ನಾಳೆ ಆರ್ಯ ಈಡಿಗ ಸಂಘದಿಂದ ರಾಜ್ಯಮಟ್ಟದ ಸಮಾವೇಶ

KannadaprabhaNewsNetwork |  
Published : Dec 09, 2023, 01:15 AM IST
ಫೋಟೋ 08 ಟಿಟಿಎಚ್ 01: ಈಡಿಗ ಸಮಾಜದ ಸುದ್ದಿಗೋಷ್ಠಿಯಲ್ಲಿ ಗರ್ತಿಕೆರೆ ಶ್ರೀ ನಾರಾಯಣಗುರು ಮಹಾಸಂಸ್ಥಾನಮಠದ ಪೀಠಾಧೀಶರಾದ ಶ್ರೀ ರೇಣುಕಾನಂದ ಸ್ವಾಮೀಜಿ ಮಾತನಾಡಿದರು. | Kannada Prabha

ಸಾರಾಂಶ

ನಾಡಿಗೆ ಬೆಳಕು ನೀಡುವ ಸಲುವಾಗಿ ತಮ್ಮ ನೆಲೆಯನ್ನು ಕಳೆದುಕೊಂಡಿರುವ ಮುಳುಗಡೆ ಸಂತ್ರಸ್ಥರ ಪುನರ್ವಸತಿ ಸಮಸ್ಯೆ ಇಂದಿಗೂ ಬಗೆಹರಿದಿಲ್ಲ. ಸುಮಾರು ಆರು ದಶಕಗಳಿಂದ ಭೂಮಿಯ ಹಕ್ಕಿಗಾಗಿ ಈ ಸಮುದಾಯದ ಜಿಲ್ಲೆಯ ನೂರಾರು ಕುಟುಂಬಗಳು ಹೋರಾಡುತ್ತಿದ್ದರೂ ಸಮಸ್ಯೆಗೆ ಇಂದಿಗೂ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗದಿರುವುದು ವಿಷಾದನೀಯ ಸಂಗತಿಯಾಗಿದೆ.

ಶ್ರೀ ನಾರಾಯಣಗುರು ಮಹಾಸಂಸ್ಥಾನಪೀಠದ ರೇಣುಕಾನಂದ ಸ್ವಾಮೀಜಿ ಮಾಹಿತಿ

ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ

ಕರ್ನಾಟಕ ಪ್ರದೇಶ ಆರ್ಯ ಈಡಿಗ ಸಂಘದ ಅಮೃತ ಮಹೋತ್ಸವದ ಅಂಗವಾಗಿ ಡಿ. 10ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ರಾಜ್ಯಮಟ್ಟದ ಸಮಾವೇಶವನ್ನು ಆಯೋಜಿಸಿದ್ದು, ಈ ಸಮಾವೇಶದಲ್ಲಿ 26 ಉಪ ಪಂಗಡಗಳ 2 ಲಕ್ಷ ಸಮಾಜ ಬಂಧುಗಳು ಸೇರುವ ನಿರೀಕ್ಷೆ ಇದೆ ಎಂದು ಗರ್ತಿಕೆರೆ ಶ್ರೀ ನಾರಾಯಣಗುರು ಮಹಾಸಂಸ್ಥಾನಮಠದ ಪೀಠಾಧೀಶರಾದ ಶ್ರೀ ರೇಣುಕಾನಂದ ಸ್ವಾಮೀಜಿ ಹೇಳಿದರು.

ಈ ಸಮಾವೇಶದ ಕುರಿತಂತೆ ಶುಕ್ರವಾರ ಪಟ್ಟಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸಾಮಾಜಿಕವಾಗಿ ಇಂದಿಗೂ ಹಿಂದುಳಿದಿರುವ ನಮ್ಮ ಸಮುದಾಯದವರು ಶೇಂದಿ, ಸಾರಾಯಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು. ಸಾರಾಯಿ ನಿಷೇಧದ ನಂತರದಲ್ಲಿ ಸರ್ಕಾರಗಳು ಈ ಸಮುದಾಯದ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದು, ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸದ ಕಾರಣ ತೀವ್ರ ಸಂಕಷ್ಟಕ್ಕೆ ಒಳಗಾಗಿದೆ ಎಂದರು.

ನಾಡಿಗೆ ಬೆಳಕು ನೀಡುವ ಸಲುವಾಗಿ ತಮ್ಮ ನೆಲೆಯನ್ನು ಕಳೆದುಕೊಂಡಿರುವ ಮುಳುಗಡೆ ಸಂತ್ರಸ್ಥರ ಪುನರ್ವಸತಿ ಸಮಸ್ಯೆ ಇಂದಿಗೂ ಬಗೆಹರಿದಿಲ್ಲ. ಸುಮಾರು ಆರು ದಶಕಗಳಿಂದ ಭೂಮಿಯ ಹಕ್ಕಿಗಾಗಿ ಈ ಸಮುದಾಯದ ಜಿಲ್ಲೆಯ ನೂರಾರು ಕುಟುಂಬಗಳು ಹೋರಾಡುತ್ತಿದ್ದರೂ ಸಮಸ್ಯೆಗೆ ಇಂದಿಗೂ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗದಿರುವುದು ವಿಷಾದನೀಯ ಸಂಗತಿಯಾಗಿದೆ.

ಹಿಂದಿನ ಸರ್ಕಾರ ನಿಗಮ ಸ್ಥಾಪನೆ ಮಾಡುವ ಆಶ್ವಾಸನೆ ನೀಡಿದ್ದರೂ ಜಾರಿಗೆ ಬಾರದೇ ಘೋಷಣೆಗೆ ಸೀಮಿತವಾಗಿದೆ. ಹಾಲಿ ಆಡಳಿತ ನಡೆಸುತ್ತಿರುವ ಸರ್ಕಾರದ ಕಡೆಯಿಂದಲೂ ಈವರೆಗೆ ಯಾವುದೇ ಭರವಸೆಯೂ ಬಂದಿಲ್ಲಾ. ಹೀಗಾಗಿ ಈ ಕೂಡಲೇ ನಿಗಮ ಸ್ಥಾಪನೆ ಮಾಡುವ ಮೂಲಕ ₹500 ಕೋಟಿ ಅನುದಾನವನ್ನೂ ಬಿಡುಗಡೆ ಮಾಡುವಂತೆ ಈ ಸಮಾವೇಶದಲ್ಲಿ ಸರ್ಕಾರವನ್ನು ಆಗ್ರಹಿಸಲಾಗುವುದು ಎಂದರು.

ಮುಖ್ಯಮಂತ್ರಿ ಭಾಗವಹಿಸುವ ಈ ಸಮಾವೇಶದಲ್ಲಿ ಸಮಾಜಕ್ಕೆ ಸೇರಿದ ಬಿಜೆಪಿ, ಕಾಂಗ್ರೆಸ್, ಜೆಡಿಎಸ್‍ನ ಎಲ್ಲಾ ಪ್ರಮುಖರೂ ಪಾಲ್ಗೊಳ್ಳಲಿದ್ದಾರೆ. 26 ಉಪಪಂಗಡಗಳ 2 ಲಕ್ಷ ಸಮಾಜಬಂಧುಗಳು ಸೇರುವ ನಿರೀಕ್ಷೆ ಇದ್ದು, ಎಲ್ಲರನ್ನೂ ಒಂದೇ ವೇದಿಕೆಗೆ ತರಲಾಗುವುದು. ಸಮಾಜಕ್ಕೆ ಸೇರಿದ ಧಾರ್ಮಿಕ ಮುಖಂಡರಲ್ಲದೇ ಎಲ್ಲಾ ರಾಜಕೀಯ ಪಕ್ಷಗಳಿಗೆ ಸೇರಿದ ಸಮಾಜದ ಪ್ರಮುಖರೂ ಹಾಗೂ ಸಿನಿಮಾ ನಟರನ್ನೂ ಆಹ್ವಾನಿಸಲಾಗಿದೆ. ಜಿಲ್ಲೆಯಿಂದ 20 ಸಾವಿರಕ್ಕೂ ಅಧಿಕ ಮಂದಿ ಸೇರುವ ನಿರೀಕ್ಷೆ ಇದೆ ಎಂದರು.

ತಾಲೂಕು ಈಡಿಗ ಸಮಾಜದ ಅಧ್ಯಕ್ಷ ಎಂ.ರಾಮಚಂದ್ರ, ನಾರಾಯಣಗುರು ವಿಚಾರ ವೇದಿಕೆ ಸಂಘದ ಅಧ್ಯಕ್ಷ ವಿಸಾಲ್ ಕುಮಾರ್, ಮುಖಂಡರಾದ ಮುಡುಬಾ ರಾಘವೇಂದ್ರ, ಈರೇಗೋಡು ಶ್ರೀಧರ್, ಹೊದಲ ಶಿವು ಮತ್ತು ಲೋಕೇಶ್ ಇದ್ದರು.

- - - -

08 ಟಿಟಿಎಚ್ 01:

ಈಡಿಗ ಸಮಾಜದ ಸುದ್ದಿಗೋಷ್ಠಿಯಲ್ಲಿ ಗರ್ತಿಕೆರೆ ಶ್ರೀ ನಾರಾಯಣಗುರು ಮಹಾಸಂಸ್ಥಾನಮಠದ ಪೀಠಾಧೀಶರಾದ ಶ್ರೀ ರೇಣುಕಾನಂದ ಸ್ವಾಮೀಜಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''