ಕನ್ನಡಪ್ರಭ ವಾರ್ತೆ ಗೋಣಿಕೊಪ್ಪ
ಈ ಬಾರಿಯ ಕವಿಗೋಷ್ಠಿಯಲ್ಲಿ ಪ್ರತಿವರ್ಷದಂತೆ ಕನ್ನಡ, ಕೊಡವ, ಅರೆಭಾಷೆ, ತುಳು, ಕೊಂಕಣಿ, ಹವ್ಯಕ, ಯರವ, ಕುಂಬಾರ, ಹಿಂದಿ, ತಮಿಳು, ಮಲೆಯಾಳಂ, ಮರಾಠಿ, ಕುಂದಾಪ್ರ ಕನ್ನಡ ಹೀಗೆ 13 ಭಾಷೆಯ ಕವನಗಳನ್ನು ಕನ್ನಡ, ಹಿಂದಿ, ಇಂಗ್ಲಿಷ್, ತಮಿಳು, ಮಲೆಯಾಳಂ, ಮರಾಠಿ 103 ಕವಿಗಳು ಕವನಗಳನ್ನು ವಾಚಿಸಲಿದ್ದಾರೆ.
ಕವನ ವಾಚನ:ಕನ್ನಡ ಭಾಷೆಯ ಚುಟುಕು ಕವನ 4 ಕವಿಗಳು ವಾಚಿಸಲಿದ್ದಾರೆ. ಬೆಳೆಯ ಸಿರಿ ಮೊಳಕೆಯಲ್ಲಿ ಎನ್ನುವಂತೆ ಮಕ್ಕಳ ಪ್ರತಿಭೆಯನ್ನು ಗುರುತಿಸುವ ಸಲುವಾಗಿ ಮತ್ತು ಮಕ್ಕಳಲ್ಲಿ ಸಾಹಿತ್ಯ ಆಸಕ್ತಿ ಮೂಡಿಸುವ ಸಲುವಾಗಿ ಈ ಬಾರಿ ವಿಶೇಷವಾಗಿ ಮಕ್ಕಳ ಕವನಗೋಷ್ಠಿ (6 ರಿಂದ 13 ) ಏರ್ಪಡಿಸಲಾಗಿದೆ. 14 ಬಾಲ ಪ್ರತಿಭೆಗಳು ದಸರ ಕವಿಗೋಷ್ಠಿಯಲ್ಲಿ ಕವನ ವಾಚನ ಮಾಡಲಿದ್ದಾರೆ. ಕನ್ನಡದಲ್ಲಿ 6 ಮತ್ತು ಇಂಗ್ಲೀಷಿನಲ್ಲಿ 5 ಬಾಲ ಕವಿಗಳು ಕವನ ವಾಚನ ಮಾಡಲಿದ್ದಾರೆ.
ಬೆಂಗಳೂರು, ಬಳ್ಳಾರಿ, ಚಿಕ್ಕಮಗಳೂರು, ಸುಳ್ಯ, ಬೆಳಗಾವಿ, ಮೈಸೂರು, ಕುಂದಾಪುರ ಹೀಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಕವಿಗಳು ತಮ್ಮ ಕವನವನ್ನು ಕಳುಹಿಸಿದ್ದಾರೆ ಎಂದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಂ.ಪಿ ಕೇಶವ ಕಾಮತ್ ಪತ್ರಕರ್ತರಿಗೆ ಮಾಹಿತಿ ನೀಡಿದರು.
ಸಾಹಿತ್ಯ ಕಲೆ ಇವುಗಳ ಪ್ರೋತ್ಸಾಹಕ್ಕಾಗಿ ಹಲವಾರು ವರ್ಷಗಳಿಂದ ಬಹು ಭಾಷಾ ಕವಿಗೋಷ್ಠಿ ಯನ್ನು ಕನ್ನಡ ಸಾಹಿತ್ಯ ಪರಿಷತ್ ನೊಂದಿಗೆ ಜೊತೆಗೂಡಿ ನಡೆಸುತ್ತಿದೆ. ಪ್ರತಿ ವರ್ಷವೂ ಹೆಚ್ಚಿನ ಸಂಖ್ಯೆಯಲ್ಲಿ ಕವಿಗಳು ಸೇರಿ ಉತ್ತಮ ರೀತಿಯ ಕವನ ವಾಚನ ಮಾಡುತ್ತಿರುವುದು ಹೆಮ್ಮೆಯ ವಿಷಯ. ಈ ಬಾರಿ 103 ಕ್ಕೂ ಹೆಚ್ಚು ಕವಿಗಳು ಭಾಗವಹಿಸುತ್ತಿರುವುದು ಸಂತಸದ ವಿಚಾರ.
ಕವಿಗೋಷ್ಠಿ ಸಮಿತಿಯ ಅಧ್ಯಕ್ಷರಾದ ಕೋಳೆರ ದಯ ಚಂಗಪ್ಪ ಕಾರ್ಯಕ್ರಮದ ಮಾಹಿತಿ ನೀಡಿದರು.
ಗೋಣಿಕೊಪ್ಪಲಿನ ದಸರಾ ವೇದಿಕೆಯಲ್ಲಿ ನಡೆಯುವ ಈ ಬಹುಭಾಷಾ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಕೊಡಗು ಜಿಲ್ಲೆಯ ಹಿರಿಯ ಸಾಹಿತಿ ಮತ್ತು ನಿವೃತ್ತ ಆಕಾಶವಾಣಿಯ ಉದ್ಘೋಷಕರಾದ ಸುಬ್ರಾಯ ಸಂಪಾಜೆ ಅವರು ವಹಿಸಲಿದ್ದು ಕವಿಗೋಷ್ಠಿಯ ಉದ್ಘಾಟನೆಯನ್ನು ಕಿಗ್ಗಟನಾಡು ಹಿರಿಯ ನಾಗರಿಕ ವೇದಿಕೆಯ ಸ್ಥಾಪಕರಾದ ಕಾಟಿಮಾಡ ಜಿಮ್ಮಿ ಅಣ್ಣಯ್ಯ ನೆರವೇರಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಂ.ಪಿ ಕೇಶವ ಕಾಮತ್, ಕೊಡಗು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮುಲ್ಲೆಂಗಡ ಮುಧೋಷ್ ಪೂವಯ್ಯ, ಪೊನ್ನಂಪೇಟೆ ಹೋಬಳಿ ಅಧ್ಯಕ್ಷರು ಮತ್ತು ಶ್ರೀ ಕಾವೇರಿ ದಸರಾ ಸಮಿತಿಯ ಅಧ್ಯಕ್ಷರೂ ಆದ ಕುಲ್ಲಚಂಡ ಪ್ರಮೋದ್ ಗಣಪತಿ, ಕವಿಗೋಷ್ಠಿ ಸಮಿತಿ ಸಂಚಾಲಕಿ ಎಸ್.ಎಂ ರಜಿನಿ, ಗೌರವ ಕಾರ್ಯದರ್ಶಿ ಶೀಲಾ ಬೋಪಣ್ಣ, ಕಾವೇರಿ ದಸರಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಕಂದಾದೇವಯ್ಯ ಸಂಯೋಜಕರಾದ ಚಂದನ್ ಕಾಮತ್ ಉಪಸ್ಥಿತರಿರುತ್ತಾರೆ ಎಂದರು.
ಬಹುಭಾಷಾ ಕವಿಗೋಷ್ಠಿಯ ಸಂಚಾಲಕಿ ಎಸ್.ಎಂ ರಜನಿ ಕಾರ್ಯಕ್ರಮದ ಕುರಿತು ಮಾತನಾಡಿ, ಗೋಣಿಕೊಪ್ಪಲು ದಸರಾ ಕವಿ ಗೋಷ್ಠಿಗೆ ಆಹ್ವಾನಿಸಿದಾಗ ಇಷ್ಟು ಬಾರಿಗಿಂತಲೂ ಹೆಚ್ಚು ಕವನಗಳನ್ನು ಕವಿಗಳು ಕಳುಹಿಸಿ ಕೊಟ್ಟಿರುತ್ತಾರೆ. ಈ ಬಾರಿ 130 ಕವನಗಳು ಅಂಚೆ, ವಾಟ್ಸಾಪ್ ಮತ್ತು ಇ-ಮೇಲ್ ಮೂಲಕ ಬಂದಿದ್ದು ಆಯ್ಕೆ ಸಮಿತಿಯು 103 ಕವಿಗಳ ಕವಿತೆಗಳನ್ನು, ನಾಲ್ಕು ಚುಟುಕು ಕವನಗಳನ್ನು ಆರಿಸಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಶೀಲಾ ಬೋಪಣ್ಣ, ಸಹಕಾರ್ಯದರ್ಶಿ ಟಿ.ಆರ್ ವಿನೋದ್, ನಿರ್ದೇಶಕರಾದ ಚಂದನಾ ಮಂಜುನಾಥ್, ಚಂದನ್ ಕಾಮತ್ ಉಪಸ್ಥಿತರಿದ್ದರು.