ 4 ಕಿ.ಮೀ. ರಸ್ತೆಯನ್ನು ಪುರಸಭೆ ವ್ಯಾಪ್ತಿಗೊಳಪಡಿಸಲಿದ್ದು, ಈ ಕುರಿತು ಸರ್ಕಾರದಿಂದ ಆದೇಶ ಕೂಡ ಹೊರಬಿದ್ದಿದೆ. ಇಂತಹ ಸತ್ಯ ಸಂಗತಿ ಮುಚ್ಚಿಟ್ಟ ಅಗಲೀಕರಣ ವಿರೋಧಿಗಳು ಗೊಂದಲ ಮೂಡುವಂತೆ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದು, ಮುಖ್ಯರಸ್ತೆಯಲ್ಲಿನ ಯಾರಾದರೂ ಕಟ್ಟಡ ಕಟ್ಟುವವರು ನಮ್ಮ ಬಳಿ ಬಂದಲ್ಲಿ ಪುರಸಭೆ ನಿಯಮದಂತೆ ಕಟ್ಟಡ ನಿರ್ಮಿಸಿಕೊಡುವುದಾಗಿ ಶಾಸಕ ಬಸವರಾಜ ಶಿವಣ್ಣನವರ ಭರವಸೆ ನೀಡಿದರು.
ಪಟ್ಟಣದ ಪ್ರವಾಸಿಮಂದಿರದಲ್ಲಿ ಸುದ್ದಿಗೋಷ್ಠಿನ್ನುದ್ದೇಶಿಸಿ ಮಾತನಾಡಿದ ಅವರು, ನಗರದ ಪರಿಮಿತಿಯಲ್ಲಿ ಹಾಯ್ದು ಹೋಗುವ ರಾಜ್ಯ ಹೆದ್ದಾರಿಗಳನ್ನು ನಿರ್ವಹಣೆ ಸಲುವಾಗಿ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗೆ ಸೇರ್ಪಡೆ ಮಾಡುವ ಕುರಿತು ರಾಜ್ಯದ 30 ಜಿಲ್ಲೆಗಳಿಗೂ ಅನ್ವಯವಾಗುವಂತೆ ಒಟ್ಟು 1476 ಕಿ.ಮೀ. ಹೆದ್ದಾರಿಯನ್ನು ಸಂಬಂಧಿಸಿದ ನಗರಸಭೆ ಅಥವಾ ಪುರಸಭೆ ಬಿಟ್ಟುಕೊಡುವ ಕುರಿತು ಸರ್ಕಾರ ಸ್ಪಷ್ಟ ಆದೇಶ ಹೊರಡಿಸಿದ್ದು ಅದರನ್ವಯ ಗಜೇಂದ್ರಗಡ-ಸೊರಬ ಹೆದ್ದಾರಿ ಬ್ಯಾಡಗಿ ಪರಿಮಿತಿಯಲ್ಲಿ ಒಟ್ಟು 4 ಕಿ.ಮೀ. ಸೇರ್ಪಡೆಯಾಗಿದೆ ಎಂದರು.33 ಅಡಿ ರಸ್ತೆ ಮಾತ್ರ ನಿರ್ಮಾಣ: ಮುಖ್ಯರಸ್ತೆ ಅಗಲೀಕರಣ ವಿಚಾರದಲ್ಲಿ ಸರ್ಕಾರ ಸ್ಪಷ್ಟತೆ ಹೊಂದಿದೆ. ನೋಟಿಫಿಕೇಷನ್‌ನಲ್ಲಿ ತಿಳಿಸಿದಂತೆ ರಸ್ತೆ ಮಧ್ಯದಿಂದ 33 ಅಡಿಗಳಷ್ಟು ಜಾಗವನ್ನಷ್ಟೇ ಸ್ವಾಧೀನಪಡಿಸಿಕೊಂಡು ಅಭಿವೃದ್ಧಿಪಡಿಸಲಿದ್ದೇವೆ. ಯಾವುದೇ ಕಾರಣಕ್ಕೂ ಅದಕ್ಕಿಂತ ಹೆಚ್ಚಿನ ಜಾಗವನ್ನು ಪಡೆದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. ಈ ವಿಷಯ ಸುಳ್ಳು ಹಬ್ಬಿಸುತ್ತಿರುವವರಿಗೂ ತಿಳಿದ ವಿಷಯ, ಆದರೆ ಅಗಲೀಕರಣವಾಗಬಾರದು ಎನ್ನುವ ಒಂದೇ ಕಾರಣಕ್ಕೆ ಇಂತಹ ಸುಳ್ಳನ್ನು ಹಬ್ಬಿಸುತ್ತಿರುವುದು ಘನತೆಗೆ ತಕ್ಕುದಲ್ಲ ಎಂದರು.ಅಂತಿಮ ಘಟ್ಟ ತಲುಪಿದ್ದೇವೆ: ಮುಖ್ಯರಸ್ತೆ ಅಗಲೀಕರಣ ಮಾಡಬೇಕೆನ್ನುವ ಉದ್ದೇಶದ ಅಂತಿಮ ಘಟ್ಟವನ್ನು ತಲುಪಿದ್ದೇವೆ, ಆದರೆ ಮುಖ್ಯರಸ್ತೆ ಮಾಲೀಕರಲ್ಲಿನ ಕೆಲವರು ಈ ವಿಷಯವನ್ನು ತಮ್ಮ ಮನಸ್ಸಿಗೆ ಬಂದ ರೀತಿ ವ್ಯಾಖ್ಯಾ ನಿಸುತ್ತಾ ಅಗಲೀಕರಣ ವಿಳಂಬಗೊಳಿಸುವ ಹುನ್ನಾರ ನಡೆಸಿದ್ದಾರೆ, ಅಗಲೀಕರಣ ವಿಚಾರದಲ್ಲಿ ನಿಮ್ಮೊಂದಿಗಿದ್ದು ಕೊಟ್ಟಿರುವ ಮಾತನ್ನು ಉಳಿಸಿಕೊಳ್ಳುತ್ತೇನೆ ಎಂದರು.
ಕೊಟ್ಟ ಮಾತು ಉಳಿಸಿಕೊಳ್ಳಿ: ಮಾಜಿ ಶಾಸಕ ಸುರೇಶಗೌಡ ಪಾಟೀಲ ಮಾತನಾಡಿ, ಬ್ಯಾಡಗಿ ಬಂದ ಮಾಡಿ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಮುಖ್ಯರಸ್ತೆ ಮಾಲೀಕರು ಸಾರ್ವಜನಿಕವಾಗಿ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು, ನೀವು ಹೇಳಿದಂತೆ ಎಂದು ಒಪ್ಪಿಕೊಂಡು ಪ್ರತಿಭಟನೆ ಹಿಂಪಡೆದುಕೊಳ್ಳುವಂತೆ ಮಾಡಿದ್ದಲ್ಲದೇ ಮತ್ತೆ ಕೋರ್ಟ್‌ಗೆ ಹೋಗಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ವದಂತಿಯಿದೆ. ಅದರಿಂದ ಯಾವುದೇ ಪ್ರಯೋಜನವಿಲ್ಲ. ಈಗಲೂ ಕಾಲ ಮಿಂಚಿಲ್ಲ, ಸಮಸ್ಯೆಗಳ ಬಗ್ಗೆ ಕುಳಿತು ಚರ್ಚಿಸಿಕೊಂಡು ಪರಿಹಾರ ಕಂಡುಕೊಳ್ಳೋಣ. ಮುಖ್ಯರಸ್ತೆ ಅಗಲೀಕರಣದಿಂದ ಬ್ಯಾಡಗಿ ಪಟ್ಟಣದ ಮೆಣಸಿನಕಾಯಿ ವ್ಯಾಪಾರದ ಅಭಿವೃದ್ಧಿಗೆ ಸಾಕಷ್ಟು ಅನುಕೂಲವಾಗಲಿದೆ. ಕೋರ್ಟ್‌ಗೆ ಹೋಗದಂತೆ ಮನವಿ ಮಾಡಿಕೊಳ್ಳುತ್ತೇನೆ ಎಂದರು.ಮತ್ತೊಮ್ಮೆ ಪ್ರತಿಭಟನೆಗೆ ಸಜ್ಜು: ಪುರಸಭೆ ಸದಸ್ಯ ಬಸವರಾಜ ಛತ್ರದ ಮಾತನಾಡಿ, ಅಗಲೀಕರಣ ಹೋರಾಟ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳು ಕಳೆದ ಜೂ.10ರಂದು ನಡೆದ ಪ್ರತಿಭಟನೆ ಹಿಂದಕ್ಕೆ ಪಡೆಯುವ ವೇಳೆ ಮುಖ್ಯ ರಸ್ತೆಯಲ್ಲಿನ ಮಾಲೀಕರಿಂದ ಮುಚ್ಚಳಿಕೆ ಪತ್ರ ಬರೆಸಿಕೊಳ್ಳಬೇಕಾಗಿತ್ತು ಎಂಬ ವಾದ ಮಂಡಿಸುತ್ತಿದ್ದಾರೆ. ಆದರೆ ಮುಖ್ಯರಸ್ತೆ ಮಾಲೀಕರ ಮಾತಿನ ಮೇಲೆ ವಿಶ್ವಾಸವಿಟ್ಟು ಜಿಲ್ಲಾಧಿಕಾರಿಗಳು ಅಂದು ಯಾವುದೇ ಪತ್ರ ಬರೆಸಿಕೊಳ್ಳದೇ ಪ್ರತಿಭಟನೆ ಸ್ಥಗಿತಗೊಳಿಸಿದರು. ಹೀಗಿರುವಾಗ ವಿಶ್ವಾಸವಿಟ್ಟು ಅಗಲೀಕರಣಕ್ಕೆ ಕೈಜೋಡಿಸಿ ಅಭಿವೃದ್ಧಿ ವಿಚಾರಗಳಿಗೆ ಅಡ್ಡಿ ಬರದಂತೆ ಮನವಿ ಮಾಡಿದರು. ಈ ವೇಳೆ ಪುರಸಭೆ ಉಪಾಧ್ಯಕ್ಷ ಸುಭಾಸ್ ಮಾಳಗಿ, ರಾಮಣ್ಣ ಕೋಡಿಹಳ್ಳಿ, ತಾಲೂಕು ಕಾಂಗ್ರೆಸ್ ಅಧ್ಯಕ್ಷ ದಾನಪ್ಪ ಚೂರಿ, ರೈತ ಮುಖಂಡ ಗಂಗಣ್ಣ ಎಲಿ, ಬೀರಣ್ಣ ಬಣಕಾರ ಸೇರಿದಂತೆ ಇನ್ನಿತರರಿದ್ದರು.ಮುಖ್ಯರಸ್ತೆ ಸ್ಥಗಿತಗೊಳಿಸಿ ಹೋರಾಟ: ಮುಖ್ಯರಸ್ತೆಯಲ್ಲಿನ ಮಾಲೀಕರು ಹೊಂದಾಣಿಕೆ ಮಾಡಿಕೊಳ್ಳುವ ಮೂಲಕ ಅಗಲೀಕರಣಕ್ಕೆ ತೊಂದರೆ ಕೊಡದಂತೆ ಮನವಿ ಮಾಡಿಕೊಳ್ಳುತ್ತೇವೆ, ಒಂದು ವೇಳೆ ತಮ್ಮ ಹಠಮಾರಿ ಧೋರಣೆ ಮುಂದುವರಿಸಿದ್ದೇ ಆದಲ್ಲಿ ಮತ್ತೊಮ್ಮೆ ಮುಖ್ಯರಸ್ತೆ ಸ್ಥಗಿತಗೊಳಿಸಿ ಹೋರಾಟ ಅನಿವಾರ್ಯ ಎಂದು ಪುರಸಭೆ ಅಧ್ಯಕ್ಷ ಬಾಲಚಂದ್ರ ಪಾಟೀಲ ಹೇಳಿದರು.