ಕೊಪ್ಪಳ:
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ನಾನು ಸಚಿವನಾಗಿದ್ದ ವೇಳೆ ಆಟಿಕೆ ಕ್ಲಸ್ಟರ್ ಭೂಮಿಪೂಜೆಗೆ ಆಗಮಿಸಿದ್ದ ಸಿಎಂ ಯಡಿಯೂರಪ್ಪ ಅವರ ಬಳಿ ಹಠ ಹಿಡಿದು ಕೊಪ್ಪಳ ವಿವಿ ಘೋಷಣೆ ಮಾಡಿಸಿದ್ದೆ. ಅದಕ್ಕೆ ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಸಚಿವ ಸಂಪುಟದಲ್ಲಿ ಅನುಮೋದನೆ ಪ್ರಾರಂಭಿಸಿ ಸಕಲ ಸೌಕರ್ಯ ಒದಗಿಸಲಾಗಿತ್ತು. ನಂತರ ಬಂದ ಸರ್ಕಾರ ಸೌಲಭ್ಯ ನೀಡಲು ನಿರ್ಲಕ್ಷ್ಯ ವಹಿಸಿತು. ಇದೀಗ ಅದನ್ನು ಮುಚ್ಚಲು ಹೊರಟಿರುವುದು ನೋವಿನ ಸಂಗತಿ. ಇದರ ವಿರುದ್ಧ ಪಕ್ಷದ ವತಿಯಿಂದ ಕೊಪ್ಪಳ ಸೇರಿದಂತೆ ರಾಜ್ಯಮಟ್ಟದಲ್ಲೂ ಹೋರಾಟ ಮಾಡಲಾಗುವುದು. ಈ ಕುರಿತು ಸದನದಲ್ಲೂ ನಮ್ಮ ನಾಯಕರು ಧ್ವನಿ ಎತ್ತುತ್ತಾರೆ ಎಂದು ಹೇಳಿದರು.ಹೆಚ್ಚು ಹೆಚ್ಚು ವಿವಿ ತೆರೆಯಬೇಕಾದ ಸರ್ಕಾರ ಏಕಕಾಲಕ್ಕೆ 9 ವಿವಿ ಮುಚ್ಚಲು ಮುಂದಾಗಿದ್ದು ಬೇಸರದ ಸಂಗತಿ ಎಂದರು.
ಬಿಜೆಪಿಯಲ್ಲಿ 18 ಗುಂಪುಗಳಾಗಿವೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿಕೆಗೆ ತಿರುಗೇಟು ನೀಡಿದ ಅವರು, ನಮ್ಮಲ್ಲಿ ಸಮಸ್ಯೆ ಇರುವುದು ನಿಜ. ಪಕ್ಷದ ಹೈಕಮಾಂಡ್ ಇದನ್ನು ಸರಿಪಡಿಸುತ್ತದೆ. ಆದರೆ, ಕಾಂಗ್ರೆಸ್ಸಿನಲ್ಲಿ 118 ಗುಂಪುಗಳಾಗಿವೆ. ತಮ್ಮ ಪಕ್ಷದಲ್ಲಿ ದಿನಕ್ಕೊಂದು ಹೇಳಿಕೆ ಬರುತ್ತಿವೆ. ಅದರ ಕುರಿತು ಅವರು ಹೇಳಲಿ, ನಮ್ಮ ಪಕ್ಷದಲ್ಲಿ ಆಗಿರುವ ಸಮಸ್ಯೆಯನ್ನು ಹೈಕಮಾಂಡ್ ಶೀಘ್ರದಲ್ಲಿ ಸರಿಪಡಿಸುತ್ತದೆ. ನಾನು ಸಹ ರಾಷ್ಟ್ರೀಯ ನಾಯಕರು ಸೇರಿದಂತೆ ಮೊದಲಾದವರ ಜತೆಗೆ ಮಾತನಾಡಿದ್ದು, ಅದನ್ನು ಬಹಿರಂಗವಾಗಿ ಹೇಳುವುದಿಲ್ಲ ಎಂದರು.
ಶಾಸಕರು ಹಾಗೂ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರೂ ಆಗಿರುವ ಬಸವರಾಜ ರಾಯರಡ್ಡಿ ಅವರಿಗೆ ಅಸ್ತಿತ್ವದ ಪ್ರಶ್ನೆ ಕಾಡುತ್ತಿದೆ. ಹೀಗಾಗಿ, ಸಹಕಾರ ಸಮಾವೇಶ ಮಾಡಿದ್ದಾರೆ. ರಾಯರಡ್ಡಿ ಅವರು ಮಾತೆತ್ತಿದರೆ ಕೋಟಿ ಕೋಟಿ ಎನ್ನುತ್ತಾರೆ. ವಿವಿಗೆ ಮಾತ್ರ ನಯಾ ಪೈಸೆ ನೀಡದೆ ರೀಲ್ ಬಿಡುತ್ತಾರೆ ಎಂದು ಕುಟುಕಿದರು.
ರಾಯರಡ್ಡಿ ಅವರು ನೀರು ತರಲಿಲ್ಲ, ಅಭಿವೃದ್ಧಿಯನ್ನು ಮಾಡಲಿಲ್ಲ. ಈಗ ಸಹಕಾರ ಸಮಾವೇಶ ಮಾಡಿ, ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ನಾನು, ಆರ್‌ಡಿಸಿಸಿ ಬ್ಯಾಂಕ್ ಅಧ್ಯಕ್ಷನಾಗಲು ರಾಯರಡ್ಡಿ ಅವರು ಯಾವುದೇ ಸಹಾಯ ಮಾಡಲಿಲ್ಲ. ಅವರು ಮೊದಲ ಬಾರಿಗೆ ಪ್ರಯತ್ನ ಮಾಡಿದಾಗ ಸೋಲಬೇಕಾಯಿತು. ಆದರೆ, ನಂತರ ನಾನು ಸ್ಥಳೀಯರ ಸಹಕಾರದಿಂದ ಮತ್ತು ಈಗ ಸಚಿವರಾಗಿರುವ ಎನ್.ಎಸ್. ಬೋಸರಾಜ ಅವರ ಬೆಂಬಲದಿಂದ ಅಧ್ಯಕ್ಷನಾಗಿ, ಮುಚ್ಚಿ ಹೋಗುವ ಸ್ಥಿತಿಯಲ್ಲಿದ್ದ ಆರ್ ಡಿಸಿಸಿ ಬ್ಯಾಂಕ್‌ನ್ನು ಸುಭದ್ರ ಬ್ಯಾಂಕ್ ಮಾಡಿದೆ. ನಬಾರ್ಡ್ ನವರು ಸಹ ಗುರುತಿಸಿ, ಗೌರವಿಸಿದರು ಎಂದರು.