ಕನ್ನಡಪ್ರಭ ವಾರ್ತೆ ಮಂಗಳೂರು
ಕರ್ನಾಟಕ ಪ್ರದೇಶ ಕಾಂಗ್ರೆಸ್ ವತಿಯಿಂದ ಫೆ. 17ರಂದು ನಗರದ ಅಡ್ಯಾರ್‌ನ ಸಹ್ಯಾದ್ರಿ ಕಾಲೇಜಿನ ಮೈದಾನದಲ್ಲಿ ರಾಜ್ಯ ಮಟ್ಟದ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ತಿಳಿಸಿದ್ದಾರೆ.
ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಧ್ಯಾಹ್ನ 2 ಗಂಟೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷತೆಯಲ್ಲಿ ಸಮಾವೇಶ ನಡೆಯಲಿದೆ. ಎಐಸಿಸಿ ಉಸ್ತುವಾರಿ ರಣದೀಪ್ ಸುರ್ಜೇವಾಲ, ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಖಂಡರಾದ ರೋಜಿ ಜಾನ್, ಸಲೀಂ ಅಹ್ಮದ್ ಹಾಗೂ ಪಕ್ಷದ ಶಾಸಕರು, ರಾಜ್ಯದ ಎಲ್ಲ ಜಿಲ್ಲೆಗಳ ಅಧ್ಯಕ್ಷರು, ಬ್ಲಾಕ್, ಗ್ರಾ.ಪಂ. ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಭಾಗವಹಿಸಲಿದ್ದಾರೆ ಎಂದರು.
ಕಾರ್ಯಕ್ರಮದ ಯಶಸ್ಸಿಗಾಗಿ ಈಗಾಗಲೇ ಏಳು ಸಮಿತಿಗಳನ್ನು ರಚಿಸಲಾಗಿದೆ. ದ.ಕ. ಜಿಲ್ಲಾ ಉಸ್ತುವಾರಿ ಸಚಿವರು ಫೆ.9ರಂದು ಜಿಲ್ಲೆಯ ಘಟಕಗಳ ಮುಖ್ಯಸ್ಥ ಜತೆ ಸರಣಿ ಸಭೆ ನಡೆಸಲಿದ್ದು, ಫೆ. 11ರಂದು ಸಲೀಂ ಅಹ್ಮದ್ ಮುಖಂಡರನ್ನು ಭೇಟಿ ಮಾಡಲಿದ್ದಾರೆ.
ಮಾಜಿ ಸಚಿವ ರಮಾನಾಥ ರೈ ನೇತೃತ್ವದಲ್ಲಿ ಸೋಮವಾರ ಹಾಗೂ ಮಂಗಳವಾರ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರ ಭೇಟಿ ನಡೆಯಲಿದೆ ಎಂದರು.ಕಾರ್ಯಕರ್ತರ ಒಗ್ಗೂಡಿಸುವ ಕಾರ್ಯ:
ಮುಂಬರುವ ಲೋಕಸಭಾ ಚುನಾವಣೆಯ ದೃಷ್ಟಿಯಿಂದಲೂ ಈ ಸಮಾವೇಶ ಮಹತ್ವವನ್ನು ಪಡೆದಿದೆ. ಕಳೆದ ಸುಮಾರು 35 ವರ್ಷಗಳಿಂದ ದ.ಕ.ಲೋಕಸಭಾ ಕ್ಷೇತ್ರ ಕಾಂಗ್ರೆಸ್‌ನಿಂದ ದೂರವಾಗಿದೆ.
ಕ್ಷೇತ್ರದಲ್ಲಿ ಮತ್ತೆ ಕಾಂಗ್ರೆಸ್ ಗೆಲುವಿಗಾಗಿಯೂ ಕಾರ್ಯಕರ್ತರನ್ನು ಒಗ್ಗೂಡಿಸುವ ಕಾರ್ಯ ಸಮಾವೇಶ ಮೂಲಕ ನಡೆಯಲಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಪಾಲಿಕೆ ಸದಸ್ಯ ನವೀನ್ ಡಿಸೋಜಾ, ಜಿಲ್ಲಾ ಕಾಂಗ್ರೆಸ್ ಕಾನೂನು ಮತ್ತು ಮಾಹಿತಿ ಹಕ್ಕು ಅಧ್ಯಕ್ಷ ಮನೋರಾಜ್ ರಾಜೀವ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ನೀರಜ್ ಪಾಲ್, ಶುಭೋದಯ ಆಳ್ವ, ಟಿ.ಕೆ. ಸುಧೀರ್, ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷ ಲಾರೆನ್ಸ್ ಡಿಸೋಜಾ, ಸಾಮಾಜಿಕ ಜಾಲತಾಣ ಅಧ್ಯಕ್ಷ ಪೂರ್ಣೇಶ್ ಭಂಡಾರಿ, ಮುಖಂಡ ಗಣೇಶ್ ಪೂಜಾರಿ ಇದ್ದರು.
ಗ್ಯಾರಂಟಿಯಿಂದ ತಗ್ಗಿದ ಬರದ ತೀವ್ರತೆ: ರಾಜ್ಯದ 223 ತಾಲೂಕುಗಳಲ್ಲಿ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬರ ಘೋಷಣೆ ಮಾಡಿದ್ದಾರೆ. ಬರದ ಹೊರತಾಗಿಯೂ ಕಾಂಗ್ರೆಸ್ ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ, ಐದು ಗ್ಯಾರಂಟಿಗಳನ್ನು ಜಾರಿಗೊಳಿಸಿರುವುದರಿಂದ ಜನರಿಗೆ ಬರದ ತೀವ್ರತೆ ಕಡಿಮೆಯಾಗಲು ಕಾರಣವಾಗಿದೆ. ಮುಖ್ಯಮಂತ್ರಿಯವರು ಈಗಾಗಲೇ ಸ್ಪಷ್ಟಪಡಿಸಿರುವಂತೆ ಈ ಯೋಜನೆ ಐದು ವರ್ಷಗಳವರೆಗೂ ಮುಂದುವರಿಯಲಿದೆ ಎಂದವರು ಹೇಳಿದರು.