ಭಟ್ಕಳ: ಉತ್ತರ ಕನ್ನಡ ಜಿಲ್ಲೆ ಅಭಿವೃದ್ಧಿಯಲ್ಲಿ ಹಿಂದುಳಿದಿದ್ದು, ಕಳೆದ 30 ವರ್ಷಗಳಿಂದ ಇಲ್ಲಿ ಸಂಸದರಾದವರು ಜಿಲ್ಲೆಯ ಅಭಿವೃದ್ಧಿಗೆ ಸ್ಪಂದಿಸಿಲ್ಲ. ಬಿಜೆಪಿ ಅಭಿವೃದ್ಧಿಯ ಹೆಸರಿನಲ್ಲಿ ಮತ ಕೇಳದೇ ಎಲ್ಲೆಡೆ ಮೋದಿ ಹೆಸರಿನಲ್ಲಿ ಮತ ಯಾಚಿಸುವ ಪರಿಸ್ಥಿತಿ ಬಂದಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಹಾಗೂ ವಕ್ತಾರ ಐವಾನ್ ಡಿಸೋಜ ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕನ್ನಡ ಸೇರಿದಂತೆ ಕರಾವಳಿ ಭಾಗದಲ್ಲಿ ಈ ಬಾರಿ ಕಾಂಗ್ರೆಸ್ ಪರ ಒಲವು ಇದೆ. ರಾಜ್ಯದಲ್ಲಿ ಕಾಂಗ್ರೆಸ್ 20ಕ್ಕೂ ಅಧಿಕ ಸ್ಥಾನವನ್ನು ಗೆಲ್ಲಲಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ 30 ವರ್ಷಗಳಿಂದ ಅಭಿವೃದ್ಧಿ ಆಗಿಲ್ಲ. ಜಿಲ್ಲೆಯಲ್ಲಿ ಅತಿಕ್ರಮಣ ಸಮಸ್ಯೆ, ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಪ್ರವಾಸೋದ್ಯಮ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳು ಆಗಬೇಕಿದೆ. ಹೀಗಾಗಿ ಈ ಬಾರಿ ಜನತೆ ಇಲ್ಲಿ ಬದಲಾವಣೆ ಬಯಸಿದ್ದಾರೆ ಎಂದ ಅವರು, ಬಿಜೆಪಿ ಕೋಮುಗಲಭೆ ಗಲಭೆ, ಜಾತಿ, ಧರ್ಮದ ಹೆಸರಿನಲ್ಲಿ ವಿಷಬೀಜ ಬಿತ್ತಿ ರಾಜಕಾರಣ ಮಾಡುತ್ತಿದೆ. ಈ ಚುನಾವಣೆಯಲ್ಲಿ ಈ ಪಕ್ಷಕ್ಕೆ ಜನರು ತಕ್ಕ ಪಾಠ ಕಲಿಸಿ ಅಧಿಕಾರದಿಂದ ಕೆಳಗಿಳಿಸಲಿದ್ದಾರೆ ಎಂದರು.ಪ್ರಧಾನಿ ನರೇಂದ್ರ ಮೋದಿ ಅವರು ಸೋಲುವ ಭಯದಿಂದ ಹತಾಶರಾಗಿ ದ್ವೇಷದ ಭಾಷಣ ಮಾಡುತ್ತಿದ್ದಾರೆ. ಇವರು ತಮ್ಮಲ್ಲಿರುವ ಎಲ್ಲ ಅಸ್ತ್ರವೂ ಮುಗಿಯಿತು ಎಂದು ಇದೀಗ ಅಲ್ಪಸಂಖ್ಯಾತರ ಬಗ್ಗೆ ವಿರೋಧಿ ಭಾಷಣ ಮಾಡಿ ದ್ವೇಷ ಮೂಡಿಸುತ್ತಿದ್ದಾರೆ. ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿರುವವರ ಬಾಯಲ್ಲಿ ಇಂತಹ ದ್ವೇಷದ ಮಾತು ಸರಿಯೇ ಎಂದು ಪ್ರಶ್ನಿಸಿದ ಅವರು, ಇದು ಸೋಲುವ ಭಯದಿಂದ ಆಡುತ್ತಿರುವ ಹತಾಶದ ಮಾತಾಗಿದೆ. ಎಂದರು.
ಪೆನ್ ಡ್ರೈವ್ ಕೇಸಿನಲ್ಲಿ ಪ್ರಕರಣ ದಾಖಲಾಗಿರುವ ಪ್ರಜ್ವಲ್ ರೇವಣ್ನ ಮೇಲೆ ಸೂಕ್ತ ಕಾನೂನು ಕ್ರಮ ಆಗಬೇಕು. ಹಾಸನದಲ್ಲಿ ಯಾವುದೇ ಕಾರಣಕ್ಕೂ ಪ್ರಜ್ವಲ್ ರೇವಣ್ಣ ಈ ಬಾರಿ ಗೆಲ್ಲವುದಿಲ್ಲ ಎಂದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ರಾಮಾ ಮೊಗೇರ, ಮುಖಂಡರಾದ ಅಬ್ಬಾಸ್ ತೋನ್ಸೆ, ರಾಜ್ಯ ಅಲ್ಪಸಂಖ್ಯಾತರ ವಿಭಾಗದ ಉಪಾಧ್ಯಕ್ಷ ಇಮ್ರಾನ್, ಕಿಸಾನ್ ಸೆಲ್ ನ ನಾರಾಯಣ ನಾಯ್ಕ, ವಿಠಲ ನಾಯ್ಕ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುರೇಶ ನಾಯ್ಕ, ರಮೇಶ ನಾಯ್ಕ, ದುರ್ಗಾದಾಸ ಮೊಗೇರ ಮುಂತಾದವರಿದ್ದರು.