ಬಳ್ಳಾರಿ: ಮಾರ್ಚ್ ಮೊದಲ ವಾರದಲ್ಲಿ ಬಳ್ಳಾರಿಯಲ್ಲಿ ರಾಜ್ಯಮಟ್ಟದ ‘ಬುಡಕಟ್ಟು ಉತ್ಸವ’ ಆಯೋಜಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಪ್ರಶಾಂತಕುಮಾರ್ ಮಿಶ್ರಾ ಹೇಳಿದರು.
ರಾಜ್ಯಮಟ್ಟದ ಬುಡಕಟ್ಟು ಉತ್ಸವವನ್ನು ಬಳ್ಳಾರಿಯಲ್ಲಿ ಆಯೋಜಿಸುವ ಕುರಿತು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಬುಡಕಟ್ಟು ಸಮುದಾಯದ ಭಾಷೆ, ಕಲೆ, ಸಂಸ್ಕೃತಿ, ಆಚಾರ-ವಿಚಾರ ಮತ್ತು ಉಡುಗೆ-ತೊಡುಗೆ ಬಿಂಬಿಸಲು ಅದ್ಧೂರಿ ಕಾರ್ಯಕ್ರಮ ಆಯೋಜನೆಗೆ ಸಕಲ-ಸಿದ್ಧತೆ ಮಾಡಿಕೊಳ್ಳಬೇಕು. 2024-25ನೇ ಸಾಲಿನ ಪರಿಷ್ಟ ಪಂಗಡ ಉಪಯೋಜನೆಯಡಿ ರಾಜ್ಯ ಮಟ್ಟದ ಬುಡಕಟ್ಟು ಉತ್ಸವ ಕಾರ್ಯಕ್ರಮವನ್ನು ಬಳ್ಳಾರಿಯಲ್ಲಿ ಆಯೋಜಿಸಲು ರಾಜ್ಯ ಸರ್ಕಾರವು ತೀರ್ಮಾನಿಸಿದೆ. ಕಾರ್ಯಕ್ರಮ ಯಶಸ್ವಿಗೊಳಿಸಲು ರೂಪು-ರೇಷೆ ಕೈಗೊಳ್ಳಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಬಳ್ಳಾರಿಯಲ್ಲಿ ಮೊಟ್ಟ-ಮೊದಲ ಬಾರಿಗೆ ಆಯೋಜಿಸಲಾಗುತ್ತಿರುವ ಒಂದು ದಿನದ ರಾಜ್ಯ ಮಟ್ಟದ ‘ಬುಡಕಟ್ಟು ಉತ್ಸವ’ದ ಸ್ಥಳ ಮತ್ತು ದಿನ ನಿಗದಿಪಡಿಸುವ ಕುರಿತು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ ಅಂತಿಮಗೊಳಿಸಲಾಗುವುದು. ಇದಕ್ಕೆ ಬೇಕಾದ ಎಲ್ಲ ರೀತಿಯ ಸಲಹೆ-ಸೂಚನೆ ಬುಡಕಟ್ಟು ಸಮುದಾಯದ ಮುಖಂಡರಿಂದ ಪಡೆಯಬೇಕು ಎಂದು ತಿಳಿಸಿದರು.ರಾಜ್ಯ ಮಟ್ಟದ ಕಾರ್ಯಕ್ರಮವಾಗಿರುವುದರಿಂದ ರಾಜ್ಯದ ವಿವಿಧೆಡೆಯಿಂದ 600ಕ್ಕೂ ಹೆಚ್ಚು ಕಲಾವಿದರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ತಂಗಲು ಉಟ-ವಸತಿ ವ್ಯವಸ್ಥೆ, ವಾಹನ ವ್ಯವಸ್ಥೆ ಕೈಗೊಳ್ಳಲು ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳನ್ನೊಳಗೊಂಡ ಸಮಿತಿ ರಚಿಸಬೇಕು ಎಂದು ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.
ಜಿಲ್ಲೆಯ ವಿವಿಧ ಪರಿಶಿಷ್ಟ ವರ್ಗಗಳ ವಸತಿ ನಿಲಯ ಮತ್ತು ಶಾಲಾ-ಕಾಲೇಜು ವಿದ್ಯಾರ್ಥಿಗಳು ಸಹ ಭಾಗವಹಿಸಲು ಬುಡಕಟ್ಟು ಸಮುದಾಯದ ಕುರಿತಾಗಿ ಕವಿತೆಗಳು, ಕಾವ್ಯ, ಚಿತ್ರಕಲೆ, ಪ್ರಬಂಧ ಸ್ಪರ್ಧೆ ಆಯೋಜಿಸಬೇಕು. ಕಾರ್ಯಕ್ರಮದಲ್ಲಿ ಬಹುಮಾನ, ಪ್ರಮಾಣಪತ್ರ ವಿತರಿಸಬೇಕು ಎಂದು ತಿಳಿಸಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಬೆಂಗಳೂರು ವಲಯ ಜಂಟಿ ನಿರ್ದೇಶಕ ಅಶೋಕ ಛಲವಾದಿ ಮಾತನಾಡಿ, ಬುಡಕಟ್ಟು ಉತ್ಸವವು ಪರಿಶಿಷ್ಟ ಪಂಗಡದ ವಿವಿಧ ಬುಡಕಟ್ಟು ಸಮುದಾಯದ ಕಲಾವಿದರಿಗೆ ಅವರ ಸಾಹಿತ್ಯ, ಕಲೆ ಪ್ರದರ್ಶಿಸಲು ವೇದಿಕೆ ಕಲ್ಪಿಸಿಕೊಡುವುದು ಇದರ ಮುಖ್ಯ ಉದ್ದೇಶವಾಗಿದೆ. ಸಮುದಾಯದಲ್ಲಿ ಕವಿಗಳು, ಜಾನಪದ, ನೃತ್ಯ, ಸಂಗೀತ, ಚಿತ್ರ ಕಲಾವಿದರು, ಶಿಲ್ಪೆ ಕಲಾವಿದರು ಇದ್ದು, ಅವರಿಗೂ ಅವಕಾಶ ಕಲ್ಪಿಸಲಾಗುವುದು ಎಂದರು.
ಸಭೆಯಲ್ಲಿ ಭಾಗವಹಿಸಿದ್ದ ಬುಡಕಟ್ಟು ಸಮುದಾಯದ ಮುಖಂಡರು ಮಾತನಾಡಿ, ಜಿಲ್ಲೆಯ ಐದು ತಾಲೂಕುಗಳನ್ನೊಳಗೊಂಡ ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡಬೇಕು. ಮುಖ್ಯವಾಗಿ ಅಳಿವಿನಂಚಿನಲ್ಲಿರುವ ಬುಡಕಟ್ಟು ನೆಲೆಗಳನ್ನು ಬಿಂಬಿಸುವಂತಹ ಜನಮಾನಸ ಕಾರ್ಯಕ್ರಮವಾಗಬೇಕು. ಬುಡಕಟ್ಟು ಸಮುದಾಯದ ವೇಷ-ಭೂಷಣ ಪ್ರದರ್ಶಿಸಲು ವಸ್ತು-ಪ್ರದರ್ಶನ ಮಳಿಗೆ ಹಾಕಬೇಕು ಎಂದು ಸಭೆಗೆ ತಿಳಿಸಿದರು.ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನವೀನಕುಮಾರ್, ಕನ್ನಡ-ಸಂಸ್ಕೃತಿ ಇಲಾಖೆಯ ಕಲಬುರಗಿ ವಲಯ ಜಂಟಿ ನಿರ್ದೇಶಕ ಬಸವರಾಜ ಹೂಗಾರ, ಅಧಿಕಾರಿಗಳಾದ ಬಿ.ನಾಗರಾಜ, ಮಲ್ಲಿಕಾರ್ಜುನ, ದಿವಾಕರ, ವಿಜಯಕುಮಾರ್ ಮತ್ತಿತರರಿದ್ದರು.