ಕಬ್ಬು ಬೆಳೆಗಾರರ ಸಮಸ್ಯೆಗೆ ರಾಜ್ಯವೇ ಹೊಣೆ: ಜೋಶಿ

KannadaprabhaNewsNetwork |  
Published : Nov 14, 2025, 02:00 AM IST
ಪ್ರಲ್ಹಾದ ಜೋಶಿ | Kannada Prabha

ಸಾರಾಂಶ

ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆಗಳು ವಾಸ್ತವದಲ್ಲಿ ಎದುರಿಸುತ್ತಿರುವ ಸಮಸ್ಯೆಗಳಿಗೆ ರಾಜ್ಯ ಸರ್ಕಾರವೇ ಕಾರಣ. ಈ ಸಮಸ್ಯೆಗಳ ಹೊಣೆಯನ್ನು ರಾಜ್ಯ ಸರ್ಕಾರವೇ ಹೊರಬೇಕು ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ದೂರಿದ್ದಾರೆ.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆಗಳು ವಾಸ್ತವದಲ್ಲಿ ಎದುರಿಸುತ್ತಿರುವ ಸಮಸ್ಯೆಗಳಿಗೆ ರಾಜ್ಯ ಸರ್ಕಾರವೇ ಕಾರಣ. ಈ ಸಮಸ್ಯೆಗಳ ಹೊಣೆಯನ್ನು ರಾಜ್ಯ ಸರ್ಕಾರವೇ ಹೊರಬೇಕು ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ದೂರಿದ್ದಾರೆ.

ರಾಜ್ಯದ ಕಬ್ಬು ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳ ಕುರಿತಂತೆ ಜೋಶಿಯವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಹಿರಂಗ ಪತ್ರ ಬರೆದು, ರಾಜ್ಯ ಸರ್ಕಾರದ ಲೋಪಗಳ ಬಗ್ಗೆ ಗಮನ ಸೆಳೆದಿದ್ದಾರೆ. ಕೇಂದ್ರದ ಸುಧಾರಣಾ ಕ್ರಮಗಳನ್ನು ರಾಜ್ಯ ಸರಕಾರ ಮರೆಮಾಚುತ್ತಿದೆ ಎಂದು ಆರೋಪಿಸಿದ್ದಾರೆ.

2025ರ ಏಪ್ರಿಲ್‌ನಲ್ಲಿ ಮಹಾರಾಷ್ಟ್ರ ವಿದ್ಯುತ್ ಖರೀದಿಗೆ ಹೊಸ ಒಪ್ಪಂದವನ್ನು (ಪಿಪಿಎ) ಜಾರಿಗೆ ತಂದಿದೆ. ಪಿಪಿಎ, ಉತ್ಪಾದನಾ ಘಟಕಗಳು ಮತ್ತು ಸಕ್ಕರೆ ಕಾರ್ಖಾನೆಗಳಿಗೆ ಭರವಸೆಯ ಆದಾಯ ಕಲ್ಪಿಸುತ್ತದೆ. ಬ್ಯಾಂಕ್‌ಗಳಿಂದ ಹಣಕಾಸು ನೆರವು ಪಡೆಯಲು ಅನುವು ಮಾಡಿಕೊಡುತ್ತದೆ. ಆದರೆ, ಮಹಾರಾಷ್ಟ್ರದಂತೆ ಕರ್ನಾಟಕದಲ್ಲಿ ಹೊಸ ವಿದ್ಯುತ್ ಖರೀದಿ ಒಪ್ಪಂದ ಜಾರಿಯಾಗಿಲ್ಲ. ಇನ್ನೂ 2017-18ರ ಪಿಪಿಎಯಲ್ಲೇ ಇದೆ. ಇದು ಸಕ್ಕರೆ ಕಾರ್ಖಾನೆಗಳನ್ನು ಸ್ಥಿರ ಆದಾಯದಿಂದ ವಂಚಿತಗೊಳಿಸಿದೆ ಎಂದಿದ್ದಾರೆ.

ರಾಜ್ಯ ಸರ್ಕಾರ ವಿದ್ಯುತ್ ದರವನ್ನು 2023ರ ಏಪ್ರಿಲ್‌ನಲ್ಲಿ ಪ್ರತಿ ಯೂನಿಟ್‌ಗೆ 70 ಪೈಸೆ, 2025ರ ಏಪ್ರಿಲ್‌ನಲ್ಲಿ ಪ್ರತಿ ಯೂನಿಟ್‌ಗೆ 36 ಪೈಸೆ, ಹೀಗೆ ಎರಡು ಬಾರಿ ಹೆಚ್ಚಿಸಿತು. ಇದು ಸಕ್ಕರೆ ಕಾರ್ಖಾನೆಗಳು ಮಾತ್ರವಲ್ಲ, ಕಬ್ಬು ಬೆಳೆಗಾರರ ಆದಾಯವನ್ನು ಮತ್ತಷ್ಟು ಕುಗ್ಗಿಸಿದೆ ಎಂದಿದ್ದಾರೆ.

ಕೇಂದ್ರದ ಎಫ್‌ಆರ್‌ಪಿ ಒಂದು ಕನಿಷ್ಠ ಮಾನದಂಡವಾಗಿದೆ. ಆಯಾ ರಾಜ್ಯಗಳು ಬೆಳೆಗಾರರ ಹಿತ ರಕ್ಷಣೆಗಾಗಿ ಹೆಚ್ಚಿನ ರಾಜ್ಯ ಸಲಹಾ ಬೆಲೆ (ಎಸ್‌ಎಪಿ) ಘೋಷಿಸಲು ಮುಕ್ತವಾಗಿವೆ. ಆದರೆ, ಕರ್ನಾಟಕ ಸರ್ಕಾರ ಮಾತ್ರ ಈವರೆಗೂ ಎಸ್‌ಎಪಿಯನ್ನು ಘೋಷಿಸಿಯೇ ಇಲ್ಲ ಎಂದು ಆರೋಪಿಸಿದ್ದಾರೆ.

ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ. ಕೇಂದ್ರವು ಬೆಲೆ ಸ್ಥಿರತೆ ಮತ್ತು ಮಾರುಕಟ್ಟೆ ವೈವಿಧ್ಯತೆ ಎರಡನ್ನೂ ಉತ್ತಮವಾಗಿಸಿದೆ. ಆದರೆ, ಪಾವತಿ ಜಾರಿ, ನೀರಾವರಿ ಮತ್ತು ಸಬ್ಸಿಡಿ ವಿತರಣೆಯಂತಹ ಸ್ಥಳೀಯ ಅನುಷ್ಠಾನದ ಹೊಣೆ ರಾಜ್ಯ ಸರಕಾರದ ಮೇಲಿದೆ. ಇವುಗಳನ್ನು ಅನುಷ್ಠಾನಗೊಳಿಸಿ. ಇತರ ರಾಜ್ಯಗಳಂತೆ ರೈತರಿಗೆ ನೆರವು ನೀಡಿ, ಕೇಂದ್ರದತ್ತ ಬೆರಳು ತೋರುವುದನ್ನು ಬಿಡಿ ಎಂದು ಸಿಎಂಗೆ ಅವರು ಸಲಹೆ ನೀಡಿದ್ದಾರೆ.‎‎ಕೇಂದ್ರದ ಸುಧಾರಣಾ ಕ್ರಮ:ಕೇಂದ್ರ ಸರ್ಕಾರ ‎2025-26ರ ಕೃಷಿ ಸಾಲಿಗೆ ಒಂದು ಕ್ವಿಂಟಲ್‌ ಕಬ್ಬಿಗೆ ₹355 ನ್ಯಾಯಯುತ ಮತ್ತು ಲಾಭದಾಯಕ ಬೆಲೆ (ಎಫ್‌ಆರ್‌ಪಿ)ಯನ್ನು ಶೇ.10.25ರ ಇಳುವರಿ ದರದಲ್ಲಿ ಘೋಷಿಸಿದೆ. ಕೃಷಿ ವೆಚ್ಚ ಮತ್ತು ಬೆಲೆಗಳ ಆಯೋಗದ ಶಿಫಾರಸ್ಸಿನ ಮೇಲೆ ಈ ಬೆಲೆ ನಿಗದಿಪಡಿಸಿದ್ದು, ಇದು ಉತ್ಪಾದನಾ ವೆಚ್ಚದ ಮೇಲೆ ಶೇ.105ಕ್ಕಿಂತ ಹೆಚ್ಚಿನ ಅಂತರ ಒದಗಿಸುತ್ತದೆ ಎಂದಿದ್ದಾರೆ.

ಇನ್ನು, ಎಥೆನಾಲ್ ಮಿಶ್ರಣ ಕ್ರಮ ಸಕ್ಕರೆ ಕಾರ್ಖಾನೆಗಳಿಗೆ ಪರ್ಯಾಯ ಮತ್ತು ಸ್ಥಿರ ಆದಾಯದ ಮೂಲವನ್ನು ಕಲ್ಪಿಸಿದೆ. ರೈತರಿಗೆ ಕಬ್ಬಿನ ಮಾರಾಟದ ಬೆಲೆಯನ್ನೂ ಸುಧಾರಿಸಿದೆ ಎಂದು ಅವರು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ