ಕೇರಳ ಬಾಂಬ್‌ ಸ್ಫೋಟ ಬೆನ್ನಲ್ಲೇ ರಾಜ್ಯದ ಗಡಿಯಲ್ಲಿ ಕಟ್ಟೆಚ್ಚರ: ಗೃಹ ಸಚಿವ

KannadaprabhaNewsNetwork | Published : Oct 30, 2023 12:31 AM

ಸಾರಾಂಶ

ಕೇರಳ ಬಾಂಬ್ಬ್‌ ಸ್ಫೋಟ ಬೆನ್ನಲ್ಲೇ ರಾಜ್ಯದ ಗಡಿಗಳಲ್ಲಿ ಹೈ ಅಲರ್ಟ್ರ್ಟ್‌- ಡಾ. ಪರಮೇಶ್ವರ್ರ್‌
ಕನ್ನಡಪ್ರಭ ವಾರ್ತೆ ಮಂಗಳೂರು ಕೇರಳದಲ್ಲಿ ಬಾಂಬ್‌ ಸ್ಫೋಟದ ಬೆನ್ನಲ್ಲೇ ರಾಜ್ಯದ ಎಲ್ಲ ಗಡಿ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ತಿಳಿಸಿದ್ದಾರೆ. ಬಜ್ಪೆ ಮತ್ತು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆ ನೂತನ ಕಟ್ಟಡ ಉದ್ಘಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇರಳದಲ್ಲಿ ಬಾಂಬ್‌ ಸ್ಫೋಟವನ್ನು ಯಾರು ಮಾಡಿದ್ದು ಎನ್ನುವುದು ತಕ್ಷಣಕ್ಕೆ ಗೊತ್ತಾಗಿಲ್ಲ. ಆದರೆ ಮುನ್ನೆಚ್ಚರಿಕೆ ಕ್ರಮವಾಗಿ ಗಡಿ ಭಾಗಗಳಲ್ಲಿ ಕಟ್ಟೆಚ್ಚರ ವಹಿಸಲು ಪೊಲೀಸ್ ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು. ಮಂಗಳೂರು, ಮೈಸೂರು ಮತ್ತು ಮಡಿಕೇರಿ ದಸರಾ ಸಂದರ್ಭ ಪೊಲೀಸ್ ಗುಪ್ತಚರ ಮಾಹಿತಿ ಮೇರೆಗೆ ಯಾವುದೇ ಅನಾಹುತ ಸಂಭವಿಸದಂತೆ ಸೂಕ್ತ ಕ್ರಮ ಕೈಗೊಳ್ಳಲಾಗಿತ್ತು. ಪೊಲೀಸರು ಹೆಚ್ಚಿನ ಗಮನ ಹರಿಸಿದ್ದರು. ಯಾವುದೇ ಸಂದರ್ಭವನ್ನು ಎದುರಿಸಲು ಪೊಲೀಸ್‌ ವ್ಯವಸ್ಥೆಯನ್ನು ಇನ್ನಷ್ಟು ಸಂವೇದನಾಶೀಲಗೊಳಿಸಲಾಗುವುದು ಎಂದು ಹೇಳಿದರು. ಡ್ರಗ್ಸ್‌ ವಿರುದ್ಧ ಕ್ರಮ ನಿರಂತರ- ರಾಜ್ಯದಲ್ಲಿ ಡ್ರಗ್ಸ್‌ ವಿರುದ್ಧ ಕ್ರಮ ಮುಂದುವರಿದಿದೆ. ಈ ನಿಟ್ಟಿನಲ್ಲಿ ನ.1ರಂದು ಮಂಗಳೂರಿನಲ್ಲಿ ಮ್ಯಾರಥಾನ್‌ ಆಯೋಜಿಸಲಾಗಿದೆ. ಇದರಲ್ಲಿ 5 ಸಾವಿರದಷ್ಟು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಮಂಗಳೂರಿನಲ್ಲಿ ಕಳೆದ ಮೂರು ತಿಂಗಳಿನಿಂದೀಚೆಗೆ 72 ಪ್ರಕರಣಗಳಲ್ಲಿ 113 ಮಂದಿಯನ್ನು ಬಂಧಿಸಲಾಗಿದೆ. ಇವರಲ್ಲಿ 19 ಮಂದಿ ಪ್ರಮುಖ ಡ್ರಗ್ಸ್‌ ಪೆಡ್ಲರ್‌ಗಳಾಗಿದ್ದರೆ, 94 ಮಂದಿ ಡ್ರಗ್ಸ್‌ ಸೇವಿಸಿದವರಾಗಿದ್ದಾರೆ. ಸುಮಾರು 90 ಲಕ್ಷ ರು. ಮೌಲ್ಯದ ಮಾದಕ ವಸ್ತುಗಳನ್ನು ಈ ಅವಧಿಯಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ಡಾ.ಜಿ. ಪರಮೇಶ್ವರ್‌ ಮಾಹಿತಿ ನೀಡಿದರು.

Share this article