ರಾಜ್ಯ ಮಟ್ಟದ ಶ್ರೀ ಕಾಲಭೈರವೇಶ್ವರ ಜಾನಪದ ಕಲಾಮೇಳಕ್ಕೆ ವಿಧ್ಯುಕ್ತ ಚಾಲನೆ

KannadaprabhaNewsNetwork |  
Published : Sep 25, 2025, 01:00 AM IST
24ಕೆಎಂಎನ್ ಡಿ32 | Kannada Prabha

ಸಾರಾಂಶ

ಗ್ರಾಮೀಣ ಪ್ರದೇಶದ ರೈತಾಪಿ ವರ್ಗದ ಮಕ್ಕಳು ವಿದ್ಯಾವಂತ, ಬುದ್ದಿವಂತ, ಜ್ಞಾನವಂತರಾಗಬೇಕೆಂಬ ದೂರದೃಷ್ಟಿ ಹೊಂದಿದ್ದ ಭೈರವೈಕ್ಯ ಶ್ರೀಗಳು ವಿದ್ಯಾಕ್ಷೇತ್ರಕ್ಕೆ ಉನ್ನತವಾದ ಕೊಡುಗೆ ನೀಡುವ ಜೊತೆಗೆ ಧಾರ್ಮಿಕವಾಗಿ ದೇವಸ್ಥಾನಗಳನ್ನು ಅಭಿವೃದ್ಧಿ ಪಡಿಸುವುದೂ ಸೇರಿದಂತೆ ಅಕ್ಷರ ಜ್ಞಾನ, ಅರಣ್ಯ, ಗೋಸಂರಕ್ಷಣೆ, ನಿರ್ಗತಿಕರಿಗೆ ಅನಾಥಾಶ್ರಮ ಮತ್ತು ವೃದ್ಧಾಶ್ರಮಗಳನ್ನು ಸ್ಥಾಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಆದಿ ಚುಂಚನಗಿರಿ ಮಹಾ ಸಂಸ್ಥಾನ ಮಠದಲ್ಲಿ ಎರಡು ದಿನಗಳ ಕಾಲ ನಡೆಯುವ ರಾಜ್ಯ ಮಟ್ಟದ 46ನೇ ಶ್ರೀ ಕಾಲಭೈರವೇಶ್ವರ ಜಾನಪದ ಕಲಾ ಮೇಳಕ್ಕೆ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಜೊತೆಗೂಡಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಬುಧವಾರ ಬೆಳಗ್ಗೆ ವಿಧ್ಯುಕ್ತವಾಗಿ ಚಾಲನೆ ನೀಡಿದರು.

ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಹಸ್ರಾರು ಮಂದಿ ಜಾನಪದ ಕಲಾವಿದರು ಶ್ರೀಕ್ಷೇತ್ರದಲ್ಲಿ ಸಂಗಮಗೊಂಡು ವಿವಿಧ ಬಗೆಯ ಜಾನಪದ ಪ್ರಕಾರಗಳ ಪ್ರದರ್ಶನ ನೀಡಿದರು. ನಮ್ಮ ಪೂರ್ವಿಕರ ಬಾಯಿಂದ ಬಾಯಿಗೆ ಜನರಿಂದ ಜನರಿಗೆ ಪಸರಿಸಿದ ಜಾನಪದ ಸೊಗಡಿನ ಕಲೆಗಳಾದ ಡೊಳ್ಳು ಕುಣಿತ, ಪೂಜಾ ಕುಣಿತ, ವೀರಗಾಸೆ ಕುಣಿತ, ಪಟದ ಕುಣಿತ, ಕೋಲಾಟ ಸೇರಿದಂತೆ ಉತ್ತರ ಕರ್ನಾಟಕದ ಹತ್ತಾರು ಬಗೆಯ ಕಲಾ ಪ್ರದರ್ಶನಗಳು ಕ್ಷೇತ್ರದಲ್ಲಿ ಮೇಳೈಸಿದವು.

ಭವ್ಯ ಮೆರವಣಿಗೆ:

ಸಮಾರಂಭಕ್ಕೂ ಮುನ್ನ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥಸ್ವಾಮೀಜಿ ಹಾಗೂ ಐದು ಮಂದಿ ಚುಂಚಶ್ರೀ ಪ್ರಶಸ್ತಿ ಪುರಸ್ಕೃತರನ್ನು ಬೆಳ್ಳಿ ಮಾದರಿಯ ಎರಡು ಸಾರೋಟಿನಲ್ಲಿ ಕೂರಿಸಿ ವಿವಿಧ ಜಾನಪದ ಕಲಾತಂಡ ಮತ್ತು ಪೂರ್ಣಕುಂಭ ಹೊತ್ತ ಮಹಿಳೆಯರು ಶ್ರೀಮಠದ ರಥದ ಬೀದಿಯಿಂದ ಜೋಡಿ ರಸ್ತೆ ಮಾರ್ಗವಾಗಿ ವೇದಿಕೆವರೆಗೆ ಭವ್ಯ ಮೆರವಣಿಗೆಯಲ್ಲಿ ಕರೆತರಲಾಯಿತು.

ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥಸ್ವಾಮೀಜಿ ಮಾತನಾಡಿ, ಗ್ರಾಮೀಣ ಪ್ರದೇಶದ ರೈತಾಪಿ ವರ್ಗದ ಮಕ್ಕಳು ವಿದ್ಯಾವಂತ, ಬುದ್ದಿವಂತ, ಜ್ಞಾನವಂತರಾಗಬೇಕೆಂಬ ದೂರದೃಷ್ಟಿ ಹೊಂದಿದ್ದ ಭೈರವೈಕ್ಯ ಶ್ರೀಗಳು ವಿದ್ಯಾಕ್ಷೇತ್ರಕ್ಕೆ ಉನ್ನತವಾದ ಕೊಡುಗೆ ನೀಡುವ ಜೊತೆಗೆ ಧಾರ್ಮಿಕವಾಗಿ ದೇವಸ್ಥಾನಗಳನ್ನು ಅಭಿವೃದ್ಧಿ ಪಡಿಸುವುದೂ ಸೇರಿದಂತೆ ಅಕ್ಷರ ಜ್ಞಾನ, ಅರಣ್ಯ, ಗೋಸಂರಕ್ಷಣೆ, ನಿರ್ಗತಿಕರಿಗೆ ಅನಾಥಾಶ್ರಮ ಮತ್ತು ವೃದ್ಧಾಶ್ರಮಗಳನ್ನು ಸ್ಥಾಪಿಸಿದ್ದಾರೆ ಎಂದರು.

ಭೈರವೈಕ್ಯಶ್ರೀ ಡಾ.ಬಾಲಗಂಗಾಧರನಾಥಶ್ರೀಗಳು ತಮ್ಮ ಪಟ್ಟಾಭಿಷೇಕ ಮಹೋತ್ಸವಕ್ಕೆ ಆಯ್ಕೆ ಮಾಡಿಕೊಂಡಿದ್ದರು. ಹಾಗಾಗಿ ಕಳೆದ 45 ವರ್ಷಗಳ ಹಿಂದೆ ಆರಂಭಗೊಂಡ ಈ ಜಾನಪದ ಕಲಾಮೇಳ ನಿರಂತರವಾಗಿ ಮುನ್ನಡೆಸುವ ಮೂಲಕ ಈ ಕಲೆಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ಕೆಲಸವನ್ನು ಶ್ರೀಮಠ ಮಾಡುತ್ತಿದೆ ಎಂದರು.

ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಪ್ರಧಾನಕಾರ್ಯದರ್ಶಿ ಪುರುಷೋತ್ತಮಾನಂದನಾಥ ಸ್ವಾಮೀಜಿ, ಮೈಸೂರು ಶಾಖಾಮಠದ ಸೋಮನಾಥ ಸ್ವಾಮೀಜಿ, ಬೆಂಗಳೂರು ಶಾಖಾ ಮಠದ ಸೌಮ್ಯನಾಥ ಸ್ವಾಮೀಜಿ, ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಹೀ.ಚಿ. ಬೋರಲಿಂಗಯ್ಯ, ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಆದಿಚುಂಚನಗಿರಿ ವಿವಿ ಉಪ ಕುಲಪತಿ ಡಾ.ಎಸ್.ಎನ್.ಶ್ರೀಧರ, ಖ್ಯಾತ ಗಾಯಕ ಶಶಿಧರ್‌ ಕೋಟೆ, ಡಿವೈಎಸ್ಪಿ ಬಿ.ಚಲುವರಾಜು, ಸಿಪಿಐ ನಿರಂಜನ್, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಆಡಳಿತಾಧಿಕಾರಿ ಡಾ.ಎ.ಟಿ.ಶಿವರಾಮು ಸೇರಿದಂತೆ ಹಲವರು ಇದ್ದರು.

PREV

Recommended Stories

ಪಾಲಿಕೆಗಳ ಚುನಾವಣೆ ಮುಗಿವವರೆಗೆ ಬೆಂಗಳೂರಲ್ಲಿ ಮತಪಟ್ಟಿ ಪರಿಷ್ಕರಣೆ ಮುಂದೂಡಿ : ಕೇಂದ್ರ ಆಯುಕ್ತರಿಗೆ ಪತ್ರ
ಡ್ರಾಪ್‌ ನೆಪದಲ್ಲಿ ಗುತ್ತಿಗೆದಾರನ ದರೋಡೆ ಮಾಡಿದ್ದ ನಾಲ್ವರ ಬಂಧನ