ಕಾವೇರಿ ಆರತಿ ವಿರೋಧಿಸಿ ಇಂದು ಪ್ರತಿಭಟನೆ: ಹಿತರಕ್ಷಣಾ ಸಮಿತಿ ನಿರ್ಧಾರ

KannadaprabhaNewsNetwork |  
Published : Sep 25, 2025, 01:00 AM IST
24ಕೆಎಂಎನ್ ಡಿ34 | Kannada Prabha

ಸಾರಾಂಶ

ಸರ್ಕಾರದ ಅಹ್ವಾನದ ಮೇರೆಗೆ ಭಾಗಿಯಾಗುತ್ತಿರುವ ಮಠಾಧೀಶರು ಜಿಲ್ಲೆಯ ರೈತರ ಹಿತಾಸಕ್ತಿ, ಕೃಷಿ ಹಾಗೂ ಅಣೆಕಟ್ಟೆಯ ಭದ್ರತೆ ದೃಷ್ಟಿಯಿಂದ ಸರ್ಕಾರದ ಈ ಕಾರ್ಯಕ್ರಮದಲ್ಲಿ ಭಾಗಿಯಾಗಬಾರದೆಂದು ಮನವಿ ಮಾಡುತ್ತೇವೆ. ಈ ಯೋಜನೆಗಳ ಅನಾಹುತ, ಕಾವೇರಿ ನದಿ ನೀರಿನ ಮಲಿನತೆ ಕುರಿತು ಸರ್ಕಾರದ ಮುಖ್ಯಸ್ಥರಿಗೆ ಮನವರಿಕೆ ಮಾಡಿಕೊಡುವಂತೆ ಮನವಿ ಮಾಡುತ್ತೇವೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಹೈಕೋರ್ಟ್ ಮಧ್ಯಂತರ ತಡೆ ಇದ್ದರೂ ಕೆಆರ್‌ಎಸ್ ಅಣೆಕಟ್ಟೆ ಬಳಿ ಸೆ.26ರಂದು ಪ್ರಾಯೋಗಿಕವಾಗಿ ಕಾವೇರಿ ಆರತಿ ನಡೆಸಲು ತೀರ್ಮಾನಿಸಿರುವ ಸರ್ಕಾರದ ನಿರ್ಧಾರ ಖಂಡಿಸಿ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಪ್ರತಿಭಟನೆ ನಡೆಸಲು ನಿರ್ಧರಿಸಿದೆ.

ನಗರದ ಪ್ರವಾಸಿ ಮಂದಿರದಲ್ಲಿ ರೈತ ನಾಯಕಿ ಸುನಂದಾ ಜಯರಾಂ ನೇತೃತ್ವದಲ್ಲಿ ಸಭೆ ನಡೆಸಿದ ಸಮಿತಿ ಮುಖಂಡರು, ಅಣೆಕಟ್ಟೆಯ ಭದ್ರತೆ ಕುರಿತು ಕಿಂಚಿತ್ತೂ ಕಾಳಜಿ ಇಲ್ಲದ ರಾಜ್ಯ ಸರ್ಕಾರದ ನಡೆ ವಿರುದ್ಧ ಪ್ರತಿಭಟನಾ ಸಭೆ ನಡೆಸಲು ನಿರ್ಧರಿಸಿದ್ದಾರೆ.

ಸೆ.26ರ ಮಧ್ಯಾಹ್ನ 3 ಗಂಟೆಗೆ ಕಾವೇರಿ ಆರತಿ ವಿರೋಧಿಸಿ ಪ್ರತಿಭಟನಾ ಸಭೆ ನಡೆಯಲಿದೆ. ಮಂಡ್ಯದಿಂದ ಹೊರಡುವವರು ಬೆಳಗ್ಗೆ 11 ಗಂಟೆಗೆ ನಗರದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಸೇರುವಂತೆ ತಿಳಿಸಿದ್ದಾರೆ.

ಅಮ್ಯೂಸ್ ಮೆಂಟ್ ಪಾರ್ಕ್, ಸೀಪ್ಲೇನ್ ಬೆಂಗಳೂರಿಗೆ ಕಾವೇರಿ ನೀರು ಕೊಂಡೊಯ್ಯುವ 6ನೇ ಹಂತದ ಯೋಜನೆಗಳು ಜಿಲ್ಲೆಯ ರೈತರ ಹಿತಾಸಕ್ತಿಗೆ ವಿರುದ್ಧವಾಗಿವೆ. ಕಾನೂನನ್ನು ಗೌರವಿಸಬೇಕಾದ ಸರ್ಕಾರವೇ ಅದನ್ನು ಉಲ್ಲಂಘಿಸುತ್ತಿರುವುದು ದುರಂತವಾಗಿದೆ ಎಂದು ಮುಖಂಡರು ಕಿಡಿಕಾರಿದ್ದಾರೆ.

ಸರ್ಕಾರದ ಅಹ್ವಾನದ ಮೇರೆಗೆ ಭಾಗಿಯಾಗುತ್ತಿರುವ ಮಠಾಧೀಶರು ಜಿಲ್ಲೆಯ ರೈತರ ಹಿತಾಸಕ್ತಿ, ಕೃಷಿ ಹಾಗೂ ಅಣೆಕಟ್ಟೆಯ ಭದ್ರತೆ ದೃಷ್ಟಿಯಿಂದ ಸರ್ಕಾರದ ಈ ಕಾರ್ಯಕ್ರಮದಲ್ಲಿ ಭಾಗಿಯಾಗಬಾರದೆಂದು ಮನವಿ ಮಾಡುತ್ತೇವೆ. ಈ ಯೋಜನೆಗಳ ಅನಾಹುತ, ಕಾವೇರಿ ನದಿ ನೀರಿನ ಮಲಿನತೆ ಕುರಿತು ಸರ್ಕಾರದ ಮುಖ್ಯಸ್ಥರಿಗೆ ಮನವರಿಕೆ ಮಾಡಿಕೊಡುವಂತೆ ಮನವಿ ಮಾಡುತ್ತೇವೆ ಎಂದು ಹೇಳಿದ್ದಾರೆ.

ಸಭೆಯಲ್ಲಿ ರೈತ ಮುಖಂಡರಾದ ಇಂಡುವಾಳು ಚಂದ್ರಶೇಖರ, ಕೆ.ಬೋರಯ್ಯ, ಜೈ ಕರ್ನಾಟಕ ಪರಿಷತ್ ನಾರಾಯಣ್, ಶಿವಳ್ಳಿ ಚಂದ್ರು, ಕರುನಾಡ ಸೇವಕರು ಸಂಘಟನೆ ಎಂ.ಬಿ.ನಾಗಣ್ಣಗೌಡ, ದಸಂಸ ಎಂ.ವಿ.ಕೃಷ್ಣ, ಮುದ್ದೇಗೌಡ, ಕೆಂಪೇಗೌಡ, ಸಿಐಟಿಯು ಸಂಘಟನೆಯ ಸಿ.ಕುಮಾರಿ ಹಲವರು ಇದ್ದರು.

ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಂದ ಕಾವೇರಿ ಆರತಿ ಸಿದ್ಧತೆ ಪರಿಶೀಲನೆ

ಕನ್ನಡಪ್ರಭ ವಾರ್ತೆ ಮಂಡ್ಯ

ಕೆಆರ್‌ಎಸ್ ಬೃಂದಾವನದಲ್ಲಿ ಸೆ.26ರಿಂದ ನಡೆಯಲಿರುವ ಸಾಂಕೇತಿಕ ಕಾವೇರಿ ಆರತಿ ಕುರಿತಂತೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬುಧವಾರ ಸಂಜೆ ಸ್ಥಳ ಪರಿಶೀಲನೆ ನಡೆಸಿದರು.

ವೇದಿಕೆ, ಕಾವೇರಿ ಆರತಿ ನಡೆಯುವ ಸ್ಥಳ ಮತ್ತು ವೀಕ್ಷಕರಿಗೆ ಆಸನ ವ್ಯವಸ್ಥೆ ಕುರಿತಂತೆ ಪರಿಶೀಲನೆ ನಡೆಸಿದ ಉಪ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಕಾರ್ಯಕ್ರಮ ಯಾವುದೇ ಲೋಪವಿಲ್ಲದಂತೆ ನಡೆಸಲು ಸೂಚನೆ ನೀಡಿದರು.

ಬೆಂಗಳೂರು ನಗರ ನೀರು ಸರಬರಾಜು ಹಾಗೂ ಒಳಚರಂಡಿ‌ ಮಂಡಳಿ ಆಯುಕ್ತ ರಾಮ್ ಪ್ರಸಾದ್ ಮನೋಹರ್ ಅವರು ಕಾವೇರಿ ಆರತಿಯ ರೂಪುರೇಷು ಕುರಿತು ವಿವರಿಸಿದರು. ನಂತರ ಡಿಸಿಎಂ ಡಿಕೆಶಿ ಕಾವೇರಿ ಆರತಿ ಪೂರ್ವ ತಾಲೀಮು ಕುರಿತು ವೀಕ್ಷಣೆ ಮಾಡಿದರು.

ಈ ವೇಳೆ ಶಾಸಕರಾದ ರಮೇಶ ಬಂಡಿಸಿದ್ದೇಗೌಡ, ದಿನೇಶ್ ಗೂಳಿಗೌಡ, ಪಿ.ರವಿಕುಮಾರ್, ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

PREV

Recommended Stories

''44 ವರ್ಷದ ದುಡಿಮೆಗೆ ಸಚಿವಗಿರಿಯ ಪ್ರತಿಫಲ ಬಯಸಿದ್ದೇನೆ''
ವ್ಯಕ್ತಿತ್ವ ವಿಕಸನಕ್ಕೆ ಪ್ರತಿಭಾಕಾರಂಜಿ ಪೂರಕ