ಕನ್ನಡಪ್ರಭ ವಾರ್ತೆ ಮಡಿಕೇರಿ
ಆದಿವಾಸಿ ಬುಡಕಟ್ಟು ಜನಾಂಗದ ರಕ್ಷಣೆಯೊಂದಿಗೆ ಆದಿವಾಸಿಗಳ ಆಚಾರ- ವಿಚಾರ, ಸಂಸ್ಕೃತಿ ಹಾಗೂ ಜೀವನ ಕ್ರಮಗಳ ಕುರಿತು ಬೆಳಕು ಚೆಲ್ಲುವ ಮೂಲಕ ಇಂದಿನ ಯುವ ಪೀಳಿಗೆಗೆ ಪರಿಚಯಿಸುವ ದಿಸೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಸಂಸ್ಥೆಯ ವತಿಯಿಂದ ಕೊಡಗು ಜಿಲ್ಲಾ ಸಂಸ್ಥೆಯ ಆಶ್ರಯದಲ್ಲಿ 2024ರ ಡಿಸೆಂಬರ್ ತಿಂಗಳಿನಲ್ಲಿ ರಾಜ್ಯಮಟ್ಟದ ಬುಡಕಟ್ಟು ಜನಾಂಗದ ವಿದ್ಯಾರ್ಥಿಗಳ ಸಮಾವೇಶ ಸಂಘಟಿಸಲು ನಿರ್ಧರಿಸಲಾಗಿದೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಕೊಡಗು ಜಿಲ್ಲಾ ಸಂಸ್ಥೆಯ ಪ್ರಧಾನ ಆಯುಕ್ತ ಕೆ.ಟಿ. ಬೇಬಿ ಮ್ಯಾಥ್ಯೂ ತಿಳಿಸಿದರು.ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕೊಡಗು ಜಿಲ್ಲಾ ಸಂಸ್ಥೆ ಮತ್ತು ಪೊನ್ನಂಪೇಟೆ ಸ್ಥಳೀಯ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಪೊನ್ನಂಪೇಟೆ ಸಮೀಪದ ತಿಮತಿ ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆಯಲ್ಲಿ ಇತ್ತೀಚೆಗೆ ಏರ್ಪಡಿಸಲಾಗಿದ್ದ ವಿಶ್ವ ಬುಡಕಟ್ಟು ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮೊದಲಿಗೆ ಬುಡಕಟ್ಟು ಜನಾಂಗದವರಿಂದಲೇ ಪ್ರಾರಂಭಗೊಂಡ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯು ಇಂದು ವಿಶ್ವದಾದ್ಯಂತ ಸಂಸ್ಥೆಯ ಚಟುವಟಿಕೆಗಳು ಪಸರಿಸಿವೆ. ಈ ದಿಸೆಯಲ್ಲಿ ಬುಡಕಟ್ಟು ಸಮುದಾಯದದವರ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಈ ಸಮಾವೇಶ ಸಹಕಾರಿಯಾಗಲಿದೆ ಎಂದರು.ಬುಡಕಟ್ಟು ದಿನಾಚರಣೆಯ ಮಹತ್ವ ಕುರಿತು ಮಾಹಿತಿ ನೀಡಿದ ಜಿಲ್ಲಾ ಸ್ಕೌಟ್ಸ್ ವಿಭಾಗದ ಆಯುಕ್ತ ಜಿಮ್ಮಿ ಸಿಕ್ವೇರಾ , ಕಾಡಂಚಿನಲ್ಲಿ ನೆಲಸಿ ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡುವ ಬುಡಕಟ್ಟು ಸಮುದಾಯದವರು ಪ್ರಕೃತಿ ಪ್ರಿಯರು. ವಿಶಿಷ್ಠ ಸಂಸ್ಕೃತಿ ಹೊಂದಿರುವ ಬುಡಕಟ್ಟು ಸಮುದಾಯದದವರ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಬೇಕಿದೆ ಎಂದರು.
ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಕಾಳೀಮಾಡ ಮೋಟಯ್ಯ ಮಾತನಾಡಿ, ಬುಡಕಟ್ಟು ಜನಾಂಗದವರು ಉತ್ತಮ ಶಿಕ್ಷಣ ಪಡೆದರೆ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದರು.ಸ್ಥಳೀಯ ಸಂಸ್ಥೆಯ ಉಪಾಧ್ಯಕ್ಷ ಜಿಮ್ಮಿ ಅಯ್ಯಣ್ಣ ಮಾತನಾಡಿ, ಬುಡಕಟ್ಟು ಜನಾಂಗದ ಆಚಾರ- ವಿಚಾರ, ಸಂಪ್ರದಾಯ, ಸಂಸ್ಕೃತಿ , ಆಹಾರ ಪದ್ಧತಿ ಹಾಗೂ ಜೀವನ ಕ್ರಮದ ಕುರಿತು ವಿವರಿಸಿದರು.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಜಿಲ್ಲಾ ಗೈಡ್ಸ್ ಸಂಸ್ಥೆಯ ಆಯುಕ್ತೆ ರಾಣಿ ಮಾಚಯ್ಯ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶಾಲೆಯ ಮುಖ್ಯ ಶಿಕ್ಷಕ ಸಿದ್ದಯ್ಯ ಶೆಟ್ಟಿ ದಿನದ ಮಹತ್ವದ ಕುರಿತು ಮಾಹಿತಿ ನೀಡಿದರು.ಸಂಸ್ಥೆಯ ಸಹ ಕಾರ್ಯದರ್ಶಿ ಬೊಳ್ಳಜಿರ ಬಿ.ಅಯ್ಯಪ್ಪ, ಜಿಲ್ಲಾ ತರಬೇತಿ ಆಯುಕ್ತ ಕೆ.ಯು. ರಂಜಿತ್, .ಗೈಡ್ಸ್ ನ ಜಿಲ್ಲಾ ಸಹಾಯಕ ಆಯುಕ್ತೆ ಸಿ..ಎಂ.ಸುಲೋಚನಾ ಇತರರು ಇದ್ದರು.
ಗೈಡ್ಸ್ ಶಿಕ್ಷಕಿ ಉಮಾ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕ ಧನು ಸ್ವಾಗತಿಸಿದರು. ಸಂಸ್ಥೆಯ ಜಿಲ್ಲಾ ಸಂಘಟಕಿ ಯು.ಸಿ.ದಮಯಂತಿ ವಂದಿಸಿದರು.ಗಮನ ಸೆಳೆದ ಸಾಂಸ್ಕೃತಿಕ ವೈಭವ:
ನಂತರ ಶಾಲೆಯ ಮಕ್ಕಳಿಂದ ರಾಷ್ಟ್ರೀಯ ಭಾವೈಕ್ಯತೆ, ಗ್ರಾಮೀಣ ಸಂಸ್ಕೃತಿ ಹಾಗೂ ಬುಡಕಟ್ಟು ಸಂಸ್ಕೃತಿ ಪ್ರತಿಬಿಂಬಿಸುವ ಕುರಿತು ಏರ್ಪಡಿಸಿದ್ದ ಸಾಂಸ್ಕೃತಿಕ ವೈಭವ ಪ್ರೇಕ್ಷಕರ ಗಮನ ಸೆಳೆಯಿತು. ಮಕ್ಕಳು ವಿವಿಧ ವೇಷಭೂಷಣಗಳನ್ನು ಧರಿಸಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು.ಕಾರ್ಯಕ್ರಮದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ನ ಸ್ವಯಂ ಸೇವಕರು, ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಭಾಗವಹಿಸಿದ್ದರು.