ಬೆಂಗಳೂರಿನಲ್ಲಿ ರಾಜ್ಯಮಟ್ಟದ ಶೈಕ್ಷಣಿಕ ಮಹಾಸಮ್ಮೇಳನ

KannadaprabhaNewsNetwork |  
Published : Feb 10, 2026, 01:45 AM IST
9ಎಚ್ಎಸ್ಎನ್12 :  | Kannada Prabha

ಸಾರಾಂಶ

ಸಮತ್ವ, ಸಹಕಾರ ಮತ್ತು ಸಮನ್ವಯತೆಯನ್ನು ಪ್ರತಿಪಾದಿಸುತ್ತಾ, ಪ್ರಜಾಪ್ರಭುತ್ವ ಮೌಲ್ಯಗಳಿಗೆ ಬದ್ಧವಾಗಿರುವ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಕಳೆದ ೫೫ ವರ್ಷಗಳಿಂದ ರಾಜ್ಯದ ಸಮಸ್ತ ಶಿಕ್ಷಕರ ಸೇವಾ ಜೀವನದ ಅವಿಭಾಜ್ಯ ಅಂಗವಾಗಿ ಕಾರ್ಯನಿರ್ವಹಿಸುತ್ತಿದೆ. ದಲಿತ ನಾಯಕರಿಂದ ಜನ್ಮತಳೆದ ಈ ಸಂಘಟನೆ, ಧೀಮಂತ ನಾಯಕತ್ವದ ಮೂಲಕ ಬೆಳೆದು, ಇಂದಿನ ಯುವ ನಾಯಕರಿಂದ ಮತ್ತಷ್ಟು ಬಲಿಷ್ಠವಾಗಿ ಮುನ್ನಡೆಯುತ್ತಿದೆ. ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ತತ್ವದೊಂದಿಗೆ ಸಾಗುತ್ತಿರುವ ಈ ಸಂಘಟನೆ ದೇಶದ ಮಾದರಿ ಶಿಕ್ಷಕರ ಸಂಘಟನೆಗಳಲ್ಲೊಂದು ಎಂದು ಮುಖಂಡರು ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಹಾಸನ

ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ 55ನೇ ವರ್ಷದ ಸುವರ್ಣ ಮಹೋತ್ಸವ, ರಾಜ್ಯಮಟ್ಟದ ಶೈಕ್ಷಣಿಕ ಮಹಾಸಮ್ಮೇಳನ, ಧನ್ಯತಾ ಸಮಾರಂಭ ಹಾಗೂ ಗುರುವಂದನಾ ಸಮಾರಂಭವನ್ನು ಫೆಬ್ರವರಿ 28 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷೆ ಚೈತ್ರ ನಾಯಕರಹಳ್ಳಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ಸಮತ್ವ, ಸಹಕಾರ ಮತ್ತು ಸಮನ್ವಯತೆಯನ್ನು ಪ್ರತಿಪಾದಿಸುತ್ತಾ, ಪ್ರಜಾಪ್ರಭುತ್ವ ಮೌಲ್ಯಗಳಿಗೆ ಬದ್ಧವಾಗಿರುವ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಕಳೆದ ೫೫ ವರ್ಷಗಳಿಂದ ರಾಜ್ಯದ ಸಮಸ್ತ ಶಿಕ್ಷಕರ ಸೇವಾ ಜೀವನದ ಅವಿಭಾಜ್ಯ ಅಂಗವಾಗಿ ಕಾರ್ಯನಿರ್ವಹಿಸುತ್ತಿದೆ. ದಲಿತ ನಾಯಕರಿಂದ ಜನ್ಮತಳೆದ ಈ ಸಂಘಟನೆ, ಧೀಮಂತ ನಾಯಕತ್ವದ ಮೂಲಕ ಬೆಳೆದು, ಇಂದಿನ ಯುವ ನಾಯಕರಿಂದ ಮತ್ತಷ್ಟು ಬಲಿಷ್ಠವಾಗಿ ಮುನ್ನಡೆಯುತ್ತಿದೆ. ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ತತ್ವದೊಂದಿಗೆ ಸಾಗುತ್ತಿರುವ ಈ ಸಂಘಟನೆ ದೇಶದ ಮಾದರಿ ಶಿಕ್ಷಕರ ಸಂಘಟನೆಗಳಲ್ಲೊಂದು ಎಂದು ಮುಖಂಡರು ಅಭಿಪ್ರಾಯಪಟ್ಟರು.ಶಿಕ್ಷಕರ ದೀರ್ಘಕಾಲದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಸಂಘ ನಿರಂತರ ಪ್ರಯತ್ನ ನಡೆಸಿದ್ದು, ಸರ್ಕಾರ ಹಾಗೂ ಶಿಕ್ಷಣ ಇಲಾಖೆಯ ಗಮನ ಸೆಳೆದು ಅನೇಕ ಬೇಡಿಕೆಗಳನ್ನು ಈಡೇರಿಸಿಕೊಳ್ಳಲಾಗಿದೆ. ಶಿಕ್ಷಕರು ಸಂಘಕ್ಕೆ ವಹಿಸಿರುವ ಜವಾಬ್ದಾರಿಯನ್ನು “ದೇವತಾ ಕಾರ್ಯ”ವೆಂದು ಭಾವಿಸಿ ಸಂಘ ಕಾರ್ಯನಿರ್ವಹಿಸುತ್ತಿದ್ದು, ಸಾಧಿಸಿರುವುದಕ್ಕಿಂತ ಇನ್ನೂ ಸಾಧಿಸಬೇಕಿರುವುದು ಬಹಳಷ್ಟಿದೆ ಎಂಬ ಅರಿವಿನೊಂದಿಗೆ ಮುಂದಿನ ಹೋರಾಟಗಳಿಗೆ ಸಜ್ಜಾಗಿದೆ ಎಂದರು. ಕಳೆದ ಆರು ತಿಂಗಳಲ್ಲಿ ಸಂಘ ಸಾಧಿಸಿದ ಪ್ರಮುಖ ಸಾಧನೆಗಳು ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಶಿಕ್ಷಕರ ಪರ ತಿದ್ದುಪಡಿ, ಸಹಶಿಕ್ಷಕರಿಂದ ಮುಖ್ಯೋಪಾಧ್ಯಾಯ ಹಾಗೂ ಪ್ರೌಢಶಾಲಾ ಶಿಕ್ಷಕರಿಗೆ ಬಡ್ತಿ ನಿಯಮಾವಳಿ, ಹಿರಿಯ ಮುಖ್ಯ ಶಿಕ್ಷಕರಿಗೆ ಕೌನ್ಸಿಲಿಂಗ್ ಮೂಲಕ ಬಡ್ತಿ, ದೈಹಿಕ ಶಿಕ್ಷಣ ಶಿಕ್ಷಕರಿಗೆ ಗ್ರೇಡ್?೧ ಬಡ್ತಿ, ರಾಜ್ಯದ ೧.೫ ಲಕ್ಷ ಶಿಕ್ಷಕರಿಗೆ ಉಚಿತ ಐಟಿ ಹಾಗೂ ಇ- ಫೈಲಿಂಗ್ ಸೌಲಭ್ಯ, ಶಾಲೆಗಳಿಗೆ ಕುಡಿಯುವ ನೀರು ಮತ್ತು ಶೌಚಾಲಯ ನಿರ್ವಹಣೆಗೆ ಅನುದಾನ, ಮಹಿಳಾ ಶಿಕ್ಷಕರಿಗೆ ವೇತನ ಸಹಿತ ಋತುಚಕ್ರ ರಜೆ, ಆಕಸ್ಮಿಕ ನಿಧನರಾದ ಶಿಕ್ಷಕರ ಕುಟುಂಬಗಳಿಗೆ ಲಕ್ಷಾಂತರ ಪರಿಹಾರ, ೪೫ ಸಾವಿರಕ್ಕೂ ಹೆಚ್ಚು ಶಿಕ್ಷಕರಿಗೆ ವರ್ಗಾವಣೆ ಭಾಗ್ಯ, ಅನಗತ್ಯ ಹಾಜರಾತಿ ಆ್ಯಪ್‌ಗಳ ರದ್ದತಿ, ವಿದ್ಯುತ್ ಬಿಲ್ ಉಚಿತ, ಕ್ರೀಡಾ ಚಟುವಟಿಕೆಗಳಿಗೆ ಪ್ರತ್ಯೇಕ ಅನುದಾನ ಸೇರಿದಂತೆ ಹಲವು ಶಿಕ್ಷಕಪರ ನಿರ್ಣಯಗಳನ್ನು ಸಂಘದ ಒತ್ತಾಯದ ಫಲವಾಗಿ ಜಾರಿಗೊಳಿಸಲಾಗಿದೆ ಎಂದು ಹೇಳಿದರು. ಸಂಘದ ಜಿಲ್ಲಾ ಗೌರವಾಧ್ಯಕ್ಷ ಅಣ್ಣಪ್ಪ ಮಾತನಾಡಿ, ಸಮ್ಮೇಳನದಲ್ಲಿ ಮಂಡಿಸಲಿರುವ ಪ್ರಮುಖ ಹಕ್ಕೊತ್ತಾಯಗಳು ಪ್ರಾಥಮಿಕ ಶಾಲಾ ಸಹಶಿಕ್ಷಕರಿಗೆ ಮುಖ್ಯಗುರು ಹಾಗೂ ಪ್ರೌಢಶಾಲಾ ಶಿಕ್ಷಕ ಹುದ್ದೆಗಳಿಗೆ ಬಡ್ತಿ, ಪದವೀಧರ ಶಿಕ್ಷಕರಿಗೆ ಆರ್ಥಿಕ ಸೌಲಭ್ಯ, ನೆಲಿ?ಕಲಿ ಪದ್ಧತಿ ರದ್ದತಿ, ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಮುಖ್ಯ ಶಿಕ್ಷಕರ ಹುದ್ದೆ ಮಂಜೂರು, ಹಳೆಯ ಪಿಂಚಣಿ ಯೋಜನೆ ಜಾರಿ, ಸರ್ಕಾರಿ ಶಾಲೆಗಳ ಸಂರಕ್ಷಣೆ, ಎರಡನೇ ಮತ್ತು ನಾಲ್ಕನೇ ಶನಿವಾರ ರಜೆ, ಬೋಧಕೇತರ ಕೆಲಸಗಳಿಂದ ಶಿಕ್ಷಕರ ಮುಕ್ತಿ, ಪ್ರಭಾರ ಭತ್ಯೆ, ಪೋಷಣ ಅಭಿಯಾನ ದರ ಹೆಚ್ಚಳ ಸೇರಿದಂತೆ ಹಲವು ಬೇಡಿಕೆಗಳನ್ನು ಸರ್ಕಾರದ ಮುಂದೆ ಮಂಡಿಸಲಾಗುವುದು ಎಂದು ತಿಳಿಸಿದರು.“ಸರ್ಕಾರಿ ಶಾಲೆಗಳ ಉಳಿವು ಎಂದರೆ ಬಡವರ ಶಿಕ್ಷಣದ ಉಳಿವು” ಎಂಬ ನಂಬಿಕೆಯಿಂದ ಸಂಘ ಕಾರ್ಯನಿರ್ವಹಿಸುತ್ತಿದ್ದು, ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಸರ್ಕಾರದೊಂದಿಗೆ ಸಮನ್ವಯ ಸಾಧಿಸಿ ಹೋರಾಟ ನಡೆಸಲಾಗುತ್ತಿದೆ ಎಂದರು. ಫೆಬ್ರವರಿ ೨೮ರಂದು ನಡೆಯಲಿರುವ ಈ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದು, ರಾಜ್ಯದ ೧ ಲಕ್ಷ ೬೫ ಸಾವಿರಕ್ಕೂ ಹೆಚ್ಚು ಶಿಕ್ಷಕರು, ಎಲ್ಲಾ ಜಿಲ್ಲೆ ಹಾಗೂ ತಾಲೂಕು ಮಟ್ಟದ ಪದಾಧಿಕಾರಿಗಳು, ಹಿತೈಷಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ. ಎಸ್. ಬಸವರಾಜ್, ರಾಜ್ಯ ಉಪಾಧ್ಯಕ್ಷ ವಿ.ಜಿ. ದ್ಯಾವೇಗೌಡ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕುಮಾರಸ್ವಾಮಿ, ಹಾಸನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಎಸ್. ಬಸವರಾಜು ತಾಲೂಕು ಅಧ್ಯಕ್ಷ ಸಿ. ಎಚ್. ಅಣ್ಣೇಗೌಡ, ತಾಲೂಕು ಪ್ರಧಾನ ಕಾರ್ಯದರ್ಶಿ ಬಿ. ಎಚ್. ರಾಜು, ಬಿ.ಕೆ. ರವೀಂದ್ರ, ನಾಯಕರಹಳ್ಳಿ ಮಂಜೇಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತೋಟದ ಕಾರ್ಮಿಕರ ಮೇಲೆ ಚಿರತೆ ದಾಳಿ
ಕನ್ನಡ ಭಾಷಾ ನೀತಿಯ ಅನುಷ್ಠಾನಕ್ಕೆ ವಿಶೇಷ ಕ್ರಮ: ಡಿಸಿ ಪ್ರಭುಲಿಂಗ ಕವಳಿಕಟ್ಟಿ