ಪವನ ವಿದ್ಯುತ್‌ ಉತ್ಪಾದನೆಯಲ್ಲಿ ರಾಜ್ಯ ನಂ.1

KannadaprabhaNewsNetwork |  
Published : Jun 16, 2025, 04:57 AM ISTUpdated : Jun 16, 2025, 05:15 AM IST
Wind Energy

ಸಾರಾಂಶ

2024-25ನೇ ಸಾಲಿನಲ್ಲಿ ಪವನ ವಿದ್ಯುತ್‌ ಕ್ಷೇತ್ರಕ್ಕೆ 1331.48 ಮೆ.ವ್ಯಾ. ಉತ್ಪಾದನಾ ಸಾಮರ್ಥ್ಯ ಸೇರ್ಪಡೆಗೊಳಿಸುವ ಮೂಲಕ ದೇಶದಲ್ಲೇ ರಾಜ್ಯ ಪ್ರಥಮ ಸ್ಥಾನದಲ್ಲಿದ್ದು, ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.

 ಬೆಂಗಳೂರು :  2024-25ನೇ ಸಾಲಿನಲ್ಲಿ ಪವನ ವಿದ್ಯುತ್‌ ಕ್ಷೇತ್ರಕ್ಕೆ 1331.48 ಮೆ.ವ್ಯಾ. ಉತ್ಪಾದನಾ ಸಾಮರ್ಥ್ಯ ಸೇರ್ಪಡೆಗೊಳಿಸುವ ಮೂಲಕ ದೇಶದಲ್ಲೇ ರಾಜ್ಯ ಪ್ರಥಮ ಸ್ಥಾನದಲ್ಲಿದ್ದು, ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.

ಬೆಂಗಳೂರಿನಲ್ಲಿ ಭಾನುವಾರ ಆಯೋಜಿಸಿದ್ದ  'ಗ್ಲೋಬಲ್ ವಿಂಡ್ ಡೇ-2025’ ಪವನ್-ಊರ್ಜಾ: ಪವರಿಂಗ್‌ ದಿ ಫ್ಯೂಚರ್ ಆಫ್ ಇಂಡಿಯಾ’ ಸಮಾರಂಭದಲ್ಲಿ ಕೇಂದ್ರ ನವ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್‌ ಜೋಶಿ ಅವರು ರಾಜ್ಯ ಇಂಧನ ಸಚಿವ ಕೆ.ಜೆ.ಜಾರ್ಜ್‌ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ಕರ್ನಾಟಕ ಮೊದಲ ಸ್ಥಾನದಲ್ಲಿದ್ದರೆ, 1136.37 ಮೆ.ವ್ಯಾ. ಸಾಮರ್ಥ್ಯ ಸೇರ್ಪಡೆಗೊಳಿಸಿ ತಮಿಳುನಾಡು ಎರಡನೇ ಸ್ಥಾನದಲ್ಲಿದೆ. 954.74 ಮೆ.ವ್ಯಾ. ಸೇರ್ಪಡೆಗೊಳಿಸಿರುವ ಗುಜರಾತ್‌ ಮೂರನೇ ಸ್ಥಾನದಲ್ಲಿದೆ. ಕಳೆದ ಸಾಲಲ್ಲಿ ಗುಜರಾತ್‌, ಕರ್ನಾಟಕ ಹಾಗೂ ತಮಿಳುನಾಡು ಕ್ರಮವಾಗಿ ಮೊದಲ, ದ್ವಿತೀಯ ಮತ್ತು ಮೂರನೇ ಸ್ಥಾನದಲ್ಲಿತ್ತು. ಪ್ರಸಕ್ತ ಸಾಲಿನಲ್ಲಿ ಕರ್ನಾಟಕ ಅಗ್ರ ಸ್ಥಾನಕ್ಕೇರಿದೆ.

ಈ ಬಗ್ಗೆ ಮಾತನಾಡಿದ ಇಂಧನ ಸಚಿವ ಕೆ.ಜೆ.ಜಾರ್ಜ್‌, 2025ರ ಮೇ ವೇಳೆಗೆ ಪವನ ವಿದ್ಯುತ್‌ ಸ್ಥಾಪಿತ ಸಾಮರ್ಥ್ಯ 7,351 ಮೆಗಾವ್ಯಾಟ್‌ನಷ್ಟಿತ್ತು. ಕಳೆದ ಆರ್ಥಿಕ ಸಾಲಿನಲ್ಲಿ 1,331 ಮೆಗಾವ್ಯಾಟ್‌ಗಳನ್ನು ಸೇರ್ಪಡೆಗೊಳಿಸಿ ದೇಶದಲ್ಲಿ ಅಗ್ರ ಸ್ಥಾನದಲ್ಲಿದ್ದೇವೆ. ಇದು ಕೇವಲ ಅಂಕಿ-ಅಂಶವಲ್ಲ ನಮ್ಮ ಬದ್ಧತೆ. ರಾಜ್ಯದ ಕೈಗಾರಿಕೆಗಳಿಗೆ, ನಮ್ಮ ರೈತರಿಗೆ, ಮನೆಗಳಿಗೆ ಶುದ್ಧ ಇಂಧನ ಒದಗಿಸುವ ಇಚ್ಛಾ ಶಕ್ತಿಯಾಗಿದೆ ಎಂದು ಹೇಳಿದರು.

ಹನುಮನ ನಾಡಿನಲ್ಲಿ ಸಾಧನೆ-ಜೋಶಿ:

ಕೇಂದ್ರ ಸಚಿವ ಜೋಶಿ ಮಾತನಾಡಿ, ಕರ್ನಾಟಕದವನಾಗಿ ರಾಜ್ಯ ಪವನ ವಿದ್ಯುತ್‌ ಕ್ಷೇತ್ರದಲ್ಲಿ ಮಾಡಿರುವ ಸಾಧನೆ ಬಗ್ಗೆ ಅಪಾರ ಹೆಮ್ಮೆ ಇದೆ. ಇದು ವಾಯುಪುತ್ರ ಹನುಮನ ಜನ್ಮ ಭೂಮಿ. ಇಲ್ಲಿ ವಿಶ್ವ ಪವನ ದಿನ ಆಚರಿಸುತ್ತಿರುವುದು ಅರ್ಥಪೂರ್ಣವಾಗಿದೆ ಎಂದರು.

ಪವನ ವಿದ್ಯುತ್ ಸಾಮರ್ಥ್ಯದಲ್ಲಿ ಭಾರತ ಜಾಗತಿಕವಾಗಿ ನಾಲ್ಕನೇ ಸ್ಥಾನದಲ್ಲಿದ್ದು, 51.5 ಗಿಗಾವ್ಯಾಟ್‌ ಉತ್ಪಾದನಾ ಸಾಮರ್ಥ್ಯದ ಘಟಕಗಳನ್ನು ಈಗಾಗಲೇ ಸ್ಥಾಪಿಸಲಾಗಿದೆ. 2030ರ ವೇಳೆಗೆ ಒಟ್ಟಾರೆ ವಿದ್ಯುತ್‌ ಉತ್ಪಾದನೆಯಲ್ಲಿ ನವೀಕರಿಸಬಹುದಾದ ಇಂಧನದ ಪಾಲು ಶೇ.50ಕ್ಕೆ ಏರಿಸುವ ಜತೆಗೆ 2070ರ ವೇಳೆಗೆ ಇಂಗಾಲದ ಹೊರಸೂಸುವಿಕೆ ನಿವ್ವಳ ಶೂನ್ಯದ ಗುರಿ ಸಾಧಿಸಬೇಕಿದೆ. ಈ ನಿಟ್ಟಿನಲ್ಲಿ ಪವನ ವಿದ್ಯುತ್‌ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ಹೇಳಿದರು.

ಸಂಗ್ರಹಣೆಗೆ ಒತ್ತು ಅಗತ್ಯ:

ದಿನದ 24 ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಮತ್ತು ಗ್ರಿಡ್ ಸ್ಥಿರತೆ ಕಾಯ್ದುಕೊಳ್ಳಲು ಸೌರ ಹಾಗೂ ಪವನ ವಿದ್ಯುತ್ ಉತ್ಪಾದನೆ ಜತೆಗೆ ಸಂಗ್ರಹಣಾ ಸಾಮರ್ಥ್ಯ ಹೆಚ್ಚಿಸಬೇಕು. ವಿದ್ಯುತ್‌ ದರ ಸ್ಪರ್ಧಾತ್ಮಕವಾಗಿರಬೇಕು ಹಾಗೂ ದೇಶೀಯ ಉತ್ಪಾದನೆಯಲ್ಲದೆ ರಫ್ತು ಹೆಚ್ಚಳಕ್ಕೂ ಆದ್ಯತೆ ನೀಡಬೇಕು ಎಂದು ಜೋಶಿ ಹೇಳಿದರು.

ನವ ಮತ್ತು ನವೀಕರಿಸಬಹುದಾದ ಇಂಧನ ಇಲಾಖೆಯ ರಾಜ್ಯ ಸಚಿವರಾದ ಶ್ರೀಪಾದ್ ಯೆಸ್ಸೋ ನಾಯಕ್, ಕಾರ್ಯದರ್ಶಿ ಸಂತೋಷ್‌ ಕುಮಾರ್ ಸಾರಂಗಿ, ರಾಜ್ಯ ಇಂಧನ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಗೌರವ್‌ ಗುಪ್ತ, ಕ್ರೆಡಲ್‌ ಅಧ್ಯಕ್ಷ ಟಿ.ಡಿ.ರಾಜೇಗೌಡ, ಕ್ರೆಡಲ್‌ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ.ರುದ್ರಪ್ಪಯ್ಯ ಹಾಜರಿದ್ದರು.

PREV
Read more Articles on

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...