ಕನ್ನಡಪ್ರಭ ವಾರ್ತೆ ಹಾಸನ
ಅದ್ಭುತ ಕಲಾ ತಂಡಗಳ ಪ್ರದರ್ಶನ, ಭಕ್ತಿ ಸಾಂಸ್ಕೃತಿಕ ನೃತ್ಯಗಳು, ಡೊಳ್ಳುಗಳ ಸದ್ದುಗದ್ದಲದ ನಡುವೆ ಮೆರವಣಿಗೆ ಮಹಾರಾಜ ಪಾರ್ಕ್‌ನಿಂದ ಹೊರಟು ಸಾಲಗಾಮೆ ರಸ್ತೆಯ ಮೂಲಕ ನಗರಕ್ಕೆ ವಿಶೇಷ ಚೈತನ್ಯ ತುಂಬಿತು. ೫ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು, ಕ್ರೀಡಾಪಟುಗಳು ಹಾಗೂ ಸಾರ್ವಜನಿಕರು ಈ ಮೆರವಣಿಗೆಯಲ್ಲಿ ಭಾಗವಹಿಸಿ ಸಂಭ್ರಮ ತುಂಬಿದರು.
ನಂತರ ಮಾಧ್ಯಮದೊಂದಿಗೆ ಮಾತನಾಡಿದ ಮಠಾಧೀಶರಾದ ಶ್ರೀ ಶಂಭುನಾಥ ಸ್ವಾಮೀಜಿ, ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಗಳ ಆಶೀರ್ವಾದ ಹಾಗೂ ಡಾ. ನಿರ್ಮಲಾನಂದನಾಥ ಸ್ವಾಮೀಜಿಗಳ ದಿವ್ಯ ಸಾನ್ನಿಧ್ಯದಲ್ಲಿ ಹಾಸನ, ಕೊಡಗು ಮಠಗಳ ಟ್ರಸ್ಟ್ ಆಶ್ರಯದಲ್ಲಿ ಈ ಕ್ರೀಡಾಕೂಟ ನಡೆಯುತ್ತಿದೆ. ವಿವಿಧ ಜಿಲ್ಲೆಗಳಿಂದ ಸುಮಾರು ೫ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದು ಇದು ರಾಜ್ಯದ ಪ್ರಮುಖ ಕ್ರೀಡಾ ವೇದಿಕೆಯಾಗಿದೆ ಎಂದು ಹೇಳಿದರು. ಮೆರವಣಿಗೆಯು ಮಹಾರಾಜ ಪಾರ್ಕ್‌ನಿಂದ ಹೊರಟು ನಗರದ ಮುಖ್ಯ ರಸ್ತೆಗಳ ಮೂಲಕ ಸಾಗಿ ಜಿಲ್ಲಾ ಕ್ರೀಡಾಂಗಣದಲ್ಲಿ ಅಂತ್ಯಗೊಂಡಿತು. ನಂತರ ವಿವಿಧ ವಿಭಾಗಗಳ ಕ್ರೀಡಾ ಸ್ಪರ್ಧೆಗಳಿಗೆ ಅಧಿಕೃತ ಚಾಲನೆ ದೊರೆಯಿತು.ಕಾರ್ಯಕ್ರಮದಲ್ಲಿ ಬಿಜಿಎಸ್ ಶಿಕ್ಷಣ ಟ್ರಸ್ಟ್‌ನ ಆಡಳಿತಾಧಿಕಾರಿ ಡಾ. ಎ.ಸಿ. ಶಿವರಾಮ್ ಹಾಗೂ ಟ್ರಸ್ಟ್ ಸದಸ್ಯರು, ಮಠದ ಕಾರ್ಯಕರ್ತರು, ಗುರುಪರಂಪರೆ ಭಕ್ತರು, ಕ್ರೀಡಾಪಟುಗಳು ಹಾಗೂ ಸಾವಿರಾರು ಪ್ರೇಕ್ಷಕರು ಭಾಗವಹಿಸಿದ್ದರು.