ಬೆಳ್ಳಂದೂರಿನಲ್ಲಿ ನೂರು ಬೆಡ್ ಆಸ್ಪತ್ರೆ ಕಟ್ಟಡಕ್ಕೆ ಶಂಕುಸ್ಥಾಪನೆ
ಕನ್ನಡಪ್ರಭ ವಾರ್ತೆ, ಶೃಂಗೇರಿರಾಜ್ಯ ಸರ್ಕಾರ ನುಡಿದಂತೆ ನಡೆಯುತ್ತಿದೆ. ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದು ಜನಸಾಮಾನ್ಯರಿಗೆ ತಲುಪುವಂತೆ ಮಾಡಲಾಗಿದೆ. ಉತ್ತಮ ಜನಪರ ಯೋಜನೆಗಳೊಂದಿಗೆ ರಾಜ್ಯ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಶೃಂಗೇರಿ ಬೆಳ್ಳಂದೂರಿನಲ್ಲಿ ನೂರು ಬೆಡ್ ಆಸ್ಪತ್ರೆ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಸುಮಾರು ಅಂದಾಜು ₹37 ಕೋಟಿ ವೆಚ್ಚದ ಅನುದಾನದಲ್ಲಿ ನಿರ್ಮಾಣವಾಗಲಿರುವ ಈ ಕಟ್ಟಡದ ಕಾಮಗಾರಿ ಶೀಘ್ರ ನಡೆಯುವಂತೆ ಅಗತ್ಯಕ್ರಮ ಕೈಗೊಳ್ಳಲಾಗುತ್ತದೆ. ಶೃಂಗೇರಿ ತಾಲೂಕಿನ ಜನರ ಬಹುದಿನದ ಕನಸು ಇದಾಗಿದೆ ಎಂದರು.ಈಗ ಮಳೆಗಾನ ಇಲ್ಲದಿರುವುದರಿಂದ ಮುಂದಿನ 6 ತಿಂಗಳಲ್ಲಿ ಬೇಸಿಗೆಯಿರುವುದರಿಂದ ತ್ವರಿತಗತಿಯಲ್ಲಿ ಕಾಮಗಾರಿ ನಡೆಸುವಂತೆ ಈಗಾಗಲೇ ಗುತ್ತಿಗೆದಾರರ ಗಮನಕ್ಕೆ ತರಲಾಗಿದೆ. ಸಾಧ್ಯವಾದಷ್ಠು ಬೇಗ ಆಸ್ಪತ್ರೆ ಉಪಯೋಗ ಜನರಿಗೆ ಸಿಗುವಂತಾಗಬೇಕು. ಜಿಲ್ಲೆಗೆ ಈಗಾಗಲೇ ಸಾಕಷ್ಟು ಅನುದಾನ ನೀಡಲಾಗುತ್ತಿದೆ. ಮುಂದಿನ ಆಯವ್ಯಯದಲ್ಲಿ ಇನ್ನಷ್ಟು ಅನುದಾನ ನೀಡುವ ಬಗ್ಗೆ ಚರ್ಚಿಸುತ್ತೇನೆ ಎಂದರು.
ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ ಕ್ಷೇತ್ರದಲ್ಲಿ ರಸ್ತೆಯಲ್ಲ ಹೊಂಡಗುಂಡಿಗಳಿಂದ ಕೂಡಿದ್ದು ಜನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಜನರಿಗೆ ಉತ್ತರಿಸುವುದು ಕಷ್ಟವಾಗಿದೆ. ರಸ್ತೆ ಅಭಿವೃದ್ಧಿಗೆ ಸರ್ಕಾರದಿಂದ ಅಗತ್ಯ ಅನುದಾನ ಬಿಡುಗಡೆ ಮಾಡಬೇಕು. ಒತ್ತವರಿಗೆ ಸಮಸ್ಯೆಗೆ ಶೀಘ್ರ ಪರಿಹಾರ ಕಂಡುಕೊಳ್ಳಬೇಕಿದೆ. ಪ್ರವಾಹ ಪೀಡಿತ ಗಾಂಧಿ ಮೈದಾನ ತುಂಗಾನದಿ ಪ್ರವಾಹ ನುಗ್ಗದಂತೆ ಎತ್ತರದ ತಡೆಗೋಡೆ ನಿರ್ಮಾಣವಾಗಲಿದೆ. ಕ್ಷೇತ್ರದಲ್ಲಿ ಅಭಿವೃದ್ಧಿಯಾಗುತ್ತಿದೆ ಎಂದರು.ಈ ಸಂದರ್ಭದಲ್ಲಿ ರಾಜ್ಯ ಇಂಧನ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್, ಜಿಲ್ಲಾಧಿಕಾರಿ ಮೀನಾ ನಾಗರಾಜ್, ಕಾಂಗ್ರೆಸ್ ಮುಖಂಡ ಕೆ.ಎಂ.ರಮೇಶ್ ಭಟ್, ಆರೋಗ್ಯ , ಕಂದಾಯ , ಮೆಸ್ಕಾಂ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
7 ಶ್ರೀ ಚಿತ್ರ 1-ಶೃಂಗೇರಿ ನೂತನ ನೂರುಬೆಡ್ ಆಸ್ಪತ್ರೆ ಕಟ್ಟಡಕ್ಕೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಶಂಕುಸ್ಥಾಪನೆ ನೆರವೇರಿಸಿದರು.ಇಂಧನ ಸಚಿವ ಕೆ,ಜಿ.ಜಾರ್ಜ್,ಶಾಸಕ ರಾಜೇಗೌಡ ಮತ್ತಿತರರು ಉಪಸ್ಥಿತರಿದ್ದರು.